ಕಾಫಿನಾಡಿನೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದ ಎಸ್.ಎಂ.ಕೃಷ್ಣ

| Published : Dec 11 2024, 12:46 AM IST

ಕಾಫಿನಾಡಿನೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದ ಎಸ್.ಎಂ.ಕೃಷ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಕಾಫಿನಾಡಿನೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು. ತಮ್ಮ ಮಗಳನ್ನು ಚಿಕ್ಕಮಗಳೂರಿನ ಎಬಿಸಿ ಮಾಲೀಕ (ಕಾಫಿ ಡೇ) ಸಿದ್ಧಾರ್ಥ ಅವರಿಗೆ ಮದುವೆ ಮಾಡಿಕೊಟ್ಟಿದ್ದಲ್ಲದೆ ಚಿಕ್ಕಮಗಳೂರಿನಲ್ಲಿ ತಮ್ಮದೇ ಆದ ಅಭಿಮಾನಿ ಬಳಗವನ್ನೂ ಹೊಂದಿದ್ದರು.

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಕಾಫಿನಾಡಿನೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು. ತಮ್ಮ ಮಗಳನ್ನು ಚಿಕ್ಕಮಗಳೂರಿನ ಎಬಿಸಿ ಮಾಲೀಕ (ಕಾಫಿ ಡೇ) ಸಿದ್ಧಾರ್ಥ ಅವರಿಗೆ ಮದುವೆ ಮಾಡಿಕೊಟ್ಟಿದ್ದಲ್ಲದೆ ಚಿಕ್ಕಮಗಳೂರಿನಲ್ಲಿ ತಮ್ಮದೇ ಆದ ಅಭಿಮಾನಿ ಬಳಗವನ್ನೂ ಹೊಂದಿದ್ದರು.

ಜಿಲ್ಲೆಯ ಬಗ್ಗೆ ವಿಶೇಷ ಅಭಿಮಾನ ಹೊಂದಿದ್ದ ಎಸ್.ಎಂ.ಕೃಷ್ಣ ಅವರು, ಮುಖ್ಯಮಂತ್ರಿಯಾಗಿದ್ದಾಗ, ಕೇಂದ್ರ ಸಚಿವರಾಗಿದ್ದಾಗ ಹಾಗೂ ಮಹಾರಾಷ್ಟ್ರದ ರಾಜ್ಯಪಾಲರಾಗಿದ್ದ ಸಂದರ್ಭದಲ್ಲಿ ಅತಿಹೆಚ್ಚು ಬಾರಿ ಚಿಕ್ಕಮಗಳೂರು ಜಿಲ್ಲೆಗೆ ಪ್ರವಾಸ ಕೈಗೊಂಡಿದ್ದರು.

ಆದರೆ, ತಮ್ಮ ಅಳಿಯ ಸಿದ್ಧಾರ್ಥ ಅವರ ಅಕಾಲಿಕ ಮರಣ ಎಸ್.ಎಂ.ಕೃಷ್ಣ ಅವರನ್ನು ಜರ್ಜರಿತರನ್ನಾಗಿಸಿತ್ತು. ಕೊನೆ ವರೆಗೂ ಈ ನೋವನ್ನು ಅವರಿಗೆ ಮರೆಯಲು ಸಾಧ್ಯವೇ ಆಗಲಿಲ್ಲ ಎಂದು ಅವರ ಆಪ್ತರು ಕಂಬನಿ ಮಿಡಿಯುತ್ತಿದ್ದಾರೆ.

ತಮ್ಮ ಸಂಬಂಧಿಕರ ಮನೆಗೆ ಮಾತ್ರವಲ್ಲದೆ ಜಿಲ್ಲೆಯ ಧಾರ್ಮಿಕ ಕ್ಷೇತ್ರಗಳಾದ ಶೃಂಗೇರಿ, ಬಾಳೆಹೊನ್ನೂರು ರಂಭಾಪುರಿ ಪೀಠ, ಹೊರನಾಡು ಕ್ಷೇತ್ರಗಳಿಗೂ ಭೇಟಿ ನೀಡುತ್ತಿದ್ದರು. ಇಲ್ಲಿನ ಪ್ರಾಕೃತಿಕ ಸೌಂದರ್ಯಕ್ಕೆ ಮನಸೋತಿದ್ದ ಎಸ್.ಎಂ.ಕೃಷ್ಣ ಅವರು ಬಿಡುವಿನ ವೇಳೆಯಲ್ಲೆಲ್ಲಾ ಚಿಕ್ಕಮಗಳೂರಿಗೆ ಆಗಮಿಸುತ್ತಿದ್ದರು.

ಇನ್ನು ರಾಜಕಾರಣದ ವಿಷಯದಲ್ಲಿಯೂ ಚಿಕ್ಕಮಗಳೂರಿಗೆ ವಿಶೇಷ ಪ್ರಾಶಸ್ತ್ಯ ನೀಡಿದ್ದು ಎಸ್.ಎಂ.ಕೃಷ್ಣ ಅವರೇ ಎಂಬುದು ಇನ್ನೊಂದು ವಿಶೇಷ. ಒಂದು ಜಿಲ್ಲೆಯಿಂದ ಒಬ್ಬರು ಇಲ್ಲವೇ ಕೆಲವೆಡೆ ಇಬ್ಬರು ಸಚಿವರಾಗುತ್ತಾರೆ. ಆದರೆ, ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಚಿಕ್ಕಮಗಳೂರು ಜಿಲ್ಲೆಯ ಹಿರಿಯ ಮುತ್ಸದಿ ಡಿ.ಬಿ.ಚಂದ್ರೇಗೌಡ, ಮೋಟಮ್ಮ ಹಾಗೂ ಸಿ.ಆರ್‌. ಸಗೀರ್ ಅಹಮದ್ ಅವರಿಗೆ ಸಚಿವ ಸ್ಥಾನ ನೀಡಿದ್ದರು ಎಂಬುದು ಅವರಿಗೆ ಚಿಕ್ಕಮಗಳೂರು ಜಿಲ್ಲೆಯ ಮೇಲಿದ್ದ ಪ್ರೀತಿ ತೋರಿಸುತ್ತದೆ.

ಅಲ್ಲದೆ ಮೋಟಮ್ಮ ಹಾಗೂ ಸಗೀರ್ ಅಹಮದ್ ಅವರಿಗೆ ಎಸ್.ಎಂ.ಕೃಷ್ಣ ಅವರೇ ಮಾರ್ಗದರ್ಶಕರಾಗಿದ್ದರು ಎಂಬುದು ಇನ್ನೊಂದು ವಿಶೇಷ.ಕಾಫಿ ಬೆಳೆಗಾರರ ಹುರಿದುಂಬಿಸಿದ್ದರು:

ಕಾಫಿ ಮುಕ್ತ ಮಾರುಕಟ್ಟೆಗೆ ಬರುವವರೆಗೆ ಕಾಫಿ ಬೆಳೆಗಾರರಿಗೆ ಅಷ್ಟೊಂದು ಲಾಭವಾಗುತ್ತಿರಲಿಲ್ಲ. ಯಾವಾಗ ಕಾಫಿ ಮುಕ್ತ ಮಾರುಕಟ್ಟೆ ವ್ಯಾಪ್ತಿಗೆ ಬಂದಿತ್ತೋ ಆಗ ಕಾಫಿ ಬೆಳೆಗಾರರಿಗೆ ಸ್ವಾತಂತ್ರ್ಯ ಸಿಕ್ಕಂತಾಗಿತ್ತು. ತಾವು ಬೆಳೆದ ಕಾಫಿಯನ್ನು ತಾವೇ ಮಾರಾಟ ಮಾಡುವ ಅವಕಾಶ ಮುಕ್ತ ಮಾರುಕಟ್ಟೆ ವ್ಯವಸ್ಥೆಯಲ್ಲಿ ಸಿಕ್ಕಿದ್ದರಿಂದ ಕಾಫಿ ಬೆಳೆಗಾರರು ಆರ್ಥಿಕವಾಗಿ ಸದೃಢ ರಾಗಲಾರಂಭಿಸಿದರು. ಈ ವೇಳೆ ಕಾಫಿ ಬೆಳೆಗಾರರ ಬೆನ್ನಿಗೆ ನಿಂತಿದ್ದು ಎಸ್.ಎಂ.ಕೃಷ್ಣ ಅವರು, ನಿಮ್ಮ ಕಾಫಿ ನೀವೇ ಮಾರಾಟ ಮಾಡಿಕೊಳ್ಳಿ ಎಂದು ಕಾಫಿ ಬೆಳೆಗಾರರ ಬೆನ್ನು ತಟ್ಟಿದ್ದರು.

ಮೋಟಮ್ಮ ಸಚಿವರಾಗಿದ್ದ ವೇಳೆ ರಾಜ್ಯದಲ್ಲಿ ಮಹಿಳಾ ಸ್ವಸಹಾಯ ಸಂಘ ರಚಿಸಲು ಮೋಟಮ್ಮ ಅವರಿಗೆ ಪ್ರೇರಣೆ ನೀಡಿದ್ದು ಎಸ್.ಎಂ.ಕೃಷ್ಣ ಅವರು. ಮಹಿಳೆಯರು ಸ್ವಾವಲಂಭಿ ಹಾಗೂ ಆರ್ಥಿಕವಾಗಿ ಸದೃಢರಾಗಲು ಮಹಿಳಾ ಸ್ವಸಹಾಯ ಸಂಘಗಳ ಪ್ರಸ್ತುತತೆ ಅರ್ಥೈಸಿದ ಎಸ್.ಎಂ.ಕೃಷ್ಣ ಅವರು ಸ್ವಸಹಾಯ ಸಂಘಗಳು ಹೇಗೆ ಕಾರ್ಯನಿರ್ವಹಿಸಬೇಕು ಎಂಬ ಮಾಹಿತಿ ನೀಡಿದ್ದರು. ಅದರಂತೆಯೇ ಮೋಟಮ್ಮ ರಾಜ್ಯಾದ್ಯಂತ ಮಹಿಳಾ ಸ್ವಸಹಾಯ ಸಂಘಗಳು ರಚನೆಯಾಗಲು ಕಾರ್ಯಯೋಜನೆ ಸಿದ್ಧಪಡಿಸಿದ್ದರು.-- ಬಾಕ್ಸ್‌--

ಎಸ್.ಎಂ.ಕೃಷ್ಣ ಅವರು ರಾಜಕಾರಣದಲ್ಲಿ ಮರೆಯಲಾಗದ ಮಾಣಿಕ್ಯ. ಅವರು ನನ್ನ ರಾಜಕೀಯದ ಗುರು. ಅವರಿಂದಲೇ ನಾನು ರಾಜಕಾರಣದಲ್ಲಿ ದೊಡ್ಡ ಹುದ್ದೆಗೇರಲು ಸಾಧ್ಯವಾಯಿತು. ಆದರೆ ಅವರ ಕೊನೆ ಕಾಲದಲ್ಲಿ ಅವರನ್ನು ಭೇಟಿ ಮಾಡಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಆಸ್ಪತ್ರೆಗೆ ಹೋದಾಗಲೂ ನೋಡಲು ಅವಕಾಶ ಸಿಗಲಿಲ್ಲ. ಮನೆಗೆ ಬಂದಾಗಲೂ ಅವರನ್ನು ನೋಡಲಾಗಲಿಲ್ಲ ಎಂಬುದು ಬೇಸರದ ಸಂಗತಿ. ರಾಜ್ಯದ ಅಭಿವೃದ್ಧಿಗೆ ಹೊಸ ಟಚ್ ನೀಡಿದ್ದು ಎಸ್.ಎಂ.ಕೃಷ್ಣ ಅವರು ಎಂಬುದರಲ್ಲಿ ಎರಡು ಮಾತಿಲ್ಲ.- ಮೋಟಮ್ಮ, ಮಾಜಿ ಸಚಿವೆ-- 10 ಕೆಸಿಕೆಎಂ 3ಕಾಂಗ್ರೆಸ್‌ ಮುಖಂಡರಾದ ಬಾಳೆಹೊನ್ನೂರಿನ ಬಿ.ಸಿ. ಗೀತಾ ಅವರ ಮನೆಗೆ ಎಸ್‌.ಎಂ. ಕೃಷ್ಣ ಭೇಟಿ ನೀಡಿದ್ದರು.