ವಿಕಸಿತ-ಭಾರತ ಗ್ರಾಮೀಣ ಉದ್ಯೋಗ ಖಾತರಿ ಮತ್ತು ಜೀವನೋಪಾಯ ಯೋಜನೆ (ವಿಬಿ ಜಿ ರಾಮ್ ಜಿ) ಮಸೂದೆ ವಿರೋಧಿಸಿ ಡಿ. 22ರಂದು ಸ್ಥಳೀಯ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲು ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ತೀರ್ಮಾನಿಸಿದೆ.

ಹೊಸಪೇಟೆ: ಕೇಂದ್ರ ಬಿಜೆಪಿ ಸರ್ಕಾರ 20 ವರ್ಷಗಳ ಹಳೆಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಮನರೇಗಾ ಬದಲಿಗೆ ಜಾರಿಗೆತಂದಿರುವ ವಿಕಸಿತ-ಭಾರತ ಗ್ರಾಮೀಣ ಉದ್ಯೋಗ ಖಾತರಿ ಮತ್ತು ಜೀವನೋಪಾಯ ಯೋಜನೆ (ವಿಬಿ ಜಿ ರಾಮ್ ಜಿ) ಮಸೂದೆ ವಿರೋಧಿಸಿ ಡಿ. 22ರಂದು ಸ್ಥಳೀಯ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲು ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ತೀರ್ಮಾನಿಸಿದೆ.

ಸ್ಥಳೀಯ ಪತ್ರಿಕಾ ಭವನದಲ್ಲಿ ಶುಕ್ರವಾರ ಪತ್ರಿಕಾ ಗೋಷ್ಠಿಯಲ್ಲಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯ ಜಿಲ್ಲಾ ಕಾರ್ಯಕರ್ತೆ ಶೈನಾಜ್ ಮಾತನಾಡಿ, ಕೇಂದ್ರ ಸರ್ಕಾರದ ಈ ನೂತನ ಯೋಜನೆ ಜಾರಿಯಿಂದ ಕೂಲಿ ಕಾರ್ಮಿಕರಿಗೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗಿದೆ. ಈಗಿರುವ ಬಜೆಟ್‌ನಲ್ಲಿಯೇ ಕೇಂದ್ರ ಸರ್ಕಾರ ಪ್ರತಿ ಕುಟುಂಬಕ್ಕೆ 50 ದಿನಗಳ ಕೆಲಸವನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ. ಕೇಂದ್ರ ಸರ್ಕಾರದ 125 ದಿನಗಳ ಉದ್ಯೋಗ ಭರವಸೆ ಹುಸಿ ಭರವಸೆ ಆಗಿದೆ ಎಂದರು.

ಮನರೇಗಾ ರದ್ದುಗೊಳಿಸುವ ಮೂಲಕ ಬೇಡಿಕೆ ಆಧಾರಿತ ಹಕ್ಕಿನಿಂದ ಪೂರೈಕೆ ಆಧಾರಿತ ಯೋಜನೆಯನ್ನಾಗಿ ಬದಲಾಯಿಸಲಾಗಿದೆ. ಉದ್ಯೋಗ ಖಾತ್ರಿ ಇನ್ನು ಒಂದು ಹಕ್ಕಾಗಿ ಉಳಿಯುವುದಿಲ್ಲ. ಯೋಜನೆ ಅನುಷ್ಠಾನದ ಮೇಲೆ ಕೇಂದ್ರ ಸರ್ಕಾರ ನಿಯಂತ್ರಣ ಸಾಧಿಸುವ ಪ್ರಯತ್ನವಾಗಿದೆ. ಕೇಂದ್ರ ಸರ್ಕಾರದಿಂದ ನಿರ್ಧರಿಸಲ್ಪಟ್ಟ ರಾಜ್ಯವಾರು ಬಜೆಟ್ ಹಂಚಿಕೆಗಳ ಮೂಲಕ ಮಾನವ ದಿನಗಳನ್ನು ನಿರ್ಧರಿಸಲಾಗುತ್ತದೆ. ಬಜೆಟ್ ಮಿತಿಯನ್ನು ಮೀರಿದರೆ ರಾಜ್ಯ ಸರ್ಕಾರಗಳೇ ಹೊರೆ ಭರಿಸಬೇಕಾಗುತ್ತದೆ.

ಎಲ್ಲ ಕಾಮಗಾರಿಗಳನ್ನು ಕೇಂದ್ರವೇ ನಿರ್ಧರಿಸುವುದರಿಂದ ಗ್ರಾಮ ಪಂಚಾಯಿತಿಗಳಿಗೆ ಹಾಗೂ ಗ್ರಾಮ ಸಭೆಗಳಿಗೆ ಯಾವುದೇ ಮಾನ್ಯತೆ ಇಲ್ಲದಂತಾಗಲಿದೆ. ಈ ಯೋಜನೆ ಪ್ರಕಾರ ಕೃಷಿ ಚಟುವಟಿಕೆ ಸಮಯದಲ್ಲಿ 60 ದಿನಗಳ ಕಾಲ ಯೋಜನೆ ಸ್ಥಗಿತ ಹಾಗೂ ವರ್ಷದಲ್ಲಿ ಎರಡು ತಿಂಗಳು ಕೆಲಸ ನಿರಾಕರಿಸುವುದರಿಂದ ಕಾರ್ಮಿಕರು ಕೆಲಸ ಅರಸಿ ಮತ್ತೆ ಗುಳೆ ಹೋಗುವ ಪರಿಸ್ಥಿತಿ ಎದುರಾಗಲಿದೆ ಎಂದರು.

ಕಾರ್ಮಿಕರ ಹಕ್ಕುಗಳನ್ನು ನಿರಾಕರಿಸುವ ಹಾಗೂ ಗ್ರಾಮ ಪಂಚಾಯಿತಿಗಳನ್ನು ದುರ್ಬಲಗೊಳಿಸುವ ಮೂಲಕ ಸಾಮಾಜಿಕ ನ್ಯಾಯವನ್ನೇ ಅಣಕಿಸುವ ಈ ಮಸೂದೆಯನ್ನು ವಿರೋಧಿಸಿ ರಾಜ್ಯದ ಎಲ್ಲ ಸಂಸದರ ಕಚೇರಿ ಎದುರು ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ. ಇದರ ಭಾಗವಾಗಿ ಜಿಲ್ಲಾಧಿಕಾರಿ ಕಚೇರಿ ಎದುರು ಡಿ. 22ರಂದು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದರು.

ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ಕಾರ್ಯಕರ್ತರಾದ ನೇತ್ರಾವತಿ, ಯಲ್ಲಮ್ಮ, ಶ್ರುತಿ, ಕುಮಾರಸ್ವಾಮಿ, ದುರುಗಮ್ಮ, ರತ್ನಮ್ಮ, ನಿಂಗವ್ವ, ಗೋವಿಂದರಾಜು ಇದ್ದರು.