ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ರಾಜಕೀಯ ಜೀವನದಲ್ಲಿ ಎಲ್ಲಾ ಹಂತದ ಅಧಿಕಾರ ಅನುಭವಿಸಿದ ಹಿರಿಯ ಮುತ್ಸದ್ಧಿ ರಾಜಕಾರಣಿಯಾಗಿದ್ದ ಎಸ್.ಎಂ. ಕೃಷ್ಣ ಅವರು ನಾಡಿನ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ತಿಳಿಸಿದರು.ನಗರದ ಇಟ್ಟಿಗೆಗೂಡು ನಾಗರೀಕ ಹಿತರಕ್ಷಣಾ ಸಮಿತಿ ವತಿಯಿಂದ ಜ್ವಾಲಾಮುಖಿ ವೃತ್ತದಲ್ಲಿ ಮಂಗಳವಾರ ಆಯೋಜಿಸಿದ್ದ ಎಸ್.ಎಂ. ಕೃಷ್ಣ ಅವರಿಗೆ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ಎಸ್.ಎಂ.ಕೃಷ್ಣರವರ ನಿಧನ ಈ ನಾಡಿಗೆ ತುಂಬಲಾರದ ನಷ್ಟವಾಗಿದೆ ಎಂದರು.
ಬೆಂಗಳೂರಿನಲ್ಲಿ ಐಟಿ- ಬಿಟಿ ಸೆಕ್ಟರ್ ಬೆಳವಣಿಗೆ ಚುರುಕುಗೊಳ್ಳಲು ಕೃಷ್ಣರವರೇ ಕಾರಣ. ಬೆಂಗಳೂರಿನ ವಿಮಾನ ನಿಲ್ದಾಣ, ವಿಕಾಸಸೌಧ ನಿರ್ಮಾಣ, ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ, ರೈತರಿಗೆ ಯಶಸ್ವಿನಿ ಯೋಜನೆ, ಹೆಚ್ಚಿನ ವಿದ್ಯುತ್ ಉತ್ಪಾದನೆ, ನೀರಾವರಿ ಆಧುನೀಕರಣ, ಗ್ರಾಮೀಣ ಭಾಗದಲ್ಲಿ ಆಸ್ಪತ್ರೆ, ಆರೋಗ್ಯ ಕೇಂದ್ರಗಳ ವ್ಯವಸ್ಥೆ, ರಾಜ್ಯ ರಸ್ತೆ ಮೂಲಸೌಕರ್ಯಗಳ ಅಭಿವೃದ್ಧಿ, ಬಿಎಂಟಿಸಿ, ವೋಲ್ವೋ, ಲಕ್ಸುರಿ ಬಸ್ ಗಳ ಪ್ರಾರಂಭಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಸ್ಮರಿಸಿದರು.ಈ ವೇಳೆ ಕೃಷ್ಣರಾಜ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ. ಸೋಮಶೇಖರ್, ಮರ್ಚೆಂಟ್ ಬ್ಯಾಂಕ್ ನಿರ್ದೇಶಕ ಮಹೇಶ್, ಮುಖಂಡರಾದ ಎಡ್ವಿನ್, ಮಂಜು, ಮಹೇಶ್, ಸಿದ್ದಲಿಂಗಣ್ಣ, ವನರಾಜು, ಆನಂದ್, ಗೋಕುಲ್ ಗೋವರ್ಧನ್, ನರೇಂದ್ರ, ರಾಧಾಕೃಷ್ಣ, ಆರ್.ಎಚ್. ಕುಮಾರ್, ಪ್ರಭಾಕರ್, ಶೇಖರ್, ಸುಂದರ್, ಚಿಕ್ಕಲಿಂಗು, ಧರ್ಮ, ರವೀಶ್, ದೀಪು ಮೊದಲಾದವರು ಇದ್ದರು.ಎಸ್.ಎಂ. ಕೃಷ್ಣ ನಿಧನಕ್ಕೆ ಸಂದೇಶ್ ಸ್ವಾಮಿ ಸಂತಾಪ
