ಹೋರಾಟದ ಫಲವಾಗಿ ಕಾರ್ಮಿಕರಿಗೆ ಹಲವಾರು ಯೋಜನೆಗಳು ಜಾರಿಯಾಗಿದ್ದು ಅದನ್ನು ಸಂಘಟಿತರಾಗುವ ಮೂಲಕ ಕಾರ್ಮಿಕರು ಪಡೆದುಕೊಳ್ಳಬೇಕು ಎಂದು ಐಎನ್‌ಟಿಯುಸಿ ಜಿಲ್ಲಾಧ್ಯಕ್ಷ ಗೋವಿಂದರಾಜು ಕರೆ ನೀಡಿದರು.
ಕನ್ನಡಪ್ರಭ ವಾರ್ತೆ, ತುಮಕೂರುಹೋರಾಟದ ಫಲವಾಗಿ ಕಾರ್ಮಿಕರಿಗೆ ಹಲವಾರು ಯೋಜನೆಗಳು ಜಾರಿಯಾಗಿದ್ದು ಅದನ್ನು ಸಂಘಟಿತರಾಗುವ ಮೂಲಕ ಕಾರ್ಮಿಕರು ಪಡೆದುಕೊಳ್ಳಬೇಕು ಎಂದು ಐಎನ್‌ಟಿಯುಸಿ ಜಿಲ್ಲಾಧ್ಯಕ್ಷ ಗೋವಿಂದರಾಜು ಕರೆ ನೀಡಿದರು.ನವ ನಿರ್ಮಾಣ ಕಟ್ಟಡ ಕಟ್ಟುವವರ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರ ಕರ್ನಾಟಕ ಸ್ಟೇಟ್ ಫೆಡರೇಷನ್ ಐಎನ್‌ಟಿಯುಸಿ ಸಂಯೋಜಿತ ಸಂಘ ಬೆಳಧರದಲ್ಲಿ ಆಯೋಜಿಸಿದ್ದ ಅರಿವು ಕಾರ್ಯಕ್ರಮ ಹಾಗೂ ವಿಶ್ವಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.ಕಟ್ಟಡ ಕಾರ್ಮಿಕರಾಗಿ ನೋಂದಣಿ ಮಾಡಿಸಿದ ಕಾರ್ಮಿಕರಿಗೆ ಆರೋಗ್ಯವಿಮೆ, ಒಂದು ವರ್ಷವಾದ ನಂತರ ಇಬ್ಬರು ಮಕ್ಕಳಿಗೆ ಶೈಕ್ಷಣಿಕ ಧನಸಹಾಯ ನೀಡಲಾಗುವುದು, ಶ್ರಮವಹಿಸಿ ದುಡಿಯುವ ಕಾರ್ಮಿಕರಿಗೆ ಉದ್ಯೋಗದ ಜೊತೆ ತಮ್ಮ ಸುರಕ್ಷತೆಯೂ ಅಷ್ಟೇ ಮುಖ್ಯವಾಗಿದ್ದು, ಸರ್ಕಾರದ ವತಿಯಿಂದ ನೀಡಲಾಗುವ ಸುರಕ್ಷತಾ ಸಲಕರಣೆಗಳನ್ನು ಕಾರ್ಮಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ನೈಜ ಕಾರ್ಮಿಕರಿಗೆ ದೊರಕಿಸುವ ಕೆಲಸವನ್ನು ಐಎನ್‌ಟಿಯುಸಿ ಮಾಡುತ್ತಿದ್ದು ಕಾರ್ಮಿಕರು ಸಂಘದ ಸದಸ್ಯರಾಗಿ ತಲುಪದೆ ಇರುವ ಕಾರ್ಮಿಕರನ್ನು ತಲುಪುವ ಕೆಲಸವನ್ನು ಮಾಡಿ ಕಾರ್ಮಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದರು.ರಾಜ್ಯಧ್ಯಕ್ಷರಾದ ಎಚ್.ಸಿ.ಶ್ಯಾಮಣ್ಣರೆಡ್ಡಿ ಸಾವಿರಾರು ಕಾರ್ಮಿಕರ ತ್ಯಾಗ ಬಲಿದಾನದ ಭಾಗವಾಗಿ ಮೇ 1 ರಂದು ವಿಶ್ವಕಾರ್ಮಿಕರ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ ಇದು ವಿಶ್ವದ ಕಾರ್ಮಿಕರ ಹಬ್ಬವಾಗಿದೆ ಎಂದರು.ಕಾರ್ಮಿಕರಿಗೆ ದುಡಿಮೆಯ ಜೊತೆ ಆರೋಗ್ಯವೂ ಕೂಡ ಬಹಳ ಮುಖ್ಯ, ತಾವು ದುಡಿಯುವ ಹಣದಲ್ಲಿ ಬಹುಪಾಲು ಹಣ ತಮ್ಮ ಕುಟುಂಬದ ಆರೋಗ್ಯಕ್ಕೆ ಮೀಸಲಿಡಬೇಕಾಗಿದೆ. ಸಂಘವು ಕಾರ್ಮಿಕರಿಗೆ ಅನುಕೂಲಕರವಾಗಲೆಂದು ಈ ರೀತಿಯ ಉಚಿತ ಆರೋಗ್ಯ ತಪಾಸಣೆ ಶಿಬಿರಗಳನ್ನು ನಡೆಸಿಕೊಂಡು ಬರುತ್ತಿದೆ. ಕಾರ್ಮಿಕರು ಈ ರೀತಿಯಾಗಿ ನಡೆಯುವ ಆರೋಗ್ಯ ತಪಾಸಣಾ ಶಿಬಿರಗಳ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಐಎನ್‌ಟಿಯುಸಿ ಉಪಾಧ್ಯಕ್ಷರಾದ ದಾಸ್, ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷರಾದ ಮುಂಜುನಾಥ್, ಕಾರ್ಯದರ್ಶಿ ನವಾಜ್, ಖಜಾಂಚಿ ಜಗದೀಶ್, ಘಟಕದ ಅಧ್ಯಕ್ಷ ಕೆಂಪರಾಮಯ್ಯ, ಮಂಜಣ್ಣ, ಮಂಜುನಾಥ್, ಕಾಂತರಾಜು ಎಂ.ಎಲ್, ಕೀರ್ತಿ ಎನ್, ಶ್ರೀರಂಗಯ್ಯ, ಹನುಮಂತರಾಯಪ್ಪ, ಬಿ. ರಂಗನಾಥ್, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಮುತ್ತುರಾಜು ಕಾರ್ಯಕ್ರಮ ನಿರೂಪಿಸಿದರು, ಕೆಂಪರಾಮಯ್ಯ ವಂದಿಸಿದರು.