ಸಾರಾಂಶ
ಕನ್ನಡಪ್ರಭ ವಾರ್ತೆ ಆಲಮಟ್ಟಿ
ಸಾಲು ಸಾಲು ರಜೆ ಇರುವ ಕಾರಣಕ್ಕೆ ಆಲಮಟ್ಟಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ನಿತ್ಯವೂ ಹೆಚ್ಚುತ್ತಿದ್ದು, ಇದರಿಂದ ಪಾರ್ಕಿಂಗ್ ಸಮಸ್ಯೆ ಉಂಟಾಗುತ್ತಿದೆ.ದಿನನಿತ್ಯವೂ 5 ಸಾವಿರಕ್ಕೂ ಅಧಿಕ ಪ್ರವಾಸಿಗರು ಆಲಮಟ್ಟಿಯ ವಿವಿಧ ಉದ್ಯಾನ ವೀಕ್ಷಣೆಗೆ ಆಗಮಿಸುತ್ತಿದ್ದು, ವಾಹನಗಳ ಪಾರ್ಕಿಂಗ್ ದೊಡ್ಡ ತಲೆನೋವಾಗಿದೆ. ವಾಹನಗಳ ಸಮರ್ಪಕ ಹೋಗಲು ಹರಸಾಹಸ ಪಡಬೇಕಾಗಿದೆ. ರಾಜ್ಯದ ನಾನಾ ಕಡೆಯಿಂದ ಬೆಳಿಗ್ಗೆಯಿಂದಲೇ ಆಲಮಟ್ಟಿಯತ್ತ ಪ್ರವಾಸಿಗರು ಮುಖ ಮಾಡುತ್ತಿದ್ದಾರೆ. ಸಂಜೆ 4 ರ ನಂತರವಂತೂ ಆ ಸಂಖ್ಯೆ ಇನ್ನೂ ದುಪ್ಪಟ್ಟಾಗುತ್ತದೆ.
ಸಂಗೀತ ಕಾರಂಜಿ, ಮೊಘಲ್ ಉದ್ಯಾನ, ಲೇಸರ್ ಫೌಂಟೇನ್, ವಿಜ್ಞಾನ ಪಾರ್ಕ್ ಒಳಗೊಂಡ 77 ಎಕರೆ ಪ್ರವಾಸಿ ಸಮುಚ್ಛಯದ ಉದ್ಯಾನಕ್ಕೆ ಭೇಟಿ ನೀಡುವವರ ಸಂಖ್ಯೆಯಂತೂ ಹೆಚ್ಚಿದೆ.ರಾಕ್ ಉದ್ಯಾನ, ಸಂಗೀತ ಕಾರಂಜಿ ಬಳಿ ಉದ್ಯಾನದ ಪ್ರವೇಶ ದರದ ಟಿಕೆಟ್ ಪಡೆಯಲು ಹರಸಾಹಸ ಪಡಬೇಕಾಗಿದೆ. ಅದಕ್ಕಾಗಿ ಹೆಚ್ಚಿನ ಟಿಕೆಟ್ ಕೌಂಟರ್ ವ್ಯವಸ್ಥೆಯಿದ್ದರೂ, ನಿಯಂತ್ರಣಕ್ಕೆ ಬರುತ್ತಿಲ್ಲ.
ನಿತ್ಯ 3 ಲೇಸರ್ ಪ್ರದರ್ಶನ:1000 ಜನ ವೀಕ್ಷಿಸುವ ಅವಕಾಶವಿರುವ ಲೇಸರ್ ಫೌಂಟೇನ್‌ನ ಒಂದೇ ಪ್ರದರ್ಶನ ನಿತ್ಯ 7.20ಕ್ಕೆ ಆರಂಭಗೊಳ್ಳುತ್ತಿತ್ತು. ಆದರೆ ಕಳೆದ 15 ದಿನಗಳಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಿದ ಕಾರಣ ನಿತ್ಯ ಮೂರು ಪ್ರದರ್ಶನ ಮಾಡಲಾಗುತ್ತಿದೆ.
ಇನ್ನೂ ಏಕಕಾಲಕ್ಕೆ 2000 ಜನ ವೀಕ್ಷಿಸುವ ಅವಕಾಶವಿರುವ ಸಂಗೀತ ಕಾರಂಜಿಯ ಪ್ರದರ್ಶನ ಎರಡಕ್ಕೇರಿಸಲಾಗಿದೆ. ಇನ್ನೂ 8 ನಿಮಿಷದ ತ್ರೀಡಿ ಪ್ರೊಜೆಕ್ಷನ್ ಮ್ಯಾಪಿಂಗ್ ಕೂಡಾ ಮೂರು ಪ್ರದರ್ಶನ ನಡೆಯುತ್ತದೆ. ಒಟ್ಟಾರೇ ಪ್ರವಾಸಿಗರಿಗೆ ನಿರಾಶೆಯಾಗದಂತೆ, ತೊಂದರೆಯಾಗದಂತೆ ಹೆಚ್ಚುವರಿ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಕೆಬಿಜೆಎನ್ ಎಲ್ ಅಧಿಕಾರಿಗಳ ವಿವರಣೆ. ಇನ್ನೂ ಶನಿವಾರ, ಭಾನುವಾರವಂತೂ ಜನರ ಸಂಖ್ಯೆ ಮತ್ತಷ್ಟು ಹೆಚ್ಚಿದೆ.ಸಂಗೀತ ಕಾರಂಜಿ ಬಳಿ ಪಾರ್ಕಿಂಗ್ ಸಮಸ್ಯೆ ಹೆಚ್ಚಿದ್ದು, ಪ್ರದರ್ಶನದಿಂದ ಹೊರಬರುವಾಗ ಪ್ರವಾಸಿಗರನ್ನು ಹಾಗೂ ವಾಹನಗಳಳ ಸುಲಭ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಪಾರ್ಕಿಂಗ್ ಶುಲ್ಕ ವಿಧಿಸಿದರೂ ವಾಹನಗಳ ಸಂಚಾರಕ್ಕೆ ಸಂಚಕಾರ ಬಂದಿದೆ. ಸ್ಥಳೀಯ ಆಲಮಟ್ಟಿಯ ಪೊಲೀಸರು ಸುಲಭ ಸಂಚಾರ ವ್ಯವಸ್ಥೆಗೆ ಅನುಕೂಲ ಮಾಡುತ್ತಿಲ್ಲ ಎಂಬ ದೂರು ಹೆಚ್ಚುತ್ತಿವೆ.
ಡಿ.23 ರಿಂದ 25ರವರೆಗೆ ಅಧಿಕ:ಸಾಲು ರಜೆಯ ಹಿನ್ನೆಲೆಯಲ್ಲಿ ಡಿ.23, 24, 25 ಕೇವಲ ಮೂರೇ ದಿನಗಳಲ್ಲಿ ಆಲಮಟ್ಟಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ 44,000 ದಾಟಿದೆ ಎಂದು ಅಧಿಕಾರಿಗಳು ತಿಳಿಸಿದರು.
ಕೋವಿಡ್ ಗೂ ಮುನ್ನವೂ ಈ ಪರಿ ಪ್ರವಾಸಿಗರು ಆಲಮಟ್ಟಿಗೆ ಬರುತ್ತಿರುವುದನ್ನು ಕಂಡಿಲ್ಲ. ಇದೇ ವರ್ಷ ಪ್ರವಾಸಿಗರ ಸಂಖ್ಯೆ ಹೆಚ್ಚಿದೆ, ಆಲಮಟ್ಟಿಯೂ ರಾಜ್ಯಾದ್ಯಂತ ಪ್ರಸಿದ್ಧಿಯಾಗುತ್ತಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.ಇನ್ನೂ ಬೀದಿ ಬದಿ ವ್ಯಾಪಾರಸ್ಥರು ಕೂಡಾ ಫುಲ್ ಖುಷ್ ಆಗಿದ್ದಾರೆ. ಇನ್ನೂ ಆಲಮಟ್ಟಿಯ ಸುತ್ತಲಿನ ಲಾಡ್ಜ್ ಗಳು ಭರ್ತಿಯಾಗಿದ್ದು, ಹೋಟೆಲ್, ಡಾಬಾಗಳು ತುಂಬಿ ತುಳುಕುತ್ತಿವೆ.
ಉದ್ಯಾನ, ಸಂಗೀತ ಕಾರಂಜಿ ನೋಡಿ ಮುಗಿದು ಹೊರಬಂದಾಗ ರಾತ್ರಿ 9 ಆಗುತ್ತದೆ, ಆಲಮಟ್ಟಿಯಲ್ಲಿ ವಸತಿಯ ಸಮಸ್ಯೆ ಹೆಚ್ಚಿದೆ. ಇಲ್ಲೊಂದು ಯಾತ್ರಿ ನಿವಾಸ ಆರಂಭಿಸಬೇಕು ಎಂದು ಕೊಡಗಿನ ಹೆಬ್ಬಾಲೆ ಗ್ರಾಮದ ಶಿಕ್ಷಕ ಚೇತನ ಎಚ್.ಎಸ್. ಅಭಿಪ್ರಾಯಪಟ್ಟರು.---
ಯಾತ್ರಿ ನಿವಾಸ ಆರಂಭಿಸಿಮಕ್ಕಳು ಹಾಗೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯ ವೀಕ್ಷಣೆಗೆ ಆಲಮಟ್ಟಿಗೆ ಬರುತ್ತಿದ್ದಾರೆ. ಸಂಗೀತ ಕಾರಂಜಿ ನೋಡಿದ ನಂತರ ರಾತ್ರಿ 9 ಗಂಟೆಯಾಗುತ್ತದೆ. ಆದರೆ ಇಲ್ಲಿ ವಸತಿಗೆ ಯಾವುದೇ ವ್ಯವಸ್ಥೆಯಿಲ್ಲ. ಹೀಗಾಗಿ ಅಕ್ಕಪಕ್ಕದ ಶಾಲೆ, ದೇವಸ್ಥಾನಗಳೇ ವಸತಿ ತಾಣಗಳಾಗಿವೆ. ಕೆಬಿಜೆಎನ್‌ಎಲ್ ತಕ್ಷಣ ಯಾತ್ರಿ ನಿವಾಸ ನಿರ್ಮಾಣದತ್ತ ಆಸಕ್ತಿ ತೋರಬೇಕು. ಪ್ರವಾಸಿಗರ ಮೂಲಭೂತ ಸೌಕರ್ಯಗಳ ಕೊರತೆ ನಿವಾರಿಸಬೇಕು ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಮನವಿ ಮಾಡಿದರು.