ಸಾರಾಂಶ
ದೇಶದ ಹುತಾತ್ಮ ಯೋಧರ ತ್ಯಾಗ, ಬಲಿದಾನ ಯುವಕರಿಗೆ ಪ್ರೇರಣೆಯಾಗಿದೆ ಎಂದು ಲೋಕೋಪಯೋಗಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ದೇಶದ ಹುತಾತ್ಮ ಯೋಧರ ತ್ಯಾಗ, ಬಲಿದಾನ ಯುವಕರಿಗೆ ಪ್ರೇರಣೆಯಾಗಿದೆ ಎಂದು ಲೋಕೋಪಯೋಗಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.ನಗರದ ಕೆಪಿಟಿಸಿಎಲ್ ಭವನದಲ್ಲಿ ಶುಕ್ರವಾರ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಬೆಳಗಾವಿ ಘಟಕದ ವತಿಯಿಂದ ಆಯೋಜಿಸಿದ್ದ 25ನೇ ಕಾರ್ಗಿಲ್ ವಿಜಯೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರಾಣದ ಹಂಗು ತೊರೆದು ದೇಶ ಹಾಗೂ ದೇಶವಾಸಿಗಳ ರಕ್ಷ ಣೆಗಾಗಿ ಹೋರಾಡುತ್ತಿರುವ ಯೋಧರ ತ್ಯಾಗ ಬಲಿದಾನಕ್ಕೆ ಬೆಲೆ ಕಟ್ಟಲಾಗದು ಎಂದ ಅವರು, ಯುವಕರು ದೇಶವನ್ನು ಪ್ರೀತಿಸಬೇಕು. ದುಶ್ಚಟಗಳಿಗೆ ಬಲಿಯಾಗದೇ ದೇಶ ಸೇವೆಯಲ್ಲಿ ತೊಡಗಲು ಮುಂದಾಗಬೇಕು. ದೇಶಕ್ಕೆ ಯೋಧರು, ರೈತರ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.ಗಡಿಯಲ್ಲಿ ಕಾಯುವಲ್ಲಿ ಯೋಧರ ಪಾತ್ರ ಪ್ರಮುಖವಾಗಿದೆ. ದೇಶಕ್ಕಾಗಿ ಕುಟುಂಬ ತೊರೆದು ದೇಶದ ರಕ್ಷಣೆಗೆ ರಕ್ಷಾಕವಚದಂತ್ತಿರುವ ಯೋಧರ ಪಾತ್ರ ದೊಡ್ಡದು. ಅವರ ಶ್ರಮದಿಂದ ನಾಡಿನಲ್ಲಿ ನಾವು ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದೇವೆ. ಇತಿಹಾಸ ಮೆಲುಕು ಹಾಕುತ್ತಾ ಹೋದಾಗ ದೇಶಕ್ಕೆ ಯೋಧರ ಕೊಡುಗೆ ಬಳಷ್ಟಿದೆ. ಕಾರ್ಗಿಲ್ ಯುದ್ದ ಭೂಮಿಯಲ್ಲಿ ದೇಶಕ್ಕಾಗಿ ಹೋರಾಡಿದವರಲ್ಲಿ ಜಿಲ್ಲೆಯಲ್ಲಿ ಐವರು ಯೋಧರನ್ನು ಕಳೆದುಕೊಂಡಿದ್ದೇವೆ, ಅದರಲ್ಲಿ ಇಬ್ಬರು ಯೋಧರು ನಮ್ಮ ಜೊತೆಯಲ್ಲಿರುವುದು ನಮ್ಮ ಸೌಭಾಗ್ಯ. ಸಮಾಜ ಸೇವೆ ಹಾಗೂ ಅಭಿವೃದ್ಧಿಗೆ ಸರ್ಕಾರಗಳು ಯೋಧರ ಸಲಹೆ ಬಳಿಸಿಕೊಂಡಾಗ ದೇಶ ಇನ್ನಷ್ಟು ಪ್ರಗತಿಯತ್ತ ಸಾಗಬಹುದು ಎಂದು ಹೇಳಿದರು.
ಇದೇ ವೇಳೆ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ವತಿಯಿಂದ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಸನ್ಮಾನಿಸಲಾಯಿತು. ಹುತಾತ್ಮ ಸೈನಿಕರ ಕುಟುಂಬ ಸದಸ್ಯರಿಗೆ ಹಾಗೂ ಯುದ್ಧದಲ್ಲಿ ಗಾಯಗೊಂಡ ಮಾಜಿ ಸೈನಿಕರನ್ನು ಸಚಿವ ಸತೀಶ ಜಾರಕಿಹೊಳಿ ಅವರು ಸನ್ಮಾನಿಸಿ ಕೃತಜ್ಞತೆ ಸಲ್ಲಿಸಿದರು. ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ಮಾಜಿ ಸೈನಿಕರು ಉಪಸ್ಥಿತರಿದ್ದರು.