ನಾಡು ಕಂಡ ಧೀಮಂತ ನಾಯಕ ಎಸ್ ಎಂ.ಕೃಷ್ಣ: ಎಂ.ವಿ.ಪ್ರಕಾಶ್ ಬಣ್ಣನೆ

| Published : Dec 12 2024, 12:35 AM IST

ಸಾರಾಂಶ

ರಾಜಕಾರಣದಲ್ಲಿ ಎಲ್ಲರಿಗೂ ಮಾದರಿಯಾಗುವಂತಹ ನಿಟ್ಟಿನಲ್ಲಿ ಒಂದೆಡೆ ಅಭಿವೃದ್ಧಿ ಮತ್ತೊಂದೆಡೆ ಸೌಮ್ಯ ಸ್ವಭಾವದ ಮೂಲಕ ರಾಷ್ಟ್ರ ರಾಜಕಾರಣದಲ್ಲೂ ಸಹ ಅಪಾರ ಹಿರಿಮೆಯನ್ನು ಗಳಿಸಿದ ದೊಡ್ಡ ವ್ಯಕ್ತಿತ್ವ ಅವರದ್ದಾಗಿತ್ತು. ಅವರ ಸಾವು ನಮ್ಮಂತಹ ಯುವ ಜನಪ್ರತಿನಿಧಿಗಳು ಸೇರಿದಂತೆ ಜಿಲ್ಲೆಗೆ ಅಪಾರವಾದ ನಷ್ಟವನ್ನುಂಟು ಮಾಡಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ರಾಜ್ಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿ ಬೆಂಗಳೂರಿನಲ್ಲಿ ಐಟಿ, ಬಿಟಿ ತರುವ ಮೂಲಕ ಜಿಲ್ಲೆಗೆ ಕೀರ್ತಿ ತಂದ ಎಸ್.ಎಂ.ಕೃಷ್ಣ ಅವರ ನಿಧನದಿಂದ ದೇಶ, ರಾಜ್ಯ ಹಾಗೂ ಜಿಲ್ಲೆಗೆ ಅಪಾರ ನಷ್ಟ ಉಂಟಾಗಿದೆ ಎಂದು ನಗರಸಭಾ ಅಧ್ಯಕ್ಷ ಎಂ.ವಿ.ಪ್ರಕಾಶ್ ವಿಷಾದ ವ್ಯಕ್ತಪಡಿಸಿದರು.

ನಗರಸಭಾ ಕಚೇರಿಯಲ್ಲಿ ನಡೆದ ಎಸ್.ಎಂ.ಕೃಷ್ಣರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿ, ಮಂಡ್ಯ ಜಿಲ್ಲೆಯ ರೈತರ ಬಾಳು ಹಸನುಗೊಳ್ಳಲು ಕಾರಣಕರ್ತರಾದ ಕೃಷ್ಣ ಅವರು ಮುಖ್ಯಮಂತ್ರಿಗಳಾಗಿ ಜಿಲ್ಲೆಯ ಕೀರ್ತಿಯನ್ನು ಉತ್ತುಂಗ ಮಟ್ಟಕ್ಕೆ ಕೊಂಡೊಯ್ದರು ಎಂದು ಬಣ್ಣಿಸಿದರು.

ರಾಜಕಾರಣದಲ್ಲಿ ಎಲ್ಲರಿಗೂ ಮಾದರಿಯಾಗುವಂತಹ ನಿಟ್ಟಿನಲ್ಲಿ ಒಂದೆಡೆ ಅಭಿವೃದ್ಧಿ ಮತ್ತೊಂದೆಡೆ ಸೌಮ್ಯ ಸ್ವಭಾವದ ಮೂಲಕ ರಾಷ್ಟ್ರ ರಾಜಕಾರಣದಲ್ಲೂ ಸಹ ಅಪಾರ ಹಿರಿಮೆಯನ್ನು ಗಳಿಸಿದ ದೊಡ್ಡ ವ್ಯಕ್ತಿತ್ವ ಅವರದ್ದಾಗಿತ್ತು. ಅವರ ಸಾವು ನಮ್ಮಂತಹ ಯುವ ಜನಪ್ರತಿನಿಧಿಗಳು ಸೇರಿದಂತೆ ಜಿಲ್ಲೆಗೆ ಅಪಾರವಾದ ನಷ್ಟವನ್ನುಂಟು ಮಾಡಿದೆ ಎಂದರು.

ನಗರಸಭಾ ಆಯುಕ್ತರಾದ ಪಂಪಶ್ರೀ ಮಾತನಾಡಿ, ಎಸ್.ಎಂ.ಕೃಷ್ಣ ಸರ್ ಅವರು ಸರಳ, ಸಜ್ಜನಿಕೆಯ ಮೂಲಕ ಇಡೀ ರಾಷ್ಟ್ರವೇ ಮೆಚ್ಚುವಂತಹ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಸದಾ ಅವರ ನೆನಪು ಜನಮಾನಸದಲ್ಲಿ ಉಳಿಯುವಂತೆ ಮಾಡಿದ್ದಾರೆ ಎಂದರು.

ನಗರಸಭಾ ಅಧಿಕಾರಿ ನಾಗರಾಜು ಮಾತನಾಡಿ, ಎಸ್.ಎಂ.ಕೃಷ್ಣ ಅವರು ಜಿಲ್ಲೆಯ ಮೂಲಕ ರಾಜಕಾರಣ ಆರಂಭಿಸಿ ಜನನಾಯಕ ಹೇಗಿರಬೇಕು ಎಂಬುದನ್ನು ವಿಶ್ವಕ್ಕೆ ತೋರಿಸಿಕೊಟ್ಟಿದ್ದಾರೆ ಎಂದರು.

ನಗರಸಭಾ ಉಪಾಧ್ಯಕ್ಷರಾದ ಎಂ.ಪಿ.ಅರುಣ್ ಕುಮಾರ್, ಸದಸ್ಯರಾದ ನಾಗೇಶ್, ರಜಿನಿ, ವಸೀಮ್, ಟಿ.ಕೆ.ರಾಮಲಿಂಗಯ್ಯ, ಬಿಜೆಪಿ ಮುಖಂಡರಾದ ವಸಂತ್ ಕುಮಾರ್, ಮಂಡ್ಯ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಬಿ.ಪಿ.ಪ್ರಕಾಶ್, ಅಧಿಕಾರಿಗಳಾದ ರವಿಕುಮಾರ್, ರುದ್ರೇಗೌಡ, ಮಂಜುನಾಥ್, ರಾಜೇಗೌಡ ಸೇರಿದಂತೆ ನೌಕರರು, ಸಾರ್ವಜನಿಕರು ಪಾಲ್ಗೊಂಡಿದ್ದರು.