ಸಾರಾಂಶ
ತಾಲೂಕಿನಾದ್ಯಂತ ಬೆಂಬಲ ಬೆಲೆ ಯೋಜನೆ ತೊಗರಿ ಖರೀದಿಗೆ ನೋಂದಣಿ ಸೋಮವಾರದಿಂದ ಆರಂಭವಾಗಿದೆ. ಆದರೆ ಕಂಪ್ಯೂಟರ್‌ನ ಸರ್ವರ್ ಸಮಸ್ಯೆಯಿಂದಾಗಿ ನಿರೀಕ್ಷಿತ ಮಟ್ಟದಲ್ಲಿ ನೋಂದಣಿ ಆಗದೆ ಇರುವ ಕಾರಣ ರೈತರು ಸರದಿಯಲ್ಲಿ ನಿಂತು ಕಾಯುವ ಪರಿಸ್ಥಿತಿ ಉಂಟಾಗಿದೆ.
ಕನ್ನಡಪ್ರಭ ವಾರ್ತೆ ಹನುಮಸಾಗರ
ತಾಲೂಕಿನಾದ್ಯಂತ ಬೆಂಬಲ ಬೆಲೆ ಯೋಜನೆ ತೊಗರಿ ಖರೀದಿಗೆ ನೋಂದಣಿ ಸೋಮವಾರದಿಂದ ಆರಂಭವಾಗಿದೆ. ಆದರೆ ಕಂಪ್ಯೂಟರ್‌ನ ಸರ್ವರ್ ಸಮಸ್ಯೆಯಿಂದಾಗಿ ನಿರೀಕ್ಷಿತ ಮಟ್ಟದಲ್ಲಿ ನೋಂದಣಿ ಆಗದೆ ಇರುವ ಕಾರಣ ರೈತರು ಸರದಿಯಲ್ಲಿ ನಿಂತು ಕಾಯುವ ಪರಿಸ್ಥಿತಿ ಉಂಟಾಗಿದೆ. ತೊಗರಿ ಖರೀದಿಗೆ ನೋಂದಣಿ ಆರಂಭವಾಗಿದೆ. ಸರ್ವರ್ ಇದ್ದರೂ ಲಾಗಿನ್ ಸಮಸ್ಯೆ ಕಾಡುತ್ತಿದೆ.ಇದರಿಂದಾಗಿ ಕೇವಲ ಬೆರಳಣಿಕೆಯಷ್ಟು ರೈತರ ಮಾತ್ರ ನೋಂದಣಿ ಆಗಿದೆ. ರೈತರು ನಾನಾ ಕೆಲಸಗಳನ್ನು ಬದಿಗೊತ್ತಿ ಸಂಜೆವರೆಗೂ ನಿಲ್ಲುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನೋಂದಣಿಗೆ ಆಗಮಿಸುವ ರೈತರಿಗೆ, ವೃದ್ಧರಿಗೆ ಹಾಗೂ ರೈತ ಮಹಿಳೆಯರಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ, ನೆರಳಿನ ವ್ಯವಸ್ಥೆ ನೋಂದಣಿ ಕೇಂದ್ರಗಳಲ್ಲಿ ಅಳವಡಿಸಲಾಗಿಲ್ಲ. ಇತ್ತೀಚೆಗೆ ಬಿಸಿಲಿನ ತಾಪ ಹೆಚ್ಚಾಗುತ್ತಿದೆ, ಇದರಿಂದ ರೈತರು ಪರಿತಪಿಸುವಂತಾಗಿದೆ.
ತಾಲೂಕಿನಲ್ಲಿಯೇ ನಾಲ್ಕು ನೋಂದಣಿ ಕೇಂದ್ರ:ತಾಲೂಕಿನಲ್ಲಿ ಒಟ್ಟು 4 ಕೇಂದ್ರ ತೆರೆಯಲಾಗಿದೆ. ಕುಷ್ಟಗಿ ಪಟ್ಟಣ, ಬನ್ನಿಗೋಳ, ಹನುಮಸಾಗರ ಹಾಗೂ ಮೇಣೆದಾಳ ಗ್ರಾಮಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಸಧ್ಯ ನೋಂದಣಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ರೈತರ ವಾಸಸ್ಥಳ ಹಾಗೂ ಅವರ ವ್ಯಾಪ್ತಿಯ ಮೇಲೆ ಅವರು ಅರ್ಜಿಯನ್ನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನೋಂದಣಿಯನ್ನು ಮಾಡಿದರು.
ಈಗಲೇ ರೈತರು ಎಫ್ ಐಡಿ ಮಾಡಿದ್ದಾರೆ. ಅದರಲ್ಲಿ ರೈತರ ಹೆಸರು, ಆಧಾರ ಸಂಖ್ಯೆ, ಬ್ಯಾಂಕ್ ಖಾತೆ ಸಂಖ್ಯೆ ಪಹಣಿ ಸಂಖ್ಯೆ ಇರುತ್ತದೆ. ಆದರೆ ಈ ಮೊದಲು ಎಫ್‌ಐಡಿ ಸಂಖ್ಯೆಯಿಂದ ರೈತರ ತೊಗರಿಯನ್ನು ಖರೀದಿಸಲಾಗಿದೆ. ಈ ಬಾರಿ ಹೊಸ ನಿಯಮಾವಳಿ ಮತ್ತು ಸಾಫ್ಟ್‌ವೇರ್‌ನಿಂದಾಗಿ ಕೆವೈಸಿ ಅವಶ್ಯಕವಾಗಿದೆ. ನೋಂದಣಿ ವೇಳೆಯಲ್ಲಿ ಕೆವೈಸಿಗಾಗಿ ಮತ್ತೊಮ್ಮೆ ರೈತರ ಎಲ್ಲ ರೀತಿಯ ಮಾಹಿತಿಯನ್ನು ಸಾಫ್ಟ್‌ವೇರ್‌ನಲ್ಲಿ ಅಪ್‌ಡೆಟ್ ಮಾಡಬೇಕಾಗಿರುವ ಕಾರಣ ತಡವಾಗುತ್ತಿರುವಾಗ, ನೋಂದಣಿ ಕಾರ್ಯ ನಿಧಾನವಾಗುತ್ತಿದೆ.