ಕೊರಟಗೆರೆಯಲ್ಲಿ ಆಟದ ಮೈದಾನವಿಲ್ಲದೇ ಸೊರಗುತ್ತಿರುವ ಗ್ರಾಮೀಣ ಪ್ರತಿಭೆಗಳು

| Published : Nov 15 2024, 12:37 AM IST

ಸಾರಾಂಶ

ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಕ್ರೀಡೆಯಲ್ಲಿ ಭಾಗವಹಿಸಲು ಕೊರಟಗೆರೆಯಲ್ಲಿ ಆಟದ ಮೈದಾನ ಇಲ್ಲದೆ ಎಷ್ಟೋ ಪ್ರತಿಭೆಗಳು ಅಧಿಕಾರಿಗಳ ನಿರ್ಲಕ್ಷ್ಯದಿಂದ ಎಲೆಮರೆ ಕಾಯಿಯಂತೆ ಕಣ್ಮರೆಯಾಗುತ್ತಿದ್ದಾರೆ.

ಎಚ್.ಎನ್.ನಾಗರಾಜು

ಕನ್ನಡಪ್ರಭ ವಾರ್ತೆ ಕೊರಟಗೆರೆ

ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಕ್ರೀಡೆಯಲ್ಲಿ ಭಾಗವಹಿಸಲು ಆಟದ ಮೈದಾನ ಇಲ್ಲದೆ ಎಷ್ಟೋ ಪ್ರತಿಭೆಗಳು ಅಧಿಕಾರಿಗಳ ನಿರ್ಲಕ್ಷ್ಯದಿಂದ ಎಲೆಮರೆ ಕಾಯಿಯಂತೆ ಕಣ್ಮರೆಯಾಗುತ್ತಿದ್ದಾರೆ. ತಾಲೂಕಿನ ಕೋಳಾಲ ಹೋಬಳಿಯ ವಜ್ಜನಕುರಿಕೆ ಗ್ರಾಪಂ ಮಟ್ಟದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ವಿದ್ಯಾರ್ಥಿಗೆ ಆಟದ ಮೈದಾನ ಇಲ್ಲದಿದ್ದರೂ ಶಿವಮೊಗ್ಗದಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಆಯ್ಕೆಯಾಗಿರುವುದು ಸಂತಸದ ವಿಷಯವಾಗಿದೆ. ಆದರೆ ತಾಲೂಕಿನ ಅನೇಕ ಸರ್ಕಾರಿ ಶಾಲೆಗಳಲ್ಲಿ ಆಟದ ಮೈದಾನ ಇಲ್ಲದೆ ಎಷ್ಟೋ ಕ್ರೀಡಾ ವಿದ್ಯಾರ್ಥಿಗಳು ಗ್ರಾಮೀಣ ಭಾಗದಲ್ಲಿ ಉಳಿದಿರುವುದು ವಿಷಾದನೀಯ ಸಂಗತಿಯಾಗಿದೆ.ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕ್ರೀಡೆ ಮತ್ತು ದೈಹಿಕ ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡಲಾಗಿದೆ. ದೈಹಿಕ ಶಿಕ್ಷಣ ಮಕ್ಕಳ ಕಲಿಕೆಗೆ ಅವಶ್ಯಕವಾಗಿದ್ದು, ಎಷ್ಟೋ ಶಾಲೆಗಳಲ್ಲಿ ಆಟದ ಮೈದಾನಗಳಿಲ್ಲದೆ ವಿದ್ಯಾರ್ಥಿಗಳ ದೈಹಿಕವಾಗಿ, ಮಾನಸಿಕವಾಗಿ ಮತ್ತು ಬೌದ್ದಿಕ ಬೆಳವಣಿಗೆಗೆ ಬಹುದೊಡ್ಡ ಹೊಡೆತ ಬಿದ್ದಂತಾಗುತ್ತದೆ. ತಾಲೂಕಿಗೆ ಬರುವ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆಯ ಕಟ್ಟಡ ನಿರ್ವಹಣೆ ಮಾಡುವುದರ ಜೊತೆಗೆ ಯಾವ ಶಾಲೆಗಳಲ್ಲಿ ಆಟದ ಮೈದಾನ ಇಲ್ಲ ಅಂತಹ ಶಾಲೆಗಳಿಗೆ ಕಂದಾಯ ಇಲಾಖೆ ಹಾಗೂ ಗ್ರಾಪಂ ಅಧಿಕಾರಿಗಳ ಸಹಕಾರ ಪಡೆದು ಆಟದ ಮೈದಾನ ಭೂಮಿ ಗುರುತಿಸಬಹುದು ಆದರೆ ಇಂತಹ ಇಚ್ಛಾ ಶಕ್ತಿ ಕೊರತೆ ಉಂಟಾಗಿದೆ.ವಜ್ಜನಕುರಿಕೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಕುಶಾಲ್ ಎನ್ನವ ೭ನೇ ತರಗತಿ ವಿದ್ಯಾರ್ಥಿ ತುಮಕೂರು ಜಿಲ್ಲೆಯ ಸಿರಾದಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಪಡೆದು ಶಿವಮೊಗ್ಗದಲ್ಲಿ ನಡೆಯುವ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಈ ಶಾಲೆಯಲ್ಲಿ ಆಟದ ಮೈದಾನ ಇಲ್ಲದಿದ್ದರೂ ಈ ವಿದ್ಯಾರ್ಥಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದು, ಇಂತಹ ಪ್ರತಿಭೆಯನ್ನ ಪ್ರೋತ್ಸಹಿಸಿದಲ್ಲಿ ಉತ್ತಮ ಕ್ರೀಡಾ ಪಟು ಆಗುವುದಂತು ಸತ್ಯ. ಆಟದ ಮೈದಾನ ಇಲ್ಲದ ಸರ್ಕಾರಿ ಶಾಲೆಗಳು ಸರ್ಕಾರಿ ಕಿರಿಯ, ಹಿರಿಯ ಹಾಗೂ ಪ್ರೌಢಶಾಲೆಗಳು ತಾಲೂಕಿನಲ್ಲಿ ೨೬೮ ಶಾಲೆಗಳು ಇದ್ದು, ೧೪೮ ಶಾಲೆಗಳಲ್ಲಿ ಆಟದ ಮೈದಾನವೇ ಇಲ್ಲ. ೧೨೩ ಶಾಲೆಗಳಲ್ಲಿ ಮಾತ್ರ ಆಟದ ಮೈದಾನ ಇದೆ. ತಾಲೂಕಿನಲ್ಲಿರುವ ಗೋಮಾಳ ಹಾಗೂ ಖರಾಬು ಭೂಮಿಗಳು ಒತ್ತುವರಿ ಮಾಡಿಕೊಂಡು ಭೂಮಿ ಕಬಳಿಸುತ್ತಿದ್ದು, ಸರ್ಕಾರಿ ಶಾಲೆಗಳಿಗೆ ಹಾಗೂ ಕಟ್ಟಡಗಳಿಗೆ ಭೂಮಿ ನೀಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ.

ಸಿರಾದಲ್ಲಿ ನಡೆದ ಜಿಲ್ಲಾ ಕ್ರೀಡಾಕೂಟದಲ್ಲಿ ಲಾಂಗ್ ಜಂಪ್‌ನಲ್ಲಿ ಪ್ರಥಮ ಸ್ಥಾನ ಪಡೆದು ಶಿವಮೊಗ್ಗದಲ್ಲಿ ನಡೆಯುವ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದೇನೆ. ನಮ್ಮ ಗ್ರಾಮದ ಶಾಲೆಯಲ್ಲಿ ಆಟದ ಮೈದಾನ ಇಲ್ಲ. ಕ್ರೀಡೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಧಿಕಾರಿಗಳು ನಮ್ಮ ಗ್ರಾಮಕ್ಕೆ ಆಟದ ಮೈದಾನಕ್ಕೆ ಜಾಗವನ್ನ ಗುರುತಿಸಿಕೊಡಿ. ಕುಶಾಲ್, ರಾಜ್ಯ ಮಟ್ಟದ ಕ್ರೀಡಾಪಟು.

ನಮ್ಮ ವಜ್ಜನಕುರಿಕೆ ಗ್ರಾಮದ ಸರ್ಕಾರಿ ಶಾಲೆಯ ೭ನೇ ತರಗತಿ ವಿದ್ಯಾರ್ಥಿ ಲಾಂಗ್ ಜಂಪ್‌ನಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದು, ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕವಾಗಿ ಸದೃಢವಾಗಲು ಆಟದ ಮೈದಾನ ಬೇಕು. ನಮ್ಮ ಶಾಲೆಯ ವಿದ್ಯಾರ್ಥಿ ಆಟದ ಮೈದಾನ ಇಲ್ಲದಿದ್ದರೂ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇಂತಹ ಪ್ರತಿಭೆಗಳನ್ನ ಹೊರ ತರಲು ಸರ್ಕಾರ ಆಟದ ಮೈದಾನ ನೀಡಿದರೆ ಇನ್ನಷ್ಟು ಪ್ರತಿಭೆಗಳು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುತ್ತಾರೆ.ಪರಮೇಶ್ವರ್, ಶಾಲೆಯ ಮುಖ್ಯ ಶಿಕ್ಷಕ

ಗ್ರಾಮೀಣ ಭಾಗದ ಯುವ ಪ್ರತಿಭೆಗಳು ಕ್ರೀಡಾ ಲೋಕಕ್ಕೆ ಬರಲು ಆಟದ ಮೈದಾನ ಇಲ್ಲದೆ ಹಳ್ಳಿಗಳಲ್ಲಿ ಉಳಿದಿವೆ. ಸರ್ಕಾರಗಳು ಕಂದಾಯ ಇಲಾಖೆಗೆ ಸೇರಿದ ಗೋಮಾಳ, ಖರಾಬು ಭೂಮಿಯನ್ನ ಸರ್ಕಾರಿ ಶಾಲೆಯ ಮೈದಾನಕ್ಕೆ ನೀಡಬೇಕಿದೆ. ಖಾಸಗಿ ಶಾಲೆಯ ಎಷ್ಟೋ ಶಾಲೆಗಳಲ್ಲಿ ಆಟದ ಮೈದಾನ ಇಲ್ಲ ಅವರಿಗೂ ಸಹ ಕಡ್ಡಾಯವಾಗಿ ಆಟದ ಮೈದಾನ ಇರಬೇಕು ಎಂದು ಆದೇಶ ಹೊರಡಿಸಬೇಕು.ಕೆ.ಎನ್.ನಟರಾಜು, ಕರವೇ ಅಧ್ಯಕ್ಷ ಕೊರಟಗೆರೆ.

ಸಾಕ್ಷಷ್ಟು ಶಾಲೆಗಳಲ್ಲಿ ಆಟದ ಮೈದಾನಗಳು ಇಲ್ಲದಿರುವ ಕಾರಣ ತುಮಕೂರು ಜಿಲ್ಲಾ ಪಂಚಾಯತ್‌ಗೆ ಎಷ್ಟು ಶಾಲೆಗಳಲ್ಲಿ ಆಟದ ಮೈದಾನ ಇಲ್ಲ ಎಂದು ಅಂಕಿಅಂಶವನ್ನ ನೀಡಲಾಗಿದೆ.ನಟರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಕೊರಟಗೆರೆ