ಎಸ್.ಎಂ.ಕೃಷ್ಣ ಸಂಯಮಶೀಲ, ಸೃಜನಶೀಲ, ಸರಳ ಸಜ್ಜನಿಕೆ ವ್ಯಕ್ತಿಯಾಗಿದ್ದರು: ನಾಗತಿಹಳ್ಳಿ ಚಂದ್ರಶೇಖರ್

| Published : May 05 2025, 12:47 AM IST

ಎಸ್.ಎಂ.ಕೃಷ್ಣ ಸಂಯಮಶೀಲ, ಸೃಜನಶೀಲ, ಸರಳ ಸಜ್ಜನಿಕೆ ವ್ಯಕ್ತಿಯಾಗಿದ್ದರು: ನಾಗತಿಹಳ್ಳಿ ಚಂದ್ರಶೇಖರ್
Share this Article
  • FB
  • TW
  • Linkdin
  • Email

ಸಾರಾಂಶ

ನಾನು ಈ ಪ್ರಶಸ್ತಿಗೆ ಎಷ್ಟು ಅರ್ಹನೋ ಗೊತ್ತಿಲ್ಲ. ಆದರೆ, ಎಸ್.ಎಂ.ಕೃಷ್ಣರ ಹೆಸರಿನಲ್ಲಿ ಪ್ರಶಸ್ತಿಯನ್ನು ಚುಂಚಶ್ರೀ ಬಳಗದ ಒತ್ತಾಸೆ ಮೇರೆಗೆ ಪಡೆಯುತ್ತಿರುವುದು ಸಂತಸ ತಂದಿದೆ. ಎಸ್ ಎಂಕೆ ಸಾಹಿತ್ಯಾಸಕ್ತರಾಗಿದ್ದರು. ಮುಖ್ಯಮಂತ್ರಿಗಳಾಗಿದ್ದಾಗ ಅವರನ್ನು ವಿರೋಧಿಸುತ್ತಿದ್ದವರನ್ನೂ ಕೂಡಾ ವಿನಯದಿಂದ ವಸ್ತುಸ್ಥಿತಿ ಮನದಟ್ಟು ಮಾಡುವ ಶಕ್ತಿ ಇತ್ತು.

ಕನ್ನಡಪ್ರಭ ವಾರ್ತೆ ಮದ್ದೂರು

ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಸಂಯಮಶೀಲ, ಸೃಜನಶೀಲ, ಸರಳ ಸಜ್ಜನಿಕೆ ವ್ಯಕ್ತಿಯಾಗಿದ್ದರು. ಒಬ್ಬ ಬರಹಗಾರನಾಗಿ ಅವರನ್ನು ನಾನು ಹೆಚ್ಚು ಗೌರವದಿಂದ ಕಾಣುವಂತಹ ಅಪರೂಪದ ವ್ಯಕ್ತಿತ್ವ ಹೊಂದಿದ್ದರು ಎಂದು ಖ್ಯಾತ ಚಲನಚಿತ್ರ ನಿರ್ದೇಶಕ ಹಾಗೂ ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ್ ಗುಣಗಾನ ಮಾಡಿದರು.

ಪಟ್ಟಣದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಶನಿವಾರ ಸಂಜೆ ಚುಂಚಶ್ರೀ ಗೆಳೆಯರ ಬಳಗ, ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಸಂಘ ಸೇರಿದಂತೆ ಹಲವು ಸಂಸ್ಥೆಗಳ ಸಹಯೋಗದೊಂದಿಗೆ ನಡೆದ ಎಸ್.ಎಂ.ಕೃಷ್ಣರ ಜನ್ಮ ದಿನಾಚರಣೆಯಲ್ಲಿ ಎಸ್.ಎಂ.ಕೃಷ್ಣ ಸಮಷ್ಟಿ ಹಿತಚಿಂತನಾ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ನಾನು ಈ ಪ್ರಶಸ್ತಿಗೆ ಎಷ್ಟು ಅರ್ಹನೋ ಗೊತ್ತಿಲ್ಲ. ಆದರೆ, ಎಸ್.ಎಂ.ಕೃಷ್ಣರ ಹೆಸರಿನಲ್ಲಿ ಪ್ರಶಸ್ತಿಯನ್ನು ಚುಂಚಶ್ರೀ ಬಳಗದ ಒತ್ತಾಸೆ ಮೇರೆಗೆ ಪಡೆಯುತ್ತಿರುವುದು ಸಂತಸ ತಂದಿದೆ. ಎಸ್ ಎಂಕೆ ಸಾಹಿತ್ಯಾಸಕ್ತರಾಗಿದ್ದರು. ಮುಖ್ಯಮಂತ್ರಿಗಳಾಗಿದ್ದಾಗ ಅವರನ್ನು ವಿರೋಧಿಸುತ್ತಿದ್ದವರನ್ನೂ ಕೂಡಾ ವಿನಯದಿಂದ ವಸ್ತುಸ್ಥಿತಿ ಮನದಟ್ಟು ಮಾಡುವ ಶಕ್ತಿ ಇತ್ತು. ಅಷ್ಟೇ ವಿದ್ವತ್ತಿನಿಂದ ವಿಚಾರಧಾರೆಗಳಿದ್ದವು. ಅವರ ಒಡನಾಟಗಳನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದರು.

