ಸದ್ಗುರು ರೇಣುಕಾಚಾರ್ಯರ ಜಯಂತಿ ಸರಳ ಆಚರಣೆ

| Published : Mar 24 2024, 01:37 AM IST

ಸಾರಾಂಶ

ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣಕ್ಕೆ ನಗರ ಸೇರಿ ಜಿಲ್ಲಾದ್ಯಂತ ಜಗದ್ಗುರು ರೇಣುಕಾಚಾರ್ಯರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.

ರಾಯಚೂರು: ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣಕ್ಕೆ ನಗರ ಸೇರಿ ಜಿಲ್ಲಾದ್ಯಂತ ಜಗದ್ಗುರು ಶ್ರೀ ರೇಣುಕಾಚಾರ್ಯರ ಜಯಂತಿಯನ್ನು ಶನಿವಾರ ಸರಳವಾಗಿ ಆಚರಿಸಲಾಯಿತು.

ನಗರ ಸೇರಿದಂತೆ ಜಿಲ್ಲೆ ವಿವಿಧ ತಾಲೂಕು, ಹೋಬಳಿ ಮಟ್ಟದಲ್ಲಿ ಜಯಂತಿ ಕಾರ್ಯಕ್ರಮ ನಿಮಿತ್ತ ರೇಣುಕಾಚಾರ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರ ಜೀವನ-ಸಾಧನೆಯನ್ನು ಸ್ಮರಿಸಲಾಯಿತು.

ಜಿಲ್ಲಾಡಳಿತದಿಂದ ನಗರದ ಪಂಡಿತ್‌ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ರೇಣುಕಾಚಾರ್ಯ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು. ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ತಹಸೀಲ್ದಾರ ಸುರೇಶ ವರ್ಮಾ ಸೇರಿ ಇತರರು ಉಪಸ್ಥಿತರಿದ್ದರು.

ಸೋಮವಾರಪೇಟೆ ಹಿರೇಮಠದ ಅಭಿನವ ರಾಚೋಟಿ ವೀರ ಶಿವಾಚಾರ್ಯ ಸ್ವಾಮೀಜಿ, ಕಿಲ್ಲೆ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ, ಮಂಗಳವಾರಪೇಟೆ ಹಿರೇಮಠದ ವೀರ ಸಂಗಮೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಜಿಲ್ಲಾ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಶರಣಭೂಪಾಲ ನಾಡಗೌಡ, ಬಸವ ಕೇಂದ್ರದ ಅಧ್ಯಕ್ಷ ರಾಚನಗೌಡ ಕೋಳೂರು, ಸಮಾಜದ ಮುಖಂಡರಾದ ಪಂಪಾಪತಿ ಶಾಸಿ, ಶಿವಕುಮಾರ ಚುಕ್ಕಿ, ಅಶೋಕ ಪಾಟೀಲ್, ಎಸ್.ವಿಜಯಕುಮಾರ ಪಾಟೀಲ್, ವೀರಯ್ಯಸ್ವಾಮಿ ಆಶಾಪುರ, ಪ್ರಭು ಶಾಸಿ, ಶರಣಬಸವ ಹಿರೇಮಠ, ವಿಜಯಕುಮಾರ ಸಜ್ಜನ್ ಉಪಸ್ಥಿತರಿದ್ದರು.

ಸ್ಥಳೀಯ ಹೊರವಲಯದ ಬೈಪಾಸ್ ರಸ್ತೆಯಲ್ಲಿರುವ ರೇಣುಕಾಚಾರ್ಯ ವೃತ್ತದಲ್ಲಿ ಜಿಲ್ಲಾ ವೀರಶೈವ ಲಿಂಗಾಯತ ಸಮಾಜ ಮತ್ತು ಜಂಗಮ ಸಮಾಜದಿಂದ ರೇಣುಕಾಚಾರ್ಯ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಲಾಯಿತು. ನಂತರ ವೀರಶೈವ ಮಹಾಂತೇಶ ಕಲ್ಯಾಣ ಮಂಟಪದಲ್ಲಿ ಸಾಂಕೇತಿಕವಾಗಿ ವೇದಿಕೆ ಕಾರ್ಯಕ್ರಮ ನಡೆಸಲಾಯಿತು.

ಅದಕ್ಕೂ ಮುನ್ನ ತಾಲೂಕು ಜಂಗಮ ಸಮಾಜದಿಂದ ಸೋಮವಾರಪೇಟೆ ಹಿರೇಮಠದಿಂದ ರೇಣುಕಾಚಾರ್ಯ ವೃತ್ತದವರೆಗೆ ಬೈಕ್ ರ್‍ಯಾಲಿ ನಡೆಸಲಾಯಿತು. ವೃತ್ತದಲ್ಲಿ ಸಮಾಜದಿಂದ ಶುದ್ಧ ಕುಡಿಯುವ ನೀರಿನ ಅರವಟಿಗೆಗೆ ಚಾಲನೆ ನೀಡಲಾಯಿತು.