ಸಾರಾಂಶ
ಅವಿರೋಧ ಆಯ್ಕೆಯಾಗುತ್ತಿದ್ದಂತೆ ಬ್ಯಾಂಕ್‌ನ ಮುಂಭಾಗದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಾರ್ವಜನಿಕರಿಗೆ ಸಿಹಿ ವಿತರಿಸುವ ಮೂಲಕ ವಿಜಯೋತ್ಸವ ಆಚರಿಸಿದರು.
ಕನ್ನಡಪ್ರಭ ವಾರ್ತೆ ನಾಗಮಂಗಲ
ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ (ಪಿಎಲ್‌ಡಿ) ಬ್ಯಾಂಕ್‌ನ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಬೆಂಬಲಿತ ಶಿಖರನಹಳ್ಳಿ ಎಸ್.ಟಿ.ಗಿರೀಗೌಡ (ದೊರೆಸ್ವಾಮಿ) ಅವಿರೋಧವಾಗಿ ಆಯ್ಕೆಯಾದರು.ಈ ಹಿಂದಿನ ಅಧ್ಯಕ್ಷ ನರಸಿಂಹಮೂರ್ತಿ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆದು ಎಸ್.ಟಿ.ಗಿರೀಗೌಡ ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಆಡಳಿತ ಮಂಡಳಿಯ ಉಳಿದ ಅವಧಿಗೆ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ರೂಪಾ ಪ್ರಕಟಿಸಿದರು.
ನೂತನ ಅಧ್ಯಕ್ಷ ಗಿರೀಗೌಡ ಮಾತನಾಡಿ, ಸಂಸ್ಥೆಯಲ್ಲಿ ಸದಸ್ಯತ್ವ ಹೊಂದಿರುವ ತಾಲೂಕಿನ ರೈತರಿಗೆ ಪಿಎಲ್‌ಡಿ ಬ್ಯಾಂಕ್ ಮೂಲಕ ಸಿಗಬಹುದಾದ ಸರ್ಕಾರದ ವಿವಿಧ ಬಗೆಯ ಸಾಲ ಸವಲತ್ತು ತಲುಪಿಸಲು ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ತಿಳಿಸಿದರು.ಬ್ಯಾಂಕ್‌ನ ಕಾರ್ಯ ಚಟುವಟಿಕೆಗಳನ್ನು ಮತ್ತಷ್ಟು ಹೆಚ್ಚು ಮಾಡುವ ಜೊತೆಗೆ, ಆಡಳಿತ ಮಂಡಳಿಯ ಎಲ್ಲ ನಿರ್ದೇಶಕರ ಮತ್ತು ಹಿರಿಯ ಸಹಕಾರಿಗಳ ಸಲಹೆ ಮಾರ್ಗದರ್ಶನ ಪಡೆದು ಬ್ಯಾಂಕ್‌ನ ಅಭಿವೃದ್ಧಿಗೆ ಪೂರಕವಾಗಿ ಕ್ರಮವಹಿಸಲಾಗುವುದು ಎಂದರು.
ಸಂಸ್ಥೆಗೆ ನಾನು ಅಧ್ಯಕ್ಷನಾಗಲು ಕಾರಣಕರ್ತರಾದ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ರಾಜ್ಯ ಸಾವಯವ ಕೃಷಿ ಉನ್ನತ ಸಮಿತಿ ಮಾಜಿ ಉಪಾಧ್ಯಕ್ಷ ಎಚ್.ಟಿ.ಕೃಷ್ಣೇಗೌಡ, ಎಂಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಬಿ.ರಾಜೇಗೌಡ ಸೇರಿದಂತೆ ಕಾಂಗ್ರೆಸ್ ಪಕ್ಷದ ಎಲ್ಲ ಮುಖಂಡರಿಗೆ ಅಭಿನಂದಿಸುವುದಾಗಿ ತಿಳಿಸಿದರು.ಅವಿರೋಧ ಆಯ್ಕೆಯಾಗುತ್ತಿದ್ದಂತೆ ಬ್ಯಾಂಕ್‌ನ ಮುಂಭಾಗದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಾರ್ವಜನಿಕರಿಗೆ ಸಿಹಿ ವಿತರಿಸುವ ಮೂಲಕ ವಿಜಯೋತ್ಸವ ಆಚರಿಸಿದರು.
ರಾಜ್ಯ ಸಾವಯವ ಕೃಷಿ ಉನ್ನತ ಸಮಿತಿ ಮಾಜಿ ಉಪಾಧ್ಯಕ್ಷ ಎಚ್.ಟಿ.ಕೃಷ್ಣೇಗೌಡ, ಎಸ್‌ಎಲ್‌ಡಿಬಿ ನಿರ್ದೇಶಕ ತಿಮ್ಮರಾಯಿಗೌಡ, ಬ್ಯಾಂಕ್ ನಿರ್ದೇಶಕರಾದ ಎ.ಆರ್.ಸತೀಶ್‌ಚಂದ್ರ, ಸಿ.ಕೆ.ಮಂಜುನಾಥ, ಜಯಮ್ಮ, ನಿಂಗೇಗೌಡ, ವಸಂತಮ್ಮ, ಶಿವರಾಮು, ಕೆ.ಕೃಷ್ಣೇಗೌಡ, ಸೋಮೇಗೌಡ, ಕುಮಾರ್, ಎಂ.ಎ.ತಮ್ಮಣ್ಣಗೌಡ, ಎಸ್.ಎನ್.ಲಕ್ಷ್ಮೀನಾರಾಯಣ, ಬ್ಯಾಂಕ್ ವ್ಯವಸ್ಥಾಪಕ ಸದಾನಂದ ಎಸ್.ರಾಥೋಡ್, ಹಿರಿಯ ಕ್ಷೇತ್ರಾಧಿಕಾರಿ ಡಿ.ಬಿ.ಪರಶಿವ ಸೇರಿದಂತೆ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದು ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.