ದಿವ್ಯ ಸಾನಿಧ್ಯ ವಹಿಸಿದ್ದ ಕೆಂಗೇರಿ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿಶ್ಚಲಾನಂದನಾಥಸ್ವಾಮಿ ಮಾತನಾಡಿ, ಎಸ್.ಎಂ.ಕೃಷ್ಣರಿಗೆ ದಕ್ಷಿಣ ಭಾರತದವರು ಎನ್ನುವ ಕಾರಣಕ್ಕಾಗಿ ಪ್ರಧಾನಿ ಪಟ್ಟ ತಪ್ಪಿಸಿದರು ಎನ್ನುವ ನೋವು ನನ್ನನ್ನು ಕಾಡಿತ್ತು ಎಂದು ಬೇಸರ ವ್ಯಕ್ತಪಡಿಸಿದರು.

ಎಸ್ ಎಂಕೆ ಪ್ರತಿಮೆಯನ್ನು ವಿಧಾನ ಸೌಧದ ಎದುರು ನಿರ್ಮಿಸುವಂತಾಗಬೇಕು. ಆ ಮೂಲಕ ವಿಧಾನ ಸೌಧಕ್ಕೆ ಬರುವ ಯುವ ರಾಜಕಾರಣಿಗಳಿಗೆ ಒಂದು ಸ್ಫೂರ್ತಿ ಸಿಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ಎಂ.ಉದಯ್ ಮಾತನಾಡಿ, ಎಸ್ ಎಂಕೆ ಪ್ರತಿನಿಧಿಸಿದ್ದ ಮದ್ದೂರು ಕ್ಷೇತ್ರದ ಶಾಸಕನಾಗಿರುವುದು ನನಗೆ ಹೆಮ್ಮೆಯ ಸಂಗತಿ. ಮುಂದಿನ ದಿನಗಳಲ್ಲಿ ಪಟ್ಟಣದ ಪ್ರಮುಖ ವೃತ್ತಕ್ಕೆ ಎಸ್.ಎಂ.ಕೃಷ್ಣ ಹೆಸರು ನಾಮಕರಣ ಮಾಡುವುದು ಹಾಗೂ ಪುತ್ತಳಿ ನಿರ್ಮಾಣ ಮಾಡಲಾಗುವುದು ಎಂದು ಭರವಸೆ ನೀಡಿದರು.

ಕರ್ನಾಟಕ ಉಚ್ಛ ನ್ಯಾಯಲಯದ ನಿವೃತ್ತ ನ್ಯಾಯಮೂರ್ತಿ ಟಿ.ಜಿ.ಶಿವಶಂಕರೇಗೌಡರು ನಾಗತಿಹಳ್ಳಿ ಚಂದ್ರಶೇಖರ್ ಅವರಿಗೆ ಎಸ್.ಎಂ.ಕೃಷ್ಣ ಸಮಷ್ಟಿ ಹಿತಚಿಂತನಾ ಪ್ರಶಸ್ತಿ ಪ್ರದಾನ ಮಾಡಿದರು. ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಬಿ.ಎಲ್.ಶಂಕರ್ ಎಸ್.ಎಂ.ಕೃಷ್ಣ ಕುರಿತು ವಿಶೇಷ ಉಪನ್ಯಾಸ ಮಾಡಿದರು. ನಿವೃತ್ತ ಪ್ರಾಂಶುಪಾಲ ಡಾ.ಎಸ್.ಬಿ.ಶಂಕರೇಗೌಡರು ಪ್ರಶಸ್ತಿ ಪುರಸ್ಕೃತರನ್ನು ಕುರಿತು ಭಾಷಣ ಮಾಡಿದರು.

ಚುಂಚಶ್ರೀ ಗೆಳೆಯರ ಬಳದ ಅಧ್ಯಕ್ಷ ಡಾ.ಬಿ.ಕೃಷ್ಣ, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಕರ್ನಾಟಕದ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ್ ಗೌಡ್ರು, ಮನ್ಮುಲ್ ಮಾಜಿ ಅಧ್ಯಕ್ಷ ಕದಲೂರು ರಾಮಕೃಷ್ಣ, ಹಿರಿಯ ಸಾಹಿತಿ ತೈಲೂರು ವೆಂಕಟಕೃಷ್ಣ, ಪುರಸಭಾ ಅಧ್ಯಕ್ಷೆ ಕೋಕಿಲಾ ಅರುಣ್, ಪ್ರಾಂಶುಪಾಲ ಕೆ.ಬಿ.ನಾರಾಯಣ್, ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ದೇಶಹಳ್ಳಿ ಮೋಹನ್ ಕುಮಾರ್, ಪುರಸಭಾ ಮಾಜಿ ಅಧ್ಯಕ್ಷ ಎಂ.ಕೆ.ಮರಿಗೌಡ, ಚುಂಚಶ್ರೀ ಗೆಳೆಯರ ಬಳಗ ಪ್ರಧಾನ ಕಾರ್ಯದರ್ಶಿ ವಿ.ಟಿ.ರವಿಕುಮಾರ್, ಉಪಾಧ್ಯಕ್ಷ ಸಿ.ಎಸ್.ಶಂಕರಯ್ಯ, ಶ್ರೀ ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಸಂಘದ ಅಧ್ಯಕ್ಷ ದೇಶಹಳ್ಳಿ ಪಿ.ಶಿವಪ್ಪ ಇದ್ದರು.