ಸಾರಾಂಶ
ಎರಡು ದಿನಗಳ ಹಿಂದೆಯೂ ಇದೇ ರೀತಿಯಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿದ್ದ ಕಾರ್ಮಿಕರ ಸುಮಾರು 8,000 ನಗದು ಕಳವಾಗಿತ್ತು.
ಉಳ್ಳಾಲ: ಮಾಡೂರು ಸಮೀಪ ನಿರ್ಮಾಣ ಹಂತದ ಕಟ್ಟಡದಲ್ಲಿ ಕೂಲಿ ಕಾರ್ಮಿಕರಿಬ್ಬರು ಇಟ್ಟಿದ್ದ ಬಟ್ಟೆಗಳಿಂದ ಹಣವನ್ನು ಪ್ಯಾಂಟ್ ಧರಿಸಿದ್ದ ಅಪರಿಚಿತ ಕಳ್ಳನೊಬ್ಬ ಕಳವು ಮಾಡಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ. ಕಳ್ಳನ ಮುಖ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮಾಡೂರು ನಿವಾಸಿ ಶಶಿ ಎಂಬವರಿಗೆ ಸೇರಿದ ಕಟ್ಟಡದಿಂದ ಕಳವು ನಡೆದಿದೆ. ನಿರ್ಮಾಣ ಹಂತದ ಕಟ್ಟಡದಲ್ಲಿ ಇಬ್ಬರು ಕಾರ್ಮಿಕರು ಟೈಲ್ಸ್ ಹಾಕುವ ಕೆಲಸವನ್ನು ನಿರ್ವಹಿಸುತ್ತಿದ್ದರು. ಸಂಜೆ 4.30 ಸುಮಾರಿಗೆ 30 ರಿಂದ 35ರ ಹರೆಯದ ವ್ಯಕ್ತಿ ಕಟ್ಟಡದೊಳಕ್ಕೆ ತೆರಳಿದ್ದಾನೆ. ಕಾರ್ಮಿಕರಿಬ್ಬರು ಕೆಲಸ ಮಾಡುತ್ತಿದ್ದ ಕೋಣೆಯನ್ನು ಬಿಟ್ಟು ಬೇರೆ ಕೋಣೆಗೆ ತೆರಳಿ ಕಾರ್ಮಿಕರು ಬಟ್ಟೆಗಳಲ್ಲಿ ಇರಿಸಿದ್ದ ಸುಮಾರು 2 ಸಾವಿರ ರು. ನಗದು ಕಳವು ಮಾಡಿದ್ದಾನೆ. ಸಂಜೆ ವೇಳೆ ಕಾರ್ಮಿಕರು ಮನೆಗೆ ಹೋಗಲು ಬಟ್ಟೆ ಹಾಕಲು ಬಂದಾಗ ಹಣ ಕಳವಾಗಿರುವುದು ಗೊತ್ತಾಗಿದೆ. ಕಾರ್ಮಿಕರು ಸಿಸಿಟಿವಿ ಮೂಲಕ ಪರಿಶೀಲಿಸಿದಾಗ ವ್ಯಕ್ತಿಯೊಬ್ಬ ಕಳವು ಮಾಡಿ, ದೇರಳಕಟ್ಟೆ ಕಡೆಗೆ ಹೋಗುವ ರಿಕ್ಷಾವನ್ನು ಹತ್ತಿರುವುದು ಬೆಳಕಿಗೆ ಬಂದಿದೆ. ಎರಡು ದಿನಗಳ ಹಿಂದೆಯೂ ಇದೇ ರೀತಿಯಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿದ್ದ ಕಾರ್ಮಿಕರ ಸುಮಾರು 8,000 ನಗದು ಕಳವಾಗಿತ್ತು.ಈ ಕುರಿತು ವೀಡಿಯೋ ಹಾಗೂ ಪ್ಯಾಂಟ್ ಗ್ಯಾಂಗ್ ಸಕ್ರಿಯ ಎಂಬ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಸ್ಥಳೀಯರಲ್ಲಿ ಆತಂಕ ತಂದಿದೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.