ಗ್ರಾಮೀಣ ಪ್ರತಿಭೆಗಳು ಕ್ರೀಡಾ ಶಿಬಿರದ ಲಾಭ ಪಡೆಯಬೇಕು: ಕೃಷ್ಣಮೂರ್ತಿ

| Published : Apr 21 2025, 12:56 AM IST

ಗ್ರಾಮೀಣ ಪ್ರತಿಭೆಗಳು ಕ್ರೀಡಾ ಶಿಬಿರದ ಲಾಭ ಪಡೆಯಬೇಕು: ಕೃಷ್ಣಮೂರ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಬೇಸಿಗೆ ಹಾಕಿ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಟರ್ಫ್‌ ಮೈದಾನದಲ್ಲಿ ನಡೆಯಿತು.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಕಾಂಚನ ಗಂಗಾ ಕ್ರೀಡಾ ಸಂಸ್ಥೆ ಬಳಗುಂದ, ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆ ವತಿಯಿಂದ ಕಳೆದ 20 ದಿನಗಳಿಂದ ಪದವಿಪೂರ್ವ ಕಾಲೇಜಿನ ಸಿಂಥೆಟಿಕ್ ಟರ್ಫ್ ಹಾಕಿ ಮೈದಾನದಲ್ಲಿ ನಡೆಯುತ್ತಿರುವ ‘ಬೇಸಿಗೆ ಹಾಕಿ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಶನಿವಾರ ಟರ್ಫ್ ಮೈದಾನದಲ್ಲಿ ನಡೆಯಿತು.

ಸಮಾರಂಭದಲ್ಲಿ ಪಾಲ್ಗೊಂಡಿದ್ದ ತಹಸೀಲ್ದಾರ್ ಕೃಷ್ಣಮೂರ್ತಿ ಮಾತನಾಡಿ, ಹಾಕಿ ಕ್ರೀಡೆಗೆ ಜಿಲ್ಲೆಯಿಂದ ಸಾಕಷ್ಟು ಸಾಧಕರು ರಾಜ್ಯ ಮತ್ತು ರಾಷ್ಟ್ರ ಮಟ್ಟದ ತಂಡಗಳಲ್ಲಿ ಪಾಲ್ಗೊಂಡು ಸಾಧನೆ ಮಾಡಿದ್ದಾರೆ. ದೇಶದಲ್ಲಿ ಕ್ರಿಕೆಟ್ ಪಂದ್ಯಕ್ಕೆ ಸಿಗುವಷ್ಟು ಹಾಕಿ ಕ್ರೀಡೆಗೆ ಸಿಗದ ಕಾರಣ, ರಾಷ್ಟ್ರೀಯ ಕ್ರೀಡೆ ಹಾಕಿ ಮಂಕಾಗಿದೆ. ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಕ್ರೀಡಾ ಶಿಬಿರಗಳು ನಡೆಯುತ್ತಿದ್ದು, ಗ್ರಾಮೀಣ ಪ್ರತಿಭೆಗಳು ಇದರ ಲಾಭವನ್ನು ಪಡೆಯಬೇಕು ಎಂದರು.

ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್.ಮುತ್ತಣ್ಣ ಮಾತನಾಡಿ, ಕಳೆದ ಎರಡು ವರ್ಷಗಳಿಂದ ಗ್ರಾಮೀಣ ಭಾಗಗಳಲ್ಲಿ ಎಲೆಮರೆಯ ಕಾಯಿಯಂತಿರುವ ಪ್ರತಿಭೆಗಳಿಗೆ ನೆರವಾಗುವ ದೃಷ್ಟಿಯಿಂದ ಹಾಕಿ ಶಿಬಿರ ನಡೆಸಲಾಗುತ್ತಿದೆ. ಆದರೆ, ಹೆಚ್ಚಿನ ಕ್ರೀಡಾಪಟುಗಳು ಆಸಕ್ತಿ ತೋರುತ್ತಿಲ್ಲ. ಪೋಷಕರು ತಮ್ಮ ಮಕ್ಕಳನ್ನು ಕ್ರೀಡಾ ಶಿಬಿರಗಳಿಗೆ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸುವ ಮೂಲಕ ತಮ್ಮ ಮಕ್ಕಳ ಪ್ರತಿಭೆ ಹೊರತರಲು ಸಹಕರಿಸಬೇಕು ಎಂದರು.

ಇದೇ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ರಾಷ್ಟ್ರೀಯ ಹಾಕಿ ತರಬೇತುದಾರ ಸಿ.ಬಿ. ಜನಾರ್ಧನ್, ಪೊಲೀಸ್ ಇಲಾಖೆಯ ಕೆ.ಪಿ. ಮನಮೋಹನ್, ಕುವೆಂಪು ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ ಮಿಲ್‌ಡ್ರೆಡ್ ಗೋನ್ಸಾಲ್ವೆಸ್, ಕಾಫಿ ಮಂಡಳಿ ನಿವೃತ್ತ ಅಧಿಕಾರಿ ಟಿ.ಪಿ. ಚಂಗಪ್ಪ, ಕುವೆಂಪು ವಿದ್ಯಾಸಂಸ್ಥೆಯ ನಿರ್ದೇಶಕ ನಂದಕುಮಾರ್ ಅವರನ್ನು ಸನ್ಮಾನಿಸಲಾಯಿತು.

ಶಿಬಿರದಲ್ಲಿ ಹಿರಿಯ ತರಬೇತುದಾರರಾದ ಅಂತೋಣಿ ಡಿಸೋಜ, ವೆಂಕಟೇಶ್, ಪ್ರಕಾಶ್, ಸುರೇಶ್ ಸೇರಿದಂತೆ ಹಲವರು ಕ್ರೀಡಾಪಟುಗಳಿಗೆ ತರಬೇತಿ ನೀಡಿದರು.