ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ
ಅಪಾರ ಜ್ಞಾನ ಹೊಂದಿರುವ ಗ್ರಾಮೀಣ ವಿದ್ಯಾರ್ಥಿಗಳ ಪ್ರತಿಭೆಗೆ ಅನುಗುಣವಾಗಿ ತರಬೇತಿ ನೀಡಿದರೆ ಯಶಸ್ಸು ಸಾಧಿಸುವುದರಲ್ಲಿ ಸಂಶಯವಿಲ್ಲ ಎಂದು ಬೊಪ್ಪೇಗೌಡನಪುರ ಮಂಟೇಸ್ವಾಮಿ ಮಠದ ಆಡಳಿತಾಧಿಕಾರಿ ಭರತ್‌ಅರಸ್ ತಿಳಿಸಿದರು.ಪಟ್ಟಣದ ತ್ಯಾಗರಾಜರಸ್ತೆಯ ಮಳವಳ್ಳಿ ಒನ್ ಕಂಪ್ಯೂಟರ್ ಕೇಂದ್ರದ ಆವರಣದಲ್ಲಿ ಯೂನಿವರ್ಸಲ್ ಸೇವಾ ಟ್ರಸ್ಟ್ ವತಿಯಿಂದ ನವೋದಯ, ಎನ್‌ಎಂಎಂಎಸ್ ಹಾಗೂ 9 ಮತ್ತು 10 ನೇ ತರಗತಿ ವಿದ್ಯಾರ್ಥಿಗಳಿಗೆ ಗಣಿತ ಹಾಗೂ ವಿಜ್ಞಾನ ವಿಷಯಗಳ ತರಬೇತಿ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳ ಪ್ರತಿಭೆಯನ್ನು ಹೊರತರಲು ಪ್ರೋತ್ಸಾಹ ಆಗತ್ಯವಿದೆ. ಯೂನಿವರ್ಸಲ್ ಸೇವಾ ಟ್ರಸ್ಟ್ ವತಿಯಿಂದ ಹಳ್ಳಿಗಾಡಿನ ವಿದ್ಯಾರ್ಥಿಗಳಿಗೆ ತರಬೇತಿ ಅವಕಾಶ ಕಲ್ಪಿಸಿಕೊಟ್ಟಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.ಶಿಕ್ಷಣ ಜ್ಞಾನದ ಸಂಕೇತ. ಎಷ್ಟು ಓದಿದರೂ ಮುಗಿಯದ ಅಧ್ಯಾಯ. ಬೆಳೆದ ಮರ ಸಾವಿರಾರು ಮಂದಿಗೆ ಆಶ್ರಯ ನೀಡುವ ರೀತಿಯಲ್ಲಿ ವಿದ್ಯಾರ್ಥಿಗಳು ಭವಿಷತ್‌ನ ಉತ್ತಮ ಪ್ರಜೆಯಾಗಿ ನಿಮ್ಮಿಂದಾಗುವ ಸಹಾಯವನ್ನು ಸಮಾಜಕ್ಕೆ ನೀಡಬೇಕು. ಶಿಸ್ತುಮತ್ತು ಗುರಿ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ತಂದೆ ತಾಯಿ ಆಸೆ ಈಡೇರಿಸುವಂತಾಗಬೇಕು ಎಂದರು.
ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಎಂ.ಬಿ.ಮಲ್ಲಯ್ಯ ಮಾತನಾಡಿ, ಸರ್ಕಾರ ನೀಡುವ ವಿದ್ಯಾರ್ಥಿ ವೇತನ ಪಡೆಯುವ ಅರ್ಹತೆ ಹೊಂದಲು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಯೂನಿವರ್ಸಲ್ ಸೇವಾ ಟ್ರಸ್ಟ್‌ನಿಂದ ಉಚಿತವಾಗಿ ತರಬೇತಿ ನೀಡುವುದು ಅಪರೂಪದ ಸೇವೆಯಾಗಿದೆ ಎಂದರು.ತಾಲೂಕಿನ ಶಿಕ್ಷಣ ಕ್ಷೇತ್ರದಲ್ಲಿ ತಳಗವಾದಿ ಪ್ರಕಾಶ್ ತಮ್ಮದೇ ಆದ ಕಾಣಿಕೆ ನೀಡುತ್ತಾ ಬರುತ್ತಿದ್ದಾರೆ. ಪರೀಕ್ಷೆಗಳನ್ನು ಎದುರಿಸಲು ಪೂರ್ವಭಾವಿಯಾಗಿ ನಡೆಸುತ್ತಿರುವ ತರಬೇತಿ ಶಿಬಿರ ವಿದ್ಯಾರ್ಥಿಗಳ ಭವಿಷ್ಯ ಉತ್ತಮಗೊಳಿಸುವಲ್ಲಿ ಸಹಕಾರಿಯಾಗಿದೆ ಎಂದರು.
ಯೂನಿವರ್ಸಲ್ ಸೇವಾ ಟ್ರಸ್ಟ್ ಕಾರ್ಯದರ್ಶಿ ಟಿ.ಎಂ.ಪ್ರಕಾಶ್ ಮಾತನಾಡಿ, ಸರ್ಕಾರಿ ಶಾಲೆಗಳನ್ನು ಬಲವರ್ಧನೆಗೊಳಿಸುವುದು ಹಾಗೂ ವಿದ್ಯಾರ್ಥಿಗಳ ಭವಿಷ್ಯ ಉತ್ತಮಗೊಳಿಸುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ಶಿಬಿರ ಆಯೋಜನೆ ಮಾಡಲಾಗುತ್ತಿದೆ ಎಂದರು.ಹಿಂದಿನ ಅವಧಿಯಲ್ಲಿ ಎನ್‌ಎಂಎಂಎಸ್ ಪರೀಕ್ಷೆ ಹಾಗೂ ಎಸ್‌ಎಸ್‌ಎಲ್‌ಸಿ ಮರು ಪರೀಕ್ಷೆಯಲ್ಲಿ ರಾಜ್ಯದಲ್ಲಿಯೇ ಹೆಚ್ಚು ಉತ್ತೀರ್ಣರಾಗಿರುವುದು ಸಲ್ಲಿಸಿದ ಸೇವೆ ಹಿಡಿದ ಕೈಗನ್ನಡಿಯಾಗಿದೆ. ಟ್ರಸ್ಟ್‌ನಿಂದ ಮುಂದಿನ ದಿನಗಳಲ್ಲಿ ಕ್ರೀಡೆ, ಸಾಂಸ್ಕೃತಿಕ ಸೇರಿದಂತೆ ವಿದ್ಯಾರ್ಥಿಗಳ ಆಸಕ್ತಿಗೆ ಅನುಗುಣವಾಗಿ ತರಬೇತಿ ನೀಡಲು ಆಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಕಾಯಕ್ರಮದಲ್ಲಿ ಶಿಕ್ಷಕರ ರತ್ನ ಪ್ರಶಸ್ತಿ ಪುರಸ್ಕೃತ ಎಂ.ಸಿ.ವಿವೇಕನಂದ, ಶಿಕ್ಷಕ ಚುಂಚಣ್ಣ ಸೇರಿದಂತೆ ಇತರರು ಇದ್ದರು.