ಸಾರಾಂಶ
ಅಷ್ಟೂರ ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾ ಕೆಲಸ ನಡೆಯುತ್ತಿರುವ ಕಾಮಗಾರಿ ಸ್ಥಳದಲ್ಲಿ ರೋಜಗಾರ್ ದಿವಸ ಉದ್ಘಾಟಿಸಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗೌತಮ ಅರಳಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಬೀದರ್
ಗ್ರಾಮೀಣ ಪ್ರದೇಶದ ಮತದಾರರು ಕಡ್ಡಾಯವಾಗಿ ಮತದಾನ ಮಾಡಬೇಕು. ನಿಮ್ಮಿಂದಲೇ ಮತದಾನ ಪ್ರಮಾಣ ಹೆಚ್ಚಳಕ್ಕೆ ನಾಂದಿಯಾಗಬೇಕೆಂದು ರಾಜ್ಯಮಟ್ಟದ ಚುನಾವಣಾ ತರಬೇತುದಾರಾರು ಹಾಗೂ ಬೀದರ್ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗೌತಮ ಅರಳಿ ಹೇಳಿದರು.ಬುಧವಾರ ಅಷ್ಟೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಕೆಲಸ ನಡೆಯುತ್ತಿರುವ ಕಾಮಗಾರಿ ಸ್ಥಳದಲ್ಲಿ ರೋಜಗಾರ್ ದಿವಸ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ದೇಶದ ಸಂವಿಧಾನದದಡಿ ಚುನಾವಣಾ ಪದ್ಧತಿ ಅಳವಡಿಸಿಕೊಂಡಿದ್ದು ನಮ್ಮೆಲರ ಸೌಭಾಗ್ಯ. ಆದ್ದರಿಂದಲೇ ನಮಗೆ ಮತದಾನ ಮಾಡಲು ಅವಕಾಶ ದೊರಕಿದೆ. ಇದರ ಸದುಪಯೋಗ ನಾವು ಪಡೆಯಲು ಮತದಾನ ಮಾಡಬೇಕು ಎಂದರು.
ನರೇಗಾ ಸಹಾಯಕ ನಿರ್ದೇಶಕರಾದ ಲಕ್ಷ್ಮೀ ಬಿರಾದರ್ ಮಾತನಾಡಿ, ಜಿಲ್ಲೆಯಲ್ಲಿ ಶಾಂತಿಯುತ ಹಾಗೂ ನಿಷ್ಪಕ್ಷಪಾತದಿಂದ ಚುನಾವಣೆ ನಡೆಸಲು ಜಿಲ್ಲಾಡಳಿತ ಈಗಾಗಲೇ ತಯಾರಿ ಮಾಡಿಕೊಂಡಿದೆ. ಸ್ವೀಪ್ ಸಮಿತಿ ಸಹ ಮತದಾನ ಪ್ರಮಾಣ ಹೆಚ್ಚಳಕ್ಕೆ ಸಾಕಷ್ಟು ಜಾಗೃತಿ ಕಾರ್ಯಕ್ರಮ ನಡೆಸಲಾಗುವುದು ಎಂದು ಹೇಳಿದರು.ಲೋಕಸಭಾ ಮತದಾನ ಮಾಡುವುದನ್ನು ಯಾರು ಮರೆಯಬಾರದು. ಎಲ್ಲರು ಸೇರಿ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸೋಣ ಎಂದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷರಾದ ರೇಣುಕಾ ರಾಹುಲ್, ತಾಂತ್ರಿಕ ಸಂಯೋಜಕ ವಿಷ್ಣು ಕುಲಕರ್ಣಿ, ತಾಂತ್ರಿಕ ಸಹಾಯಕ ಸೂರ್ಯಕಾಂತ ಕೊಡಿಗೆ, ಕಾಯಕ ಮಿತ್ರ ಗೀತಾ ದೇವೇಂದ್ರ, ಐಇಸಿ ಸಂಯೋಜಕ ಸತ್ಯಜೀತ ನೀಡೋದಾಕರ ಹಾಗೂ ನರೇಗಾ ಕೂಲಿ ಕಾರ್ಮಿಕರು ಇದ್ದರು.