ನವಕರ್ನಾಟಕ ಅಭಿವೃದ್ಧಿಯ ನೇತಾರ, ರಾಜಕೀಯ ಮುತ್ಸದ್ಧಿ, ಅಜಾತಶತ್ರು, ಜನಪ್ರಿಯ ನಾಯಕರಾಗಿದ್ದ ಎಸ್.ಎಂ. ಕೃಷ್ಣ ಅವರ ನಿಧನದಿಂದ ರಾಜ್ಯ ಹಾಗೂ ರಾಷ್ಟ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಮಾಜಿ ಮೇಯರ್ ಸಂದೇಶ್ ಸ್ವಾಮಿ ಸಂತಾಪ ಸೂಚಿಸಿದ್ದಾರೆ. ಎಸ್.ಎಂ. ಕೃಷ್ಣ ಅವರ ಶಿಸ್ತುಬದ್ಧ ಜೀವನ, ನಡೆ-ನುಡಿ, ಆಡಳಿತ ವೈಖರಿ ಎಲ್ಲವೂ ಅನುಕರಣೀಯ. ಅವರು ಮುಖ್ಯಮಂತ್ರಿಯಾಗಿದ್ದಾಗ ಅನುಷ್ಠಾನಗೊಳಿಸಿದ ಯೋಜನೆಗಳು ಎಂದೆಂದಿಗೂ ಸ್ಮರಣೀಯ. ಮರೆಯಾದ ಚೇತನಕ್ಕೆ ಅಂತಿಮ ನಮನಗಳು. ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಕುಟುಂಬದವರು, ಬಂಧು-ಮಿತ್ರರು, ಅಭಿಮಾನಿಗಳಿಗೆ ದೇವರು ಸಹಿಸುವ ಶಕ್ತಿ ಕರುಣಿಸಲಿ ಎಂದು ಅವರು ಪ್ರಾರ್ಥಿಸಿದ್ದಾರೆ.ಮಹಾಜನ ಕಾಲೇಜಿನಲ್ಲಿ ಎಸ್.ಎಂ. ಕೃಷ್ಣಗೆ ಶ್ರದ್ಧಾಂಜಲಿಕನ್ನಡಪ್ರಭ ವಾರ್ತೆ ಮೈಸೂರು
ನಗರದ ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರಿಗೆ ಮಂಗಳವಾರ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಈ ವೇಳೆ ಕಾಲೇಜಿನ ಪ್ರಾಂಶುಪಾಲೆ ಡಾ.ಬಿ.ಆರ್.ಜಯಕುಮಾರಿ ಮಾತನಾಡಿ, ಎಸ್.ಎಂ.ಕೃಷ್ಣ ಅವರು ತಮ್ಮ ಸುದೀರ್ಘ ಜೀವಿತಾವಧಿಯಲ್ಲಿ ಶಿಸ್ತುಬದ್ಧ ಜೀವನವನ್ನು ಎಂದು ಮರೆಯಲಿಲ್ಲ. ಶಿಸ್ತು ಸಂಯಮದ ವಿಚಾರದಲ್ಲಿ ಇಂದಿನ ಪೀಳಿಗೆಗೆ ಮಾದರಿಯಾಗಿದ್ದರು. ಮುಖ್ಯಮಂತ್ರಿಗಳಾಗಿ ಹತ್ತು ಹಲವು ಐತಿಹಾಸಿಕ ಹಾಗೂ ಸ್ಮರಣೀಯ ಕೊಡುಗೆಗಳನ್ನು ನೀಡಿದ್ದಾರೆ ಎಂದು ಸ್ಮರಿಸಿದರು.
ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಚ್.ಆರ್. ತಿಮ್ಮೇಗೌಡ ಮಾತನಾಡಿ, ರಾಜಕೀಯ ಚತುರತೆ, ಸಮಯಪ್ರಜ್ಞೆ, ಬಹುಭಾಷಾ ಪ್ರೌಢಿಮೆ ಹಾಗೂ ವಾಕ್ ಚಾತುರ್ಯಗಳು ಎಸ್.ಎಂ. ಕೃಷ್ಣ ಅವರ ಹೆಸರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಳಿಯುವಂತೆ ಮಾಡಿದೆ. ಮುಖ್ಯಮಂತ್ರಿಯಾಗಿ ಅವರು ನೀಡಿರುವ ಅನೇಕ ಕೊಡುಗೆಗಳು ಇಂದಿಗೂ ಜೀವಂತವಾಗಿವೆ. ಅವರ ಸುದೀರ್ಘ ರಾಜಕಾರಣದ ಇತಿಹಾಸ ಒಂದು ತೆರೆದ ಪುಸ್ತಕದಂತಿದ್ದು, ಇಂದಿನ ತಲೆಮಾರಿನ ಯುವಪೀಳಿಗೆಗೆ ಹಾಗೂ ರಾಜಕಾರಣಿಗಳಿಗೆ ಸ್ಫೂರ್ತಿ ಮತ್ತು ಪ್ರೇರಣೆಯಾಗಿದೆ ಎಂದರು.ಕಾಲೇಜಿನ ಶೈಕ್ಷಣಿಕ ಡೀನ್ ಡಾ.ಎಚ್.ಶ್ರೀಧರ, ಅಧ್ಯಾಪಕರು, ಅಧ್ಯಾಪಕೇತರರು ಹಾಗೂ ವಿದ್ಯಾರ್ಥಿಗಳು ಇದ್ದರು.