ಸಾರಾಂಶ
ಕೊಪ್ಪಳ:
ಕಲ್ಯಾಣ ಕರ್ನಾಟಕ ಭಾಗಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ₹ 5000 ಕೋಟಿ ವಿಶೇಷ ಅನುದಾನ ನೀಡಿದ್ದಾರೆ. ಅದರಲ್ಲಿ ಶೇ.25ರಷ್ಟು ಶಿಕ್ಷಣಕ್ಕೆ ವ್ಯಯಿಸಿದರೂ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಕೊನೆಯ ಸ್ಥಾನದಲ್ಲಿರುವುದು ನೋವಿನ ಸಂಗತಿ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಬೇಸರ ವ್ಯಕ್ತಪಡಿಸಿದರು.ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾಡಳಿತ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಶಿಕ್ಷಕರ ದಿನಾಚರಣೆ ಮತ್ತು ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಶೈಕ್ಷಣಿಕ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಿ ಮೂಲಭೂತ ಸೌಕರ್ಯ ಒದಗಿಸಲಾಗುತ್ತದೆ. ಆದರೂ ಸಹ ಫಲಿತಾಂಶ ಸುಧಾರಣೆಯಾಗುತ್ತಿಲ್ಲ. ಇದನ್ನು ನೀವು ಗಂಭೀರವಾಗಿ ಪರಿಗಣಿಸಿ, ಫಲಿತಾಂಶ ಸುಧಾರಣೆಗೆ ಆದ್ಯತೆ ನೀಡಬೇಕೆಂದು ಶಿಕ್ಷಕರಿಗೆ ಹೇಳಿದರು. ಸರ್ಕಾರ ನೌಕರರ ಹಿತಕಾಯಲು ವಿಶೇಷ ಆದ್ಯತೆ ನೀಡಿದೆ. 7ನೇ ವೇತನ ಆಯೋಗ ಜಾರಿಗೊಳಿಸಿ ಶಿಕ್ಷಕರ ಅನೇಕ ಸಮಸ್ಯೆ ಇತ್ಯರ್ಥಗೊಳಿಸಿದೆ. ಅವರ ಕಲ್ಯಾಣಕ್ಕಾಗಿಯೂ ಹಲವಾರು ಯೋಜನೆ ಜಾರಿ ಮಾಡಿದೆ ಎಂದರು.ವಿಪ ಸದಸ್ಯೆ ಹೇಮಲತಾ ನಾಯಕ ಮಾತನಾಡಿ, ಶಿಕ್ಷಣದಿಂದ ಪ್ರತಿಯೊಬ್ಬರಿಗೂ ಗೌರವ ದೊರೆಯುತ್ತದೆ. ಬದುಕು ಹಸನವಾಗುತ್ತದೆ. ಅಂಥ ಶಿಕ್ಷಣ ನೀಡುವ ಶಿಕ್ಷಕರ ಕೊಡುಗೆ ಬಹಳ ದೊಡ್ಡದಿದೆ ಎಂದ ಅವರು, ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಪಡೆದ ಮಕ್ಕಳಿಗೆ ಉತ್ತಮ ಭವಿಷ್ಯವಿದೆ. ಹೀಗಾಗಿ ಶಿಕ್ಷಕರು ಕೂಡ ಅವರ ಭವಿಷ್ಯ ರೂಪಿಸುವಲ್ಲಿ ಗಮನಹರಿಸಬೇಕು ಎಂದು ಹೇಳಿದರು.
ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಮಾತನಾಡಿ, ಶಿಕ್ಷಣದಿಂದ ದೇಶದ ಸುಧಾರಣೆ ಸಾಧ್ಯ. ಹೀಗಾಗಿ ಶಿಕ್ಷಣ ಎಲ್ಲರಿಗೂ ಅವಶ್ಯ. ಆಧುನಿಕ ಯುಗದಲ್ಲಿ ಶಿಕ್ಷಣ ಇಲ್ಲದ ಮನುಷ್ಯನಿಗೆ ಬೆಲೆ ಇಲ್ಲದಂತಾಗಿದೆ. ಹೀಗಾಗಿ ಎಲ್ಲರೂ ಶಿಕ್ಷಣ ಪಡೆದುಕೊಂಡು ಉತ್ತಮ ನಾಗರಿಕರಾಗಬೇಕು ಎಂದರು.ಈ ವೇಳೆ ಪ್ರಶಸ್ತಿ ಪಡೆದ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ್ ಗುಪ್ತ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ರೆಡ್ಡಿ ಶ್ರೀನಿವಾಸ್, ಸರ್ಕಾರಿ ನೌಕರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮನ್ನವರ್, ಡಿಡಿಪಿಐ ಸೋಮಶೇಖರ್‌ಗೌಡ, ಬಾಬುಸಾಬ್ ಲೈನ್‌ದಾರ್, ಮಾರ್ತಾಂಡರಾವ್ ದೇಸಾಯಿ, ಉಮೇಶ ಕಂಬಳಿ, ಮಾರುತಿ ಮ್ಯಾಗಳಮನಿ, ಅಯ್ಯಣ್ಣ ಮರದೂರು, ಶಿವಾನಂದಯ್ಯ ಕುಣಿಕೇರಿಮಠ, ಮಮತಾ ಕೊಡಬಾಳ್ ಸೇರಿದಂತೆ ಜಿಲ್ಲೆಯ ಶಿಕ್ಷಕರು ಇದ್ದರು.ತಡವಾದ ಕಾರ್ಯಕ್ರಮ:ಶಿಕ್ಷಣ ದಿನಾಚರಣೆ ಸೆ. 5ರ ಬದಲು 6ಕ್ಕೆ ಮಾಡಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಪ್ರತಿ ವರ್ಷ ಶಿಕ್ಷಕರ ದಿನಾಚರಣೆಯಂದೇ ಆಚರಿಸುವಂತೆ ಶಿಕ್ಷಕರ ಸಂಘಟನೆಗಳು ಒತ್ತಾಯಿಸಿವೆ. ಅದನ್ನು ಬದಲಾಯಿಸಿ ಆಚರಿಸುವುದು ಸೂಕ್ತವಲ್ಲ ಎನ್ನುವ ಒತ್ತಾಯ ಕೇಳಿ ಬಂದಿತು. ಪ್ರಶಸ್ತಿಗಳನ್ನು ಶಿಕ್ಷಕರ ದಿನಾಚರಣೆ ಮುನ್ನಾದಿನ ಘೋಷಿಸಿದರೆ ಶಿಕ್ಷಕರು ಖುಷಿಪಡುತ್ತಾರೆ. ಆದರೆ, ಈ ವರ್ಷ ಶಿಕ್ಷಕರ ದಿನಾಚರಣೆ ದಿನ ಸಂಜೆ ಘೋಷಿಸಿದ್ದು ಟೀಕೆಗೆ ಗುರಿಯಾಯಿತು. ಶಿಕ್ಷಕರ ಪ್ರಶಸ್ತಿ ಆಯ್ಕೆಯಲ್ಲಿ ಶಿಕ್ಷಕರ ಸಂಘದ ಪದಾಧಿಕಾರಿಗಳೇ ಪ್ರಮುಖ ಪಾತ್ರವಹಿಸಿರುವುದಕ್ಕೆ ಟೀಕೆ ವ್ಯಕ್ತವಾಗಿದೆ.