ಸಾರಾಂಶ
ಕನ್ನಡಪ್ರಭ ವಾರ್ತೆ ಹೊಸನಗರ
ರೈತರ ಜಮೀನುಗಳನ್ನು ವಕ್ಫ್ ಆಸ್ತಿ ಎಂದು ಪರಿಗಣಿಸಿ ರೈತರಿಗೆ ನೋಟಿಸ್ ನೀಡಿರುವ ವಕ್ಫ್ ಮಂಡಳಿ ಹಾಗೂ ರಾಜ್ಯ ಸರ್ಕಾರದ ವಿರುದ್ಧ ನ.4 ರಂದು ಬಿಜೆಪಿ ರಾಜ್ಯಾದ್ಯಂತ ಹೋರಾಟ ನಡೆಸಲಿದ್ದು, ವಕ್ಫ್ ವಿವಾದವನ್ನು ತಾರ್ತಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ ಎಂದು ಮಾಜಿ ವಿಪ ಸದಸ್ಯ ಎಸ್.ರುದ್ರೇಗೌಡ ಹೇಳಿದರು.ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಕ್ಫ್ ಬೋರ್ಡ್ ಹೆಸರಿಗೆ ಹೋಗಿರುವ ರೈತರ ಭೂಮಿ ವಾಪಸ್ ರೈತರಿಗೆ ಸಿಗಲಿ, ರೈತರ ಹೋರಾಟಕ್ಕೆ ಬಿಜೆಪಿ ಬೆಂಬಲ ನೀಡಲಿದೆ. ಅನ್ನದಾತನಿಗೆ ಖನ್ನ ಹಾಕುವ ಕೆಲಸ ಜಮೀರ್ ಟೀಂ ಮತ್ತು ಸಿದ್ದರಾಮಯ್ಯ ಮಾಡಿದ್ದಾರೆ. ಶಿವಮೊಗ್ಗದ ಮೂಡ್ಲಿಯಲ್ಲಿ ಈಗಾಗಲೇ ಐತಿಹಾಸಿಕ ಸ್ಥಳಗಳ ಜಾಗಗಳನ್ನು ವಕ್ಫ್ ಕಬಳಿಸಲು ಯತ್ನಿಸುತ್ತದೆ. ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ವಕ್ಫ್ ಆಸ್ತಿಯ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಯಾವ ಸರ್ಕಾರಿ ಹಾಗೂ ಖಾಸಗಿ ಆಸ್ತಿಗಳು ವಕ್ಫ್ ಕೈ ಸೇರಿವೆ ಎಂದು ತಿಳಿಯಲಿದ್ದು, ಅವುಗಳ ವಿರುದ್ಧ ಉಗ್ರ ಹೋರಾಟ ಮಾಡಲಾಗುವುದು ಎಂದರು.
ರೈತರು ನೆಮ್ಮದಿ ಜೀವನ ನಡೆಸುವುದು ಕಷ್ಟವಾಗಿದೆ. ಪಹಣಿಗಳಲ್ಲಿ ತಮ್ಮ ಹೆಸರು ಹೋಗಿ ವಕ್ಫ್ ಬೋರ್ಡ್ ಎಂದು ನಮೂದಾಗುವುದೋ ಎಂಬ ಆತಂಕದಲ್ಲಿ ರೈತಾಪಿ ವರ್ಗವಿದೆ. ಇದಕ್ಕೆ ಮಠ-ಮಂದಿರಗಳು ಹೊರತಾಗಿಲ್ಲ. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಹಲವು ಹಿಂದೂ ದೇವಾಲಯಗಳ ಜಮೀನು ಸಹ ಇಂದು ವಕ್ಫ್ ಬೋರ್ಡ್ ಹೆಸರಿಗೆ ಪಹಣಿಯಲ್ಲಿ ನೊಂದಣಿಯಾಗಿರುವುದು ದುರಂತದ ಸಂಗತಿ ಎಂದು ಹೇಳಿದರು.ಸಂಸದ ಗೋವಿಂದ ಕಾರಜೋಳ ನೇತೃತ್ವದಲ್ಲಿ ಪಕ್ಷದ ಹಲವು ನಾಯಕರು ಘಟನೆ ನಡೆದ ಸ್ಥಳವಾದ ವಿಜಯಪುರ ಜಿಲ್ಲೆಯ ಕೆಲವು ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಿ, ಪಹಣಿ ಸಮಸ್ಯೆಗಳನ್ನು ರೈತರಿಂದ ಆಲಿಸಿದ್ದು, ಬಿಜೆಪಿ ರಾಜ್ಯಾದ್ಯಂತ ಗಂಭೀರ ಹೋರಾಟಕ್ಕೆ ಮುಂದಾಗಿದೆ.
ರಾಜ್ಯದ ಪ್ರತಿ ಮಂಡಲ ವ್ಯಾಪ್ತಿಯಲ್ಲಿ ರೈತರಲ್ಲಿ ಈ ಕುರಿತು ಜಾಗೃತಿ ಮೂಡಿಸಲು ಬಿಜೆಪಿ ಕ್ರಮಕೈಗೊಂಡಿದ್ದು, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ನೇತೃತ್ವದಲ್ಲಿ ಪಹಣಿ ತಿದ್ದುಪಡಿ ಕುರಿತಂತೆ ಬೃಹತ್ ಹೋರಾಟ ನಡೆಯಲಿದೆ. ಅಲ್ಪಸಂಖ್ಯಾತ ಸಮುದಾಯವನ್ನು ತುಷ್ಟಿಕರಿಸುವ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಈ ಪ್ರತಿಭಟನೆ ಒಂದು ಎಚ್ಚರಿಕೆ ಘಂಟೆ ಆಗಲಿದೆ ಎಂದು ಹೇಳಿದರು.ರಾಜ್ಯಾದ್ಯಂತ ದಾಖಲೆ ತಿದ್ದಿ ವಕ್ಫ್ ಆಸ್ತಿ ಎಂದು ಘೋಷಣೆ ಮಾಡಿಕೊಂಡಿದ್ದಾರೆ. ಇದರ ವಿರುದ್ಧ ರಾಜ್ಯಾದ್ಯಂತ ಬಿಜೆಪಿ ಹೋರಾಟ ಮಾಡಲಿದೆ. ಸರ್ಕಾರ ಕೂಡಲೇ ರೈತರಿಗೆ ನೀಡಿರುವ ನೋಟಿಸ್ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಮತ್ತಿಮನೆ ಸುಬ್ರಹ್ಮಣ್ಯ, ಕಾರ್ಯದರ್ಶಿ ಮೋಹನ್ ಮಂಡಾನಿ, ಪಪಂ ಮಾಜಿ ಸದಸ್ಯರಾದ ಶ್ರೀಪತಿರಾವ್, ಎ.ವಿ.ಮಲ್ಲಿಕಾರ್ಜುನ, ಜಿಪಂ ಮಾಜಿ ಸದಸ್ಯ ಸುರೇಶ್ ಸ್ವಾಮಿರಾವ್, ತಾಪಂ ಮಾಜಿ ಅಧ್ಯಕ್ಷ ಆಲವಳ್ಳಿ ವೀರೇಶ್, ದೇವಾನಂದ್ ಉಮೇಶ್ ಕಂಚುಗಾರ್, ಶಿವಾನಂದ, ಯುವರಾಜ, ನಾಗಾರ್ಜುನ ಸ್ವಾಮಿ, ತೀರ್ಥೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.