ಜನಾನುರಾಗಿ, ಸಹೃದಯಿ ಆಗಿದ್ದ ಎಸ್‌.ಜಯಣ್ಣ

| Published : Dec 22 2024, 01:30 AM IST

ಸಾರಾಂಶ

ಕೊಳ್ಳೇಗಾಲದಲ್ಲಿ ಆಯೋಜಿಸಿದ್ದ ಅಗಲಿದ ನಾಯಕ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಜಯಣ್ಣ ಅವರ ನುಡಿ ನಮನ ಕಾರ್ಯಕ್ರಮಕ್ಕೆ ಮನೋರಖ್ಖಿತ ಬಂತೇಜಿ ಚಾಲನೆ ನೀಡಿದರು. ಸಚಿವರಾದ ಎಚ್.ಸಿ.ಮಹದೇವಪ್ಪ, ವೆಂಕಟೇಶ್, ಶಾಸಕ ಎ.ಆರ್.ಕೃಷ್ಣಮೂರ್ತಿ ಇದ್ದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಮಾಜಿ ಶಾಸಕ, ಉಗ್ರಾಣ ನಿಗಮದ ಅಧ್ಯಕ್ಷರಾಗಿದ್ದ ಎಸ್.ಜಯಣ್ಣ ಅವರು ಸಹೃದಯಿ, ಅಪಾರ ಅಭಿಮಾನಿಗಳ ಬಳಗ ಹೊಂದಿದ್ದ ಜನನಾಯಕರಾಗಿದ್ದರು, ಅವರು ದೊಡ್ಡ ಆಲದ ಮರದ ರೀತಿ ಇದ್ದು ಅವರನ್ನು ನಂಬಿದವರಿಗೆ ನೆರಳಾಗಿದ್ದರು. ಸಾಮಾನ್ಯ ಜನರ ನಾಗರಿಕ ಸೌಲಭ್ಯಗಳ ಪರ

ಹಾಗೂ ಸಾಮಾಜಿಕ ಸಾಮರಸ್ಯದ ಪರ ನಿಲುವು ಹೊಂದಿದ್ದರು ಎಂದು ಸಮಾಜ ಕಲ್ಯಾಣ ಸಚಿವ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ. ಮಹದೇವಪ್ಪ ಹೇಳಿದರು.

ಪಟ್ಟಣದ ಭ್ರಮರಾಂಬ ಕಲ್ಯಾಣ ಮಂದಿರದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ಮಾಜಿ ಎಸ್.ಜಯಣ್ಣ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ, ಜಯಣ್ಣ ಅವರು ಪರಿಶುದ್ಧವಾದ ಮನಸ್ಸುಳ್ಳ ನಿಜವಾದ ಮಾಣಿಕ್ಯ, ಅವರು ನಿಷ್ಠೆ ನಂಬಿಕೆ ಭರವಸೆ ಉಳ್ಳ ಉದಾತ್ತ ದ್ಯೇಯವನ್ನು ನಮಗೆ ಬಿಟ್ಟು ಹೋಗಿದ್ದಾರೆ. ಸಾರ್ವಜನಿಕರಿಗೆ ಅವರು ಅಗತ್ಯವಿರುವ ಕೆಲಸ ಮಾಡಿದ್ದಾರೆ. ಜಯಣ್ಣ ಸಮರ್ಥ ವಿವೇಚನೆಯುಳ್ಳ, ಚಿಂತನಾ ಶೀಲ ವ್ಯಕ್ತಿ ಆಗಿದ್ದರು.

ಪ್ರಜಾಪ್ರಭುತ್ವದ ಅಧಿಕಾರದ ಎಲ್ಲ ಅರ್ಹತೆಗಳನ್ನು ಉಳ್ಳವರಾಗಿದ್ದರು. ಜನರನ್ನು ಪ್ರೀತಿಸುವ ಜೊತೆಗೆ, ಭಾವನೆಗಳನ್ನು ಗೌರವಿಸುವ ಕೆಲಸ ಮಾಡುತ್ತಿದ್ದರು, ಜನರ, ನೋವಿಗೆ ಮಿಡಿಯುವ ಉದಾತ್ತ ಗುಣ ಉಳ್ಳವರಾಗಿದ್ದರು, ರಾಜಕೀಯವನ್ನು ಸೇವೆಗೆ ಮೀಸಲಾಗಿರುವ ಅಮೂಲ್ಯವಾದ ಕ್ಷೇತ್ರ ಎಂಬುದನ್ನು ನೈಜವಾಗಿ ತೋರಿಸಿದವರು ಜಯಣ್ಣ ಎಂದು ವ್ಯಾಖ್ಯಾನಿಸಿದರು. ನಂಬಿದ ಜನರ ಸಮಸ್ಯೆಗೆ ಸ್ಪಂದಿಸುವ ಜತೆಗೆ ನಾಗರಿಕ ಸವಲತ್ತುಗಳನ್ನು ನೀಡಬೇಕು, ಅದು ನನ್ನ ಆದ್ಯ ಕರ್ತವ್ಯ ಎಂದು ನಂಬಿದ್ದ ಜನ ನಾಯಕರಾಗಿದ್ದರು, ಅವರ ಅಗಲಿಕೆ ಭರಿಸುವ ಶಕ್ತಿಯನ್ನು ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ದೊರೆಯಲಿ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಮಾತನಾಡಿ, ಜಯಣ್ಣ ಅಭಿವೃದ್ಧಿಯ ಬಗ್ಗೆ ಸದಾ ಚಿಂತಿಸುತ್ತಿದ್ದ ಒಬ್ಬ ಜನನಾಯಕ. ಅವರೊಬ್ಬ ಸರಳ ಸಜ್ಜನ ರಾಜಕಾರಣಕ್ಕೆ ಹೆಸರಾದ ವ್ಯಕ್ತಿ, ಸಿಎಂ ಸಿದ್ದರಾಮಯ್ಯನವರಿಗೆ ಅತ್ಯಾಪ್ತರಾಗಿದ್ದು ಅವರ ಅಧಿಕಾರಾವಧಿಯಲ್ಲಿ ಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ನೆನಪಿನಲ್ಲಿ ಉಳಿಯುವಂತೆ ಮಾಡಿದವರು. ಜನರ ಸಮಸ್ಯೆಗಳ ಬಗ್ಗೆ ಜನಜೀವನದ ಬಗ್ಗೆ ಚರ್ಚೆ ಮಾಡುತ್ತಿದ್ದರು. ಸಮಸ್ಯೆಗಳನ್ನು ಸೂಕ್ಷ್ಮವಾಗಿ ಬಗೆಹರಿಸುವ ಜಾಣ್ಮೆ ಅವರದಾಗಿತ್ತು. ಅವರ ರಾಜಕೀಯ ಚಿಂತೆನಗಳು ಎಲ್ಲರಿಗೂ ಮಾರ್ಗದರ್ಶನವಾಗಿರಲಿ, ಅವರ ಆದರ್ಶ ಗುಣಗಳು, ಉದಾತ್ತ ಚಿಂತನೆಗಳು ಎಲ್ಲರಿಗೂ ಮಾದರಿಯಾಗಲಿ ಎಂದರು.

ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ನಾನು ಶಾಸಕನಾಗಿ ಆಯ್ಕೆಯಾಗಲು ಸಿಎಂ ಸಿದ್ದರಾಮಯ್ಯ ಹಾಗೂ ಎಸ್.ಜಯಣ್ಣನರವರೇ ಕಾರಣ, ಜಯಣ್ಣನವರು ಅನಾರೋಗ್ಯದ ಕಾರಣದಿಂದ 2018ರ ಚುನಾವಣೆಯಲ್ಲಿ ನನಗೆ ಅವಕಾಶ ಮಾಡಿಕೊಟ್ಟರು. ಕಳೆದ ಚುನಾವಣೆಯಲ್ಲಿ ಸಿದ್ದರಾಮಯ್ಯನವರ ಮಾತಿಗೆ ಬದ್ದರಾಗಿ ನನಗೆ ಸ್ಪರ್ಧಿಸುವ ಅವಕಾಶ ಮಾಡಿಕೊಟ್ಟು ನನ್ನ ಗೆಲುವಿಗೆ ಕಾರಣರಾದರು, ಅವರ ಆತ್ಮಕ್ಕೆ ಶಾಂತಿಯನ್ನು ಭಗವಂತ ಕರುಣಿಸಲಿ, ಅವರ ಆದರ್ಶ ಗುಣಗಳು ಎಲ್ಲರಿಗೂ ಮಾದರಿಯಾಗಲಿ, ಅವರೊಬ್ಬ ಧೀಮಂತ ಅಭಿವೃದ್ಧಿ ಚಿಂತಕರಾಗಿದ್ದರು ಎಂದರು.

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಮನೋರಖ್ಖಿತ ಬಂತೇಜೆ ವಹಿಸಿದ್ದರು. ಈ ವೇಳೆ ಶಾಸಕರಾದ ಪುಟ್ಟರಂಗಶೆಟ್ಟಿ, ಗಣೇಶ್ ಪ್ರಸಾದ್, ದರ್ಶನ್ ಧ್ರುವನಾರಾಯಣ್, ವಿಧಾನ ಪರಿಷತ್ ಸದಸ್ಯ ತಿಮ್ಮಯ್ಯ, ಕಾಡಾ ಅಧ್ಯಕ್ಷ ಮರಿಸ್ವಾಮಿ, ಮಾಜಿ ಶಾಸಕರಾದ ಆರ್.ನರೇಂದ್ರ, ಜಿ.ಎನ್, ನಂಜುಂಡಸ್ವಾಮಿ, ಮಾಜಿ ಜಿಪಂ ಸದಸ್ಯ ಯೋಗೇಶ್, ಕೆ.ಪಿ.ಸದಾಶಿವಮೂರ್ತಿ, ಮುಖಂಡರಾದ ನಂಜೇಗೌಡ, ನರಸಿಂಹನ್, ಜಯಣ್ಣ ಅವರ ಭಾವ ಸಿದ್ದರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ನಗರಸಭೆ ಅದ್ಯಕ್ಷೆ ರೇಖಾ ರಮೇಶ್, ಉಪಾಧ್ಯಕ್ಷ ಎಪಿ ಶಂಕರ್, ಕಿನಕಹಳ್ಳಿ ಪ್ರಭುಪ್ರಸಾದ್, ನಾಗರಾಜ್, ನಗರಸಭೆ ಮಾಜಿ ಅಧ್ಯಕ್ಷರಾದ ಮಲ್ಲಿಕಾರ್ಜುನ, ಬಸ್ತಿಪುರ ಶಾಂತರಾಜು, ಬೀಮನಗರ ರಮೇಶ್, ಸದಸ್ಯರಾದ ರಾಘವೇಂದ್ರ, ಸುಮ ಸುಬ್ಬಣ್ಣ, ಮಾಜಿ ಉಪಾಧ್ಯಕ್ಷ ಅಕ್ಮಲ್ ಪಾಶಾ, ಸ್ವಾಮಿ ನಂಜ್ಪಪ, ಯುವ ಮುಖಂಡ ಸಿಗ್ಬತ್ ಉಲ್ಲಾ, ರಾಜೇಂದ್ರಕುಮಾರ್, ಪೈರೋಜ್ ಪಾಶಾ , ಜಗದೀಶ , ತೇರಂಬಳ್ಳಿ ಕುಮಾರ ಇನ್ನಿತರರಿದ್ದರು.