ಜಾನುವಾರು ವ್ಯಾಪಾರ ಹಾಗೂ ಕೃಷಿ ಕುಟುಂಬದ ಹಿನ್ನಲೆಯಿಂದ ಬಂದ ಪ್ರೊ. ಸದಾನಂದ ಕನವಳ್ಳಿ ಶ್ರೇಷ್ಠ ಇಂಗ್ಲಿಷ್‌ ಪ್ರಾಧ್ಯಾಪಕರಾಗಿ ಹೊರಹೊಮ್ಮಿ ತಮ್ಮ ವ್ಯಕ್ತಿತ್ವದಿಂದ ಅಪಾರ ಶಿಷ್ಯ ಹಾಗೂ ಗೆಳೆಯರ ಬಳಗದ ಮೇಲೆ ಗಾಢ ಪರಿಣಾಮ ಬೀರಿದ್ದರು.

ಧಾರವಾಡ:

ಜಾನುವಾರು ವ್ಯಾಪಾರ ಹಾಗೂ ಕೃಷಿ ಕುಟುಂಬದ ಹಿನ್ನಲೆಯಿಂದ ಬಂದ ಪ್ರೊ. ಸದಾನಂದ ಕನವಳ್ಳಿ ಶ್ರೇಷ್ಠ ಇಂಗ್ಲಿಷ್‌ ಪ್ರಾಧ್ಯಾಪಕರಾಗಿ ಹೊರಹೊಮ್ಮಿ ತಮ್ಮ ವ್ಯಕ್ತಿತ್ವದಿಂದ ಅಪಾರ ಶಿಷ್ಯ ಹಾಗೂ ಗೆಳೆಯರ ಬಳಗದ ಮೇಲೆ ಗಾಢ ಪರಿಣಾಮ ಬೀರಿದ್ದರು ಎಂದು ವಿಶ್ರಾಂತ ಪ್ರಾಧ್ಯಾಪಕ ಡಾ. ಕೆ.ಎಸ್. ಕೌಜಲಗಿ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘವು ಪ್ರೊ. ಸದಾನಂದ ಕನವಳ್ಳಿ ಸ್ಮರಣಾರ್ಥ ದತ್ತಿಯಲ್ಲಿ `ಪ್ರೊ. ಸದಾನಂದ ಕನವಳ್ಳಿ ಅವರ ವ್ಯಕ್ತಿತ್ವ’ ಕುರಿತು ಉಪನ್ಯಾಸ ನೀಡಿದರು. ಕರ್ನಾಟಕ ಕಾಲೇಜಿನ ಪ್ರೊ. ಅರ್ಮೆಂಡೋ ಮೆನೇಜಿಸ್ ಮತ್ತು ಪ್ರೊ. ಎಸ್.ಎಸ್. ಭೂಸನೂರಮಠ ಸಂಪಾದಕತ್ವದ ಶೂನ್ಯ ಸಂಪಾದನೆಯ ರಚನೆಯ ಸಂದರ್ಭದಲ್ಲಿ ಕನವಳ್ಳಿಯವರು ಅಪಾರ ಸಹಕಾರ ನೀಡಿದ ಕ್ಷಣಗಳನ್ನು ಸ್ಮರಿಸಿದರು.

ಡಾ. ಷಡಕ್ಷರಿ ಶೆಟ್ಟರ್‌ ಮತ್ತು ಡಾ. ಎಂ.ಎಂ. ಕಲಬುರ್ಗಿ ಮುಂತಾದ ಅಪಾರ ಗೆಳೆಯರ ಬಳಗದೊಂದಿಗೆ ಸಾಹಿತ್ಯ, ಸಂಗೀತ, ಸಂಸ್ಕೃತಿಯನ್ನು ಶ್ರೀಮಂತಗೊಳಿಸುವಲ್ಲಿ ಶ್ರಮಿಸಿದವರು. ಪುಟ್ಟರಾಜ ಗವಾಯಿಗಳ ಟ್ರಸ್ಟ್, ಮನ್ಸೂರ ಟ್ರಸ್ಟ್ ಮುಂತಾದ ಸಂಘ, ಸಂಸ್ಥೆಗಳನ್ನು ಹುಟ್ಟು ಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕ್ರೀಡೆಯಲ್ಲಿ ಅತೀವ ಆಸಕ್ತಿ ಹೊಂದಿದ್ದ ಇವರು ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ, ಸಹಕಾರ ನೀಡುತ್ತಿದ್ದ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಪ್ರಾಧ್ಯಾಪಕರಾಗಿದ್ದರು ಎಂದು ಕೌಜಲಗಿ ಹೇಳಿದರು.

ವಿಶ್ರಾಂತ ಪ್ರಾಚಾರ್ಯ ಪ್ರೊ. ಸಿ.ಬಿ. ಕನವಳ್ಳಿ ಅಧ್ಯಕ್ಷತೆ ವಹಿಸಿದ್ದರು. ಗುರು ಹಿರೇಮಠ ಸ್ವಾಗತಿಸಿದರು. ಪ್ರಿ. ಶಶಿಧರ ತೋಡಕರ ಪ್ರಾಸ್ತಾವಿಕ ಮಾತನಾಡಿದರು. ಶಂಕರ ಕುಂಬಿ ನಿರೂಪಿಸಿದರು. ವೀರಣ್ಣ ಒಡ್ಡೀನ ವಂದಿಸಿದರು. ಆರಂಭದಲ್ಲಿ ಹಿರಿಯ ಸಂಗೀತಗಾರ್ತಿ ಸುಜಾತಾ ಗುರವ ಸಂಗೀತ ಪ್ರಸ್ತುತಪಡಿಸಿದರು. ಅಲ್ಲಮಪ್ರಭು ಕಡಕೋಳ ತಬಲಾ ಹಾಗೂ ಡಾ. ಪರಶುರಾಮ ಕಟ್ಟಿ ಸಂಗಾವಿ ಹಾರ್ಮೋನಿಯಂ ಸಾಥ್ ನೀಡಿದರು.