ಸಾರಾಂಶ
- ನ್ಯಾಮತಿ ಸರ್ಕಾರಿ ಕಾಲೇಜಿನಲ್ಲಿ ಎಚ್‌ಐವಿ ಜಾಗೃತಿ ಕಾರ್ಯಕ್ರಮ
- - -ಕನ್ನಡಪ್ರಭ ವಾರ್ತೆ ನ್ಯಾಮತಿ
ಎಚ್‌ಐವಿ ಸೋಂಕು ದೇಹದ ರಕ್ಷಣಾ ವ್ಯವಸ್ಥೆ ಮೇಲೆ ದಾಳಿ ಮಾಡುವ ವೈರಸ್ಸಾಗಿದೆ. ಈ ವೈರಸ್ ಜೀವಕೋಶಗಳ ಮೇಲೆ ದಾಳಿ ಮಾಡುವುದರಿಂದ ಸೋಂಕು ಮತ್ತು ಕ್ಯಾನ್ಸರ್ ವಿರುದ್ಧ ಹೋರಾಡುವ ದೇಹದ ಸಾಮರ್ಥ್ಯವನ್ನೇ ದುರ್ಬಲಗೊಳಿಸುತ್ತದೆ ಎಂದು ಹೊನ್ನಾಳಿ ಸರ್ಕಾರಿ ಆಸ್ಪತ್ರೆಯ ಕೌನ್ಸಿಲರ್ ಭಾಗ್ಯಮ್ಮ ಹೇಳಿದರು.ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಯುವ ರೆಡ್ ಕ್ರಾಸ್ ಘಟಕ, ಗ್ರಂಥಾಲಯ ವಿಭಾಗ ಹಾಗೂ ಬೆಂಗಳೂರಿನ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿ ಸಹಯೋಗದಲ್ಲಿ ಎಚ್‌ಐವಿ ಏಡ್ಸ್ ಸಾಂಕ್ರಾಮಿಕ ರೋಗ ಜಾಗೃತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.
ಎಚ್‌ಐವಿ ರೋಗವು ರಕ್ತ, ವೀರ್ಯ, ಯೋನಿದ್ರವ, ಎದೆಹಾಲು ಮುಂತಾದ ದ್ರವಗಳ ಮೂಲಕ ಹರಡುತ್ತದೆ. ಎಚ್‌ಐವಿ ತಡೆಗಟ್ಟುವಲ್ಲಿ ಯುವಜನರಲ್ಲಿ, ಸಾರ್ವಜನಿಕರಲ್ಲಿ ಆಳವಾದ ಜ್ಞಾನದ ಕೊರತೆ ಇದೆ. ಪರಿಣಾಮಕಾರಿ ಸುರಕ್ಷಿತ ಕ್ರಮಗಳೊಂದಿಗೆ ಲೈಂಗಿಕ ಕ್ರಿಯೆ ಕೈಗೊಳ್ಳುವುದರಿಂದ ಎಚ್‌ಐವಿ ಏಡ್ಸ್ ರೋಗವನ್ನು ತಡೆಗಟ್ಟಬಹುದು ಎಂದರು.ಎಚ್‌ಐವಿ ರೋಗ ದೇಹದಲ್ಲಿ ಹರಡಿದ ಮೇಲೆ ಕ್ರಮ ಕೈಗೊಳ್ಳುವ ಮೊದಲು ರೋಗ ಹರಡದಂತೆ ಸುರಕ್ಷಿತ ಜೀವನ ಕ್ರಮ ಕೈಗೊಳ್ಳುವುದು ಮುಖ್ಯ. ಯುವಪೀಳಿಗೆ ಇಂತಹ ರೋಗದ ಬಗ್ಗೆ ಮುಚ್ಚುಮರೆ ಇಲ್ಲದೇ ಗಮನಹರಿಸುವಂತೆ ಸಲಹೆ ನೀಡಿ ಎಚ್‌ಐವಿ ರೋಗ ಲಕ್ಷಣ ಜಾಗೃತಿ ಹಾಗೂ ಅನುಸರಿಸಬೇಕಾದ ಕ್ರಮದ ಪ್ರತಿಗಳನ್ನು ಹಂಚಿದರು.
ಕಾರ್ಯಕ್ರಮ ಆಯೋಜಕರಾದ ಕಾಲೇಜಿನ ಗ್ರಂಥಪಾಲಕ ಡಾ.ರಾಜಶೇಖರ್ ಮಾತನಾಡಿ, ಏಡ್ಸ್‌ನಂತ ಮಾರಕ ರೋಗದ ಬಗ್ಗೆ ತಿಳಿದುಕೊಳ್ಳುವ ಹಾಗೂ ನಿಯಂತ್ರಣ ಮಾಡುವಲ್ಲಿ ಯುವಪೀಳಿಗೆ ಹಾಗೂ ವಿದ್ಯಾರ್ಥಿಗಳ ಪಾತ್ರ ಬಹುಮುಖ್ಯವಿದೆ. ಸ್ವಾಸ್ಥ್ಯ ಸಮಾಜಕ್ಕಾಗಿ ಮುಜುಗರವಿಲ್ಲದೇ ರೋಗದ ಬಗ್ಗೆ ಮಾಹಿತಿ ಅರಿತು, ನಿಯಂತ್ರಣಕ್ಕೆ ಶ್ರಮಿಸಬೇಕು ಎಂದು ಹೇಳಿದರು.ಕಾಲೇಜಿನ ಪ್ರಾಚಾರ್ಯ ಡಿ.ಶಿವಕುಮಾರ ಅಧ್ಯಕ್ಷತೆ ವಹಿಸಿ, ಎಚ್‌ಐವಿ ಬಗ್ಗೆ ವಿದ್ಯಾರ್ಥಿಗಳಿಗೆ ಸಂಕ್ಷಿಪ್ತ ಸೂಕ್ಷ್ಮ ಮಾಹಿತಿ ನೀಡಿದರು. ಉಪನ್ಯಾಸಕರಾದ ಗಿರೀಶ್, ಜ್ಯೋತಿ, ಚಂದ್ರಪ್ಪ, ನಾಗರತ್ನ, ರಶ್ಮಿ, ರೇವಣಸಿದ್ದಪ್ಪ, ಸಿಬ್ಬಂದಿ ಮಹೇಶ್ ಸೇರಿದಂತೆ ಮತ್ತಿತರರಿದ್ದರು.
- - --ಚಿತ್ರ:
ನ್ಯಾಮತಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಎಚ್‌ಐವಿ ಏಡ್ಸ್ ಸಾಂಕ್ರಾಮಿಕ ರೋಗ ಜಾಗೃತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಹೊನ್ನಾಳಿ ಸರ್ಕಾರಿ ಆಸ್ಪತ್ರೆ ಕೌನ್ಸಿಲರ್ ಭಾಗ್ಯಮ್ಮ ಮಾತನಾಡಿದರು.