ಯೂರಿಯಾಕ್ಕಾಗಿ ನೂಕುನುಗ್ಗಲು, ಹಂಚಿಕೆ ಸ್ಥಗಿತ

| Published : Aug 13 2025, 12:30 AM IST

ಸಾರಾಂಶ

ವಜ್ರಬಂಡಿ ಸಹಕಾರ ಸಂಘಕ್ಕೆ ಮಂಗಳವಾರ ೨೨೦ ಚೀಲ ಗೊಬ್ಬರ ತರಿಸಲಾಗಿದೆ. ಸಮರ್ಪಕವಾಗಿ ಎಲ್ಲ ರೈತರಿಗೆ ದೊರೆಯುವಷ್ಟು ಗೊಬ್ಬರ ತರಿಸಿ ಹಂಚಬೇಕು ಎಂದು ರೈತರು ಪಟ್ಟು ಹಿಡಿದರು.

ಯಲಬುರ್ಗಾ:

ತಾಲೂಕಿನ ವಜ್ರಬಂಡಿ ಗ್ರಾಮದಲ್ಲಿ ಯೂರಿಯಾ ರಸಗೊಬ್ಬರಕ್ಕಾಗಿ ಸಹಕಾರ ಸಂಘದ ಗೋದಾಮಿನ ಮುಂದೆ ನೂಕುನುಗ್ಗಲು ಉಂಟಾಯಿತು.

ತಾಲೂಕಿನಲ್ಲಿ ನಿರಂತರ ಮಳೆಯಾಗುತ್ತಿದ್ದು, ನಾನಾ ಬೆಳೆಗಳಿಗೆ ಯೂರಿಯಾ ರಸಗೊಬ್ಬರದ ಅವಶ್ಯಕತೆ ಇದೆ. ಈ ನಡುವೆ ಈ ವರೆಗೂ ಯೂರಿಯಾ ಸಮರ್ಪಕವಾಗಿ ದೊರೆಯದ ಕಾರಣ ರೈತರು ಸಂಕಷ್ಟ ಎದುರಿಸುವಂತಾಗಿದೆ. ಬೇಡಿಕೆಯಷ್ಟು ಗೊಬ್ಬರ ಸಿಗದೆ ಪರದಾಡುವಂತಾಗಿದೆ. ಸತತ ಮಳೆಯಿಂದಾಗಿ ಬೆಳೆಗಳು ಗೊಬ್ಬರವಿಲ್ಲದೆ ಹಾಳಾಗುತ್ತಿವೆ. ಹೀಗಾಗಿ ವಜ್ರಬಂಡಿ ಸಹಕಾರ ಸಂಘಕ್ಕೆ ಮಂಗಳವಾರ ೨೨೦ ಚೀಲ ಗೊಬ್ಬರ ತರಿಸಲಾಗಿದೆ. ಸಮರ್ಪಕವಾಗಿ ಎಲ್ಲ ರೈತರಿಗೆ ದೊರೆಯುವಷ್ಟು ಗೊಬ್ಬರ ತರಿಸಿ ಹಂಚಬೇಕು ಎಂದು ವಜ್ರಬಂಡಿ, ಕೋನಸಾಗರ, ಚಿಕ್ಕಬನ್ನಿಗೋಳ, ಚಿಕ್ಕಬನ್ನಿಗೋಳ ತಾಂಡಾ, ಜಿ. ಜರಕುಂಟಿ, ಹನುಮಾಪುರ, ದಮ್ಮೂರು ಹಾಗೂ ಸಾಲಭಾವಿ ವ್ಯಾಪ್ತಿಯ ರೈತರು ಪಟ್ಟು ಹಿಡಿದರು. ಗೊಬ್ಬರಕ್ಕಾಗಿ ಸಾವಿರಾರು ರೈತರಿಂದ ನೂಕುನುಗ್ಗಲು ಉಂಟಾಗಿದ್ದರಿಂದ ಹಂಚಿಕೆ ಕಾರ್ಯ ನಡೆಯಲಿಲ್ಲ.

ವಜ್ರಬಂಡಿ ಗ್ರಾಮದ ಸೊಸೈಟಿಗೆ ಈಗಾಗಲೇ ೨೨೦ ಚೀಲ ಬಂದಿದೆ. ಎಲ್ಲ ರೈತರಿಗೆ ಸಮರ್ಪಕವಾಗಿ ದೊರೆಯದ ಕಾರಣ ಹಂಚಿಕೆ ಕಾರ್ಯ ನಡೆದಿಲ್ಲ. ಅಂದಾಜು ೧೫ ಟನ್ ಯೂರಿಯಾ ರಸಗೊಬ್ಬರ ಬರಲಿದೆ. ಬಂದ ಬಳಿಕ ಹಂಚಿಕೆ ಕಾರ್ಯ ನಡೆಯಲಿದೆ ಎಂದು ಯಲಬುರ್ಗಾ ಸಹಾಯಕ ಕೃಷಿ ನಿರ್ದೇಶಕ ಪ್ರಮೋದ ತುಂಬಳ ಹೇಳಿದರು.

ತಾಲೂಕಿನಲ್ಲಿ ನಿರಂತರ ಮಳೆಯಾಗುತ್ತಿದ್ದು, ಯೂರಿಯಾ ರಸಗೊಬ್ಬರ ಸಿಗುತ್ತಿಲ್ಲ. ಪರಿಣಾಮ ಬೆಳೆಗಳು ಹಾಳಾಗುತ್ತಿವೆ. ವಜ್ರಬಂಡಿ ಸೊಸೈಟಿಗೆ ಕೇವಲ ೨೨೦ ಚೀಲ ಗೊಬ್ಬರ ತರಿಸಲಾಗಿದೆ. ಸಂಬಂಧಿಸಿದ ಅಧಿಕಾರಿಗಳು ಸಮರ್ಪಕ ಗೊಬ್ಬರ ವೊತರಣೆಗೆ ಕ್ರಮ ವಹಿಸಬೇಕು ಎಂದು ರೈತ ಸಂಘದ ಮಲ್ಲಪ್ಪ ಎಚ್. ಲಕ್ಕಲಕಟ್ಟಿ ಹೇಳಿದರು.