ಕೆಲಸದ ಸ್ಥಳದಲ್ಲಿ ಮೃತಪಟ್ಟ ಕಾರ್ಮಿಕರ ಕುಟುಂಬಗಳಿಗೆ ₹10 ಲಕ್ಷ ಪರಿಹಾರ ನೀಡಬೇಕು
ಹೊಸಪೇಟೆ: ವಿಬಿ ಜಿರಾಮ್ ಜಿ ಯೋಜನೆಯಡಿ ಕಾರ್ಯ ನಿರ್ವಹಿಸುತ್ತಿರುವ ಕೂಲಿ ಕಾರ್ಮಿಕರಿಗೆ ಬರಬೇಕಾದ ಬಾಕಿ ಕೂಲಿ ಹಣ ಕೂಲಿ ಭತ್ಯೆ ಸಮೇತವಾಗಿ ಪಾವತಿ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯಿಂದ ಒತ್ತಾಯಿಸಿದರು.
ತಾಪಂ ಕಾರ್ಯ ನಿರ್ವಾಹಕ ಅಧಿಕಾರಿಗಳ ಮೂಲಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆಯುಕ್ತರಿಗೆ ಗ್ರಾಕೂಸ್ ಮೂಲಕ ಮನವಿಪತ್ರ ಸಲ್ಲಿಸಿರುವ ಕೂಲಿ ಕಾರ್ಮಿಕರು, ವಿಬಿ ಜಿರಾಮ್ ಜಿ ಯೋಜನೆಯಡಿ ಕೆಲಸ ಮಾಡಿರುವ ಸಾವಿರಾರು ಕಾರ್ಮಿಕರ ಖಾತೆಗಳಿಗೆ ಜುಲೈ 2026 ರಿಂದ ಈವರೆಗೆ ಕೂಲಿ ಹಣ ಪಾವತಿ ಆಗಿರುವುದಿಲ್ಲ. ಇದರಿಂದ ಕೂಲಿ ಕಾರ್ಮಿಕರ ಜೀವನ ನಿರ್ವಹಣೆ ಕಷ್ಟವಾಗಿರುವುದರಿಂದ ತಕ್ಷಣವೇ ಬಾಕಿ ಕೂಲಿ ಹಣ ಕಾರ್ಮಿಕರ ಖಾತೆಗಳಿಗೆ ಜಮೆ ಮಾಡುವಂತೆ ಒತ್ತಾಯಿಸಿದರು.ಹೊಸಪೇಟೆ ತಾಲೂಕನ್ನು ಬರ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಹೆಚ್ಚುವರಿ 50 ಮಾನವ ದಿನಗಳ ಕೆಲಸಕ್ಕೆ ಆದೇಶ ಮಾಡಬೇಕು. ಕೆಲಸದ ಸ್ಥಳದಲ್ಲಿ ಮೃತಪಟ್ಟ ಕಾರ್ಮಿಕರ ಕುಟುಂಬಗಳಿಗೆ ₹10 ಲಕ್ಷ ಪರಿಹಾರ ನೀಡಬೇಕು. ಕೆರೆ ಹೂಳೆತ್ತಲು ಬಳಸಲಾದ ಟ್ರ್ಯಾಕ್ಟರ್ ಬಾಕಿ ಹಣ ಕೂಡಲೇ ಬಿಡುಗಡೆ ಮಾಡಬೇಕು. ಮೇಟಿಗಳ ಪ್ರೋತ್ಸಾಹದ ಹಣ ಪಾವತಿಸಲು ಆದೇಶಿಸಬೇಕು. ಕೆರೆಗಳಿಲ್ಲದ ಪಂಚಾಯಿತಿಗಳಲ್ಲಿ ಹಳ್ಳ, ಡ್ಯಾಂ, ನಾಲೆಗಳ ಅಭಿವೃದ್ಧಿ ಕಾಮಗಾರಿ ವಿಬಿ ಜಿರಾಮ್ ಜಿ ಯೋಜನೆಯಲ್ಲಿ ಸೇರಿಸಿ ಕೆಲಸ ಮಾಡಲು ಅನುಕೂಲ ಮಾಡುವಂತೆ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳ ಪರ ತಾಪಂ ಸಹಾಯಕ ನಿರ್ದೇಶಕಿ ಕವಿತಾ ಕರ್ಣಂ ಮನವಿ ಸ್ವೀಕರಿಸಿದರು.ಈ ಸಂದರ್ಭದಲ್ಲಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯ ಜಿಲ್ಲಾ ಕಾರ್ಯಕರ್ತ ಶೈನಾಜ್, ನಾರಾಯಣ ಜಲಾಲಿ, ಶ್ರೀನಿವಾಸ್, ನಿಂಗಪ್ಪ, ಬಸವರಾಜ್, ಅನಿತಾ, ರೆಡ್ಡಿ, ಕಾರ್ಮಿಕರಾದ ಗಂಗಮ್ಮ, ನಾಗರತ್ನ, ಹನುಮಂತಮ್ಮ, ಹುಲಿಗೆಮ್ಮ, ಲಕ್ಷ್ಮೀ ಹುಲುಗಪ್ಪ, ತಾಯಮ್ಮ, ರೇಣುಕಮ್ಮ, ದುರುಗಮ್ಮ, ಹನುಮಂತಪ್ಪ, ಮಹೇಶ, ಬಸವರಾಜ್ ಬೋನಾಳ್, ರವಿ, ಶಿವಕುಮಾರ್ ಸೇರಿದಂತೆ ಇತರೆ ಕಾರ್ಮಿಕರು ಇದ್ದರು.