ಸಾರಾಂಶ
ಕೋಟ್ಯಂತರ ರು. ವ್ಯವಹಾರ ನಡೆಸುತ್ತಿದ್ದರೂ ಮದ್ಯ ಸೇವನೆ, ಊಟದ ಖರ್ಚಿಗಾಗಿ ಕೇವಲ 1500ರು. ಗಳನ್ನು ಫೋನ್ ಪೇ ಮೂಲಕ ಪಡೆದಿದ್ದ ಗುತ್ತಿಗೆದಾರ ಸಚಿನ ಪಂಚಾಳ ಸಾವಿನ ನಿಗೂಢತೆ ಮತ್ತಷ್ಟು ಹೆಚ್ಚಿದ್ದು, ರೆಸ್ಟೋರಂಟ್‌ನಲ್ಲಿನ ಸಿಸಿಟಿವಿ ದೃಶ್ಯಾವಳಿ ಬೆಳಕಿಗೆ ಬಂದಿವೆ.
ಬೀದರ್ : ಕೋಟ್ಯಂತರ ರು. ಸರ್ಕಾರಿ ಟೆಂಡರ್ ವ್ಯವಹಾರ ನಡೆಸುತ್ತಿದ್ದರೂ ಮದ್ಯ ಸೇವನೆ, ಊಟದ ಖರ್ಚಿಗಾಗಿ ಕೇವಲ 1500ರು. ಗಳನ್ನು ಫೋನ್ ಪೇ ಮೂಲಕ ಪಡೆದಿದ್ದ ಗುತ್ತಿಗೆದಾರ ಸಚಿನ ಪಂಚಾಳ ಸಾವಿನ ನಿಗೂಢತೆ ಮತ್ತಷ್ಟು ಹೆಚ್ಚಿದ್ದು, ಮದ್ಯ ಮತ್ತು ಊಟ ಸೇವಿಸಿದ್ದ ಬಾರ್ ಆಂಡ್ ರೆಸ್ಟೋರಂಟ್‌ನಲ್ಲಿನ ಸಿಸಿಟಿವಿ ದೃಶ್ಯಾವಳಿ ಬೆಳಕಿಗೆ ಬಂದಿವೆ.
ಸಾವಿಗೂ ಮುನ್ನ ಡಿ. 24ರಂದು ಸಚಿನ ಪಂಚಾಳ ಚಲನವಲನದ ಸಿಸಿಟಿವಿ ದೃಶ್ಯ ಕನ್ನಡಪ್ರಭದ ಸಹೋದರ ಸಂಸ್ಥೆ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದ್ದು, ಬಾರ್‌ವೊಂದರಲ್ಲಿ ಸಂಜೆ 6.25ರಿಂದ ರಾತ್ರಿ 8.38ರ ವರೆಗೆ ಎರಡು ತಾಸು ಕಳೆದಿದ್ದ ಸಚಿನ್ ಬಿಲ್ ಪೇ ಮಾಡಲು, ತನ್ನ ಸಹೋದರಿಗೆ ಫೋನಾಯಿಸಿದ್ದು, ನಂತರ ಕುಟುಂಬದ ಸ್ನೇಹಿತರೊಬ್ಬರಿಂದ ಬಾರ್‌ನ ವೇಟರ್ ಮೊಬೈಲ್‌ಗೆ 1500ರು.ಗಳ ಫೋನ್ ಪೆ ಹಾಕಿಸಿಕೊಂಡಿದ್ದು ನಂತರ ಅದರಲ್ಲಿ 600ರು. ಹೋಟೆಲ್ ಬಿಲ್ ಪಾವತಿಸಿ ಉಳಿದ ಹಣ ಪಡೆದು ಅಲ್ಲಿಂದ ಹೊರಟು ಹೋದ ದೃಶ್ಯ ಸಿಸಿ ಟಿವಿಯಲ್ಲಿ ದಾಖಲಾಗಿವೆ.
ಬಾರ್ ಪ್ರವೇಶಕ್ಕೂ ಮುನ್ನ ಸಚಿನ ಮುಖಕ್ಕೆ ಮಾಸ್ಕ್ ಧರಿಸಿಕೊಂಡು ಆಗಮಿಸಿದ್ದ ಮೃತ ಸಚಿನ ಸಿಸಿಟಿವಿಯಲ್ಲಿ ಕಂಡಂತೆ ವಾಪಸ್ ಹೋಗುವವರೆಗೂ ಮಾಸ್ಕ್ ಧರಿಸಿಯೇ ಇದ್ದರು. ಹೋಟೆಲ್ ವೇಟರ್‌ನನ್ನು ಮಾಧ್ಯಮದವರು ಮಾತನಾಡಿಸಿದಾಗ 10 ನಿಮಿಷದ ವರೆಗೆ ನನ್ನ ಫೋನ್ ಅವರ ಬಳಿಯೇ ಇತ್ತು, ಕೊನೆಗೆ ಹೋಗುವಾಗ ಯಾರ ಕರೆ ಬಂದರೂ ಸ್ವೀಕರಿಸದಂತೆ ತಿಳಿಸಿ ಹೋದರು ಎಂದು ತಿಳಿದಸಿದ್ದು, ಸಚಿನ ಯಾರಿಗೆಲ್ಲಾ ಕರೆ ಮಾಡಿದ್ದ, ಯಾತಕ್ಕಾಗಿ ಕರೆ ಮಾಡಿದ್ದ ಎಂಬುದು ಸೇರಿದಂತೆ ಸಾವಿನ ನಿಗೂಢತೆ ಮತ್ತಷ್ಟು ಹೆಚ್ಚಿದೆ.