ಸಾರಾಂಶ
ಕನ್ನಡಪ್ರಭ ವಾರ್ತೆ ಭಾರತೀನಗರ
ಮಣಿಗೆರೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಮುಂದುವರೆದ ಅಭಿವೃದ್ಧಿ ಕಟ್ಟಡ ಕಾಮಗಾರಿಗೆ ಮನ್ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ ಗುದ್ದಲಿ ಪೂಜೆ ನೆರವೇರಿಸಿದರು.ನಂತರ ಎಸ್.ಪಿ.ಸ್ವಾಮಿ ಮಾತನಾಡಿ, ತಾಲೂಕಿನಲ್ಲಿರುವ ಎಲ್ಲ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ಕಾಮಗಾರಿಗಳು ಅಭಿವೃದ್ಧಿಗೊಂಡಿವೆ. ಆದರೆ, ಇಲ್ಲಿನ ಡೇರಿಯನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಮನ್ಮುಲ್‌ನಿಂದ 2 ಲಕ್ಷ ಸಹಾಯ ಧನದ ಜೊತೆಗೆ ಡೇರಿ ಲಾಭಾಂಶದ ಹಣದಿಂದ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.
ಗುಣಮಟ್ಟ ಹಾಲು ಸರಬರಾಜು ಮಾಡಿದರೆ ಸಂಘ ಅಭಿವೃದ್ಧಿಗೊಳ್ಳುತ್ತದೆ. ಜೊತೆಗೆ ನಾವು ಸಹ ಸೌಲಭ್ಯ ನೀಡಬಹುದು. ಹಾಲು ಉತ್ಪಾದಕರು ಮನ್ಮುಲ್‌ನಿಂದ ದೊರೆಯುವ ಸೌಲಭ್ಯ ಪಡೆದುಕೊಳ್ಳಬೇಕು ಎಂದರು.ಪ್ರಸ್ತುತ ಬರಗಾಲದಿಂದ ರೈತರು ತತ್ತರಿಸಿದ್ದು, ಮಳೆಯಿಲ್ಲದೆ ಯಾವುದೇ ಬೆಳೆಗಳನ್ನು ಬೆಳೆದಿಲ್ಲ. ಭತ್ತದ ಬೆಳೆ ಬೆಳೆದಿದ್ದರೆ ಒಣ ಹುಲ್ಲು ಸಿಗುತ್ತಿತ್ತು. ಸಕಾಲದಲ್ಲಿ ಮಳೆ ಬಿದ್ದಿದ್ದರೆ ಹಸಿರು ಮೇವಿನ ಕೊರತೆಯೂ ನೀಗುತ್ತಿತ್ತು. ಆದರೆ, ಮಳೆ ಇಲ್ಲದೆ ಪಶುಗಳ ಸಾಕಣೆ ಮಾಡುವಲ್ಲಿ ರೈತರು ಹರಸಾಹಸ ಪಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಮಣಿಗೆರೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕೆಂಪರಾಜು ಮಾತನಾಡಿ, ಹಲವು ವರ್ಷಗಳಿಂದ ನೆನೆ ಗುದಿಗೆ ಬಿದ್ದಿದ್ದ ಕಟ್ಟಡ ಕಾಮಗಾರಿಯನ್ನು ಅಭಿವೃದ್ಧಿ ಪಡಿಸಲು ನನ್ನ ಅವಧಿಯಲ್ಲಿ ಮುಂದಾಗಿದ್ದೇನೆ. ಇದಕ್ಕೆ ಮನ್ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ ಮತ್ತು ಸಂಘದ ನಿರ್ದೇಶಕರು ಸಾಥ್ ನೀಡಿದ್ದಾರೆ. ಹಾಗಾಗಿ ಕಟ್ಟಡದ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.ಈ ವೇಳೆ ಸಂಘದಿಂದ ಮನ್ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ ಅವರನ್ನು ಅಭಿನಂದಿಸಲಾಯಿತು. ಮುಖಂಡರಾದ ಮಣಿಗೆರೆ ಪ್ರಕಾಶ್, ಕಬ್ಬಾಳಯ್ಯ, ಗುತ್ತಿಗೆದಾರ ಜಗದೀಶ್, ಸಂಘದ ಕಾರ್ಯದರ್ಶಿ ಪುಟ್ಟಲಿಂಗು, ಉಪಾಧ್ಯಕ್ಷ ವೆಂಕಟೇಶ್, ನಿರ್ದೇಶಕರಾದ ಎಂ.ಎಲ್.ರಮೇಶ್, ಬಿಳಿಯಯ್ಯ, ಸಿದ್ದೇಗೌಡ, ಕೆಂಪಮ್ಮ ಸೇರಿದಂತೆ ಹಲವರಿದ್ದರು.
ಪರಿಷತ್ ಚುನಾವಣೆ ವೀಕ್ಷಕರ ನೇಮಕಮಂಡ್ಯ: ಕರ್ನಾಟಕ ವಿಧಾನ ಪರಿಷತ್ತಿನ ದಕ್ಷಿಣ ಶಿಕ್ಷಕರ ಕ್ಷೇತ್ರ ಚುನಾವಣೆ 2024ಕ್ಕೆ ಸಂಬಂಧಿಸಿದಂತೆ ಭಾರತ ಚುನಾವಣಾ ಆಯೋಗವು ಐಎಎಸ್ ಅಧಿಕಾರಿ ಡಾ.ರವಿಶಂಕರ್ ಅವರನ್ನು ಚುನಾವಣಾ ವೀಕ್ಷಕಕರನ್ನಾಗಿ ನೇಮಕ ಮಾಡಿದೆ. ಚುನಾವಣಾ ವೀಕ್ಷಕರನ್ನು ಭೇಟಿ ಮಾಡಲು, ಸಂಪರ್ಕಿಸಲು ಸಹಾಯಕ ಅಧಿಕಾರಿಯಾಗಿ ಮೈಸೂರಿನ ಅಬಕಾರಿ ಉಪ ಆಯುಕ್ತರಾದ ಎಸ್.ನಾಗರಾಜಪ್ಪ ಅವರನ್ನು ನೇಮಕ ಮಾಡಲಾಗಿದೆ. ವೀಕ್ಷಕರು ಮೊ.9449597178, ಮೊ-7204214565ಗೆ ಕರೆ ಮಾಡಿ ಸಂಪರ್ಕಿಸಬಹುದೆಂದು ಕರ್ನಾಟಕ ವಿಧಾನ ಪರಿಷತ್ತಿನ ದಕ್ಷಿಣ ಶಿಕ್ಷಕರ ಕ್ಷೇತ್ರ ಚುನಾವಣಾ ಅಧಿಕಾರಿ ಹಾಗೂ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರು ತಿಳಿಸಿದ್ದಾರೆ.