ಸಾರಾಂಶ
ಕನ್ನಡಪ್ರಭ ವಾರ್ತೆ ಸುಬ್ರಹ್ಮಣ್ಯ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನ.27ರಿಂದ ಡಿ. 12ರ ವರೆಗೆ ನಡೆಯುವ ಚಂಪಾಷಷ್ಠಿ ಮಹೋತ್ಸವ ಹಾಗೂ ಡಿ.7ರಂದು ನಡೆಯುವ ಬ್ರಹ್ಮರಥೋತ್ಸವದ ಸಂದರ್ಭ ಭಕ್ತರ ಸುರಕ್ಷತೆ ಹಾಗೂ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಆದ್ಯತೆ ನೀಡಲು ದೇವಸ್ಥಾನದ ಸಭಾಂಗಣದಲ್ಲಿ ಬುಧವಾರ ನಡೆದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಚಂಪಾಷಷ್ಠಿ ಮಹೋತ್ಸವದ ಪೂರ್ವಭಾವಿ ಸಭೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆಯಲ್ಲಿ ದೇವಳದ ಆಡಳಿತಾಧಿಕಾರಿ ಜುಬಿನ್ ಮೊಹಪಾತ್ರ ಉಪಸ್ಥಿತಿಯಲ್ಲಿ ನಡೆಯಿತು.ಭದ್ರತೆ-ಸಿಸಿ ಕ್ಯಾಮರಾ ಕಣ್ಗಾವಲು: ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಪ್ರಮುಖ ದಿನಗಳಾದ ಪಂಚಮಿ ರಥೋತ್ಸವ ಹಾಗೂ ಬ್ರಹ್ಮರಥೋತ್ಸವ ದಿನಗಳಂದು ಪೊಲೀಸ್ ಇಲಾಖೆ ಹಾಗೂ ಗೃಹ ರಕ್ಷಕ ದಳದ ವತಿಯಿಂದ ಹೆಚ್ಚುವರಿ ಸಿಬ್ಬಂದಿಗಳನ್ನು ನಿಯೋಜಿಸಲಾಗುವುದು ಎಂದು ಸುಬ್ರಹ್ಮಣ್ಯ ಠಾಣಾಧಿಕಾರಿ ಕಾರ್ತಿಕ್ ಮಾಹಿತಿ ನೀಡಿದರು.
೨೯೦ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ, ೧೩೦ಕ್ಕೂ ಅಧಿಕ ಗೃಹ ರಕ್ಷಕ ದಳದ ಸಿಬ್ಬಂದಿ ನಿಯೋಜಿಸಲಾಗುವುದು. ಭಕ್ತರಿಗೆ ಮಾರ್ಗದರ್ಶನ ನೀಡಲು ದೇವಳದ ಒಳಾಂಗಣದಲ್ಲಿ, ಕಳ್ಳತನ- ಅಪರಾಧ ತಡೆ, ಪಾರ್ಕಿಂಗ್ ನಿಯಂತ್ರಣ ಮತ್ತಿತರ ಕರ್ತವ್ಯಕ್ಕೆ ಪೊಲೀಸ್ ನಿಯೋಜಿಸಲಾಗುವುದು ಎಂದರು. ಕುಮಾರಧಾರದಿಂದ ಮುಖ್ಯ ರಸ್ತೆಯಲ್ಲಿ, ಪಾರ್ಕಿಂಗ್ ಜಾಗಗಳಲ್ಲಿ, ದೇವಳದ ರಥಬೀದಿವರೆಗೆ ಸೇರಿದಂತೆ ದೇವಸ್ಥಾನದ ಸುತ್ತಮುತ್ತಲೂ ಸಿಸಿ ಕ್ಯಾಮರಾ ಅಳವಡಿಸಲಾಗುವುದು ಎಂದರು.ರಥೋತ್ಸವಕ್ಕೆ ಸೂಕ್ತ ಬಂದೋಬಸ್ತ್: ಪಂಚಮಿ ರಥೋತ್ಸವ ಹಾಗೂ ಬ್ರಹ್ಮರಥೋತ್ಸವ ಸಂದರ್ಭದಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸುವ ಬಗ್ಗೆ ಚರ್ಚೆ ನಡೆಯಿತು. ಬ್ರಹ್ಮರಥೋತ್ಸವ ಎಳೆಯುವ ಸಂದರ್ಭದಲ್ಲಿ ನೀಡಲಾಗುವ ಪಾಸ್ ಬಗ್ಗೆ ಚರ್ಚೆ ನಡೆಯಿತು. ಬ್ರಹ್ಮರಥೋತ್ಸವ ಸೇವೆ ನೆರವೇರಿಸುವ ಭಕ್ತರಿಗೆ ರಥ ಎಳೆಯಲು ಮೊದಲ ಆದ್ಯತೆ ನೀಡುವ ಬಗ್ಗೆ ಸಭೆಯಲ್ಲಿ ಪ್ರಸ್ತಾಪವಾಯಿತು. ರಥ ಎಳೆಯುವವರನ್ನು ಹೊರತು ಪಡಿಸಿ ಉಳಿದ ಭಕ್ತರನ್ನು ರಥದ ಬಳಿ ಬಾರದಂತೆ ಪೊಲೀಸ್ ಸಿಬ್ಬಂದಿ ನಿಯೋಜಿಸಿ ಸೂಕ್ತ ವ್ಯವಸ್ಥೆ ಮಾಡುವ ಬಗ್ಗೆ ಎಸ್‌ಐ ಕಾರ್ತಿಕ್ ಸಭೆಗೆ ಮಾಹಿತಿ ನೀಡಿದರು. ಬ್ರಹ್ಮ ರಥೋತ್ಸವ ಸಂದರ್ಭ ರಥಬೀದಿಯಲ್ಲಿ ಈ ಬಾರಿ ವಿಶೇಷವಾಗಿ ದೇವಸ್ಥಾನದ ವತಿಯಿಂದ ಬ್ಯಾರಿಕೇಡ್ ಅವಳವಡಿಸಲಾಗುವುದು ಎಂದರು. ಎಡೆಸ್ನಾನ, ಬೀದಿ ಉರುಳು ಸೇವೆಗೆ ವ್ಯವಸ್ಥೆ: ಲಕ್ಷದೀಪೋತ್ಸವ ಬಳಿಕ ಆರಂಭಗೊಳ್ಳುವ ಬೀದಿ ಉರುಳು ಸೇವೆಗೆ ಪೂರಕ ವ್ಯವಸ್ಥೆ ಕಲ್ಪಿಸುವ ಬಗ್ಗೆ ಚರ್ಚೆ ನಡೆಯಿತು. ಬೀದಿ ಉರುಳು ಸೇವೆ ನೆರವೇರಿಸುವವರಿಗೆ ಮಾರ್ಗದರ್ಶನ ನೀಡಲು ಸಿಬ್ಬಂದಿ ನಿಯೋಜಿಸುವುದು, ಬೀದಿ ಉರುಳು ಸೇವೆ ಮಾಡುವ ಬೀದಿಯನ್ನು ನೀರು ಹಾಕಿ ಸ್ವಚ್ಛಗೊಳಿಸಿ ಅವರಿಗೆ ಎಲ್ಲ ರೀತಿಯ ವ್ಯವಸ್ಥೆ ಮಾಡಬೇಕು. ಬೀದಿ ಉರುಳು ಸೇವೆ ಮಾಡುವ ಭಕ್ತರಿಗೆ ಸಂಜೆ ೭ಗಂಟೆಯಿಂದ ಮುಂಜಾನೆ ೭ಗಂಟೆವರೆಗೆ ಅವಕಾಶ ಮಾಡಿಕೊಡಲಾಗಿದೆ. ಮಹೋತ್ಸವದ ಸಂಬಂಧ ಚೌತಿ, ಪಂಚಮಿ, ಷಷ್ಠಿ ದಿನದಂದು ಮಧ್ಯಾಹ್ನ ದೇವಳದ ಹೊರಾಂಗಣದಲ್ಲಿ ಭಕ್ತಾದಿಗಳು ಸ್ವಇಚ್ಛೆಯಿಂದ ನಡೆಸುತ್ತಿರುವ ಎಡೆಸ್ನಾನಕ್ಕೆ ಅವಕಾಶ ನೀಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದರು. ಸಮರ್ಪಕ ಪಾರ್ಕಿಂಗ್: ಜಾತ್ರೆಯ ಪ್ರಮುಖ ದಿನಗಳಂದು ಕ್ಷೇತ್ರದಲ್ಲಿ ವಾಹನ ದಟ್ಟಣೆ ನಿಯಂತ್ರಿಸಲು ಹಾಗೂ ಪಾರ್ಕಿಂಗ್ ನಡೆಸಲು ಪೊಲೀಸ್, ಗೃಹ ರಕ್ಷಕ ದಳದ ಸಿಬ್ಬಂದಿ ನಿಯೋಜಿಸಲಾಗುತ್ತದೆ. ಪಂಜ, ಕಡಬ ಭಾಗದಿಂದ ಬರುವ ವಾಹನಗಳನ್ನು ಹೆಲಿಪ್ಯಾಡ್ ಗ್ರೌಂಡ್, ಎಸ್‌ಎಸ್‌ಪಿಯು ಕಾಲೇಜು ಗ್ರೌಂಡ್ ಬಳಿಯ ಪಾರ್ಕಿಂಗ್, ದ್ವಿಚಕ್ರ ವಾಹನಗಳನ್ನು ಕೆಎಸ್‌ಎಸ್ ಕಾಲೇಜು ಬಳಿ ಪಾರ್ಕಿಂಗ್ ಹಾಗೂ ಸುಳ್ಯ, ಹರಿಹರ ಭಾಗದಿಂದ ಬರುವ ವಾಹನಗಳನ್ನು ಇಂಜಾಡಿ ಬಳಿ ಪಾರ್ಕಿಂಗ್ ಮಾಡುವ ಬಗ್ಗೆ ಹಾಗೂ ಹೆಚ್ಚುವರಿ ವಾಹನ ದಟ್ಟಣೆ ಉಂಟಾದಲ್ಲಿ ವಾಹನ ಪಾರ್ಕಿಂಗ್ ಮಾಡಲು ೨- ೩ ಕಡೆಗಳಲ್ಲಿ ಪಾರ್ಕಿಂಗ್ ಪ್ರದೇಶ ಸಿದ್ಧ ಮಾಡಿಟ್ಟುಕೊಳ್ಳಲಾಗುವುದು . ೫೫- ೬೦ ವರ್ಷ ಮೇಲ್ಪಟ್ಟವರಿಗೆ ಅಟೋ ರಿಕ್ಷಾ ಮೂಲಕ ದೇವಳದ ವರೆಗೆ ಉಚಿತ ಕರೆತರುವ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.
ಸುರಕ್ಷತೆಯೊಂದಿಗೆ ಅದ್ಧೂರಿ ಸಿಡಿಮದ್ದು ಪ್ರದರ್ಶನ: ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ಬಳಸಿಕೊಂಡು, ಸರಕಾರದ ನಿಯಮಾವಳಿಗಂತೆ ಅದ್ದೂರಿಯಾಗಿ ಸಿಡಿಮದ್ದು ಪ್ರದರ್ಶನ ನಡೆಸಲಾಗುವುದು. ಶುಚಿತ್ವಕ್ಕೆ ಒತ್ತು ನೀಡುವುದು, ನಿರಂತರ ವಿದ್ಯುತ್ ಸರಬರಾಜು ಮಾಡುವ ಬಗ್ಗೆ, ಸಾರಿಗೆ ವಾಹನ ವ್ಯವಸ್ಥೆ, ಜಾತ್ರೆಯ ಬಗ್ಗೆ ವ್ಯಾಪಕ ಪ್ರಚಾರ ಮಾಡುವ ಬಗ್ಗೆ, ತಾತ್ಕಲಿಕ ಸಂತೆ, ಅಂಗಡಿ ಮಳಿಗೆಗಳ ತೆರೆಯುವ ಬಗ್ಗೆ, ಲಕ್ಷದೀಪೋತ್ಸವ ಮತ್ತು ಕುಣಿತ ಭಜನೆ ಬಗ್ಗೆ, ಸ್ವಯಂ ಸೇವಕರ ನಿಯೋಜನೆ, ಭಕ್ತರಿಗೆ ವಸತಿ ವ್ಯವಸ್ಥೆ ಕಲ್ಪಿಸುವ ಬಗ್ಗೆ, ಕೃಷಿಮೇಳ ಆಯೋಜನೆ ಬಗ್ಗೆ, ಭಕ್ತಾದಿಗಳ ಅನೂಕೂಲಕ್ಕಾಗಿ ವಿಶೇಷ ಪ್ರಸಾದ ಭೋಜನಾ ವ್ಯವಸ್ಥೆ, ನೀರು ಸರಬರಾಜು ವ್ಯವಸ್ಥೆ, ಕುಮಾರಧಾರ ಸ್ನಾನ ಘಟ್ಟ ಮತ್ತು ಆದಿ ಸುಬ್ರಹ್ಮಣ್ಯ ಹೊಳೆಯ ಹೂಳೆತ್ತುವ ಬಗ್ಗೆ, ಮದ್ಯಪಾನ ನಿಷೇಧ ಬಗ್ಗೆ, ರಥದ ಸುಸ್ಥಿತಿಯ ಬಗ್ಗೆ ದೃಢೀಕರಣ, ದೀಪಾಲಂಕಾರ, ಸಿಸಿ ಟಿವಿ ಅಳವಡಿಕೆ ಸೇರಿದಂತೆ ಜಾತ್ರೆಯ ವಿವಿಧ ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್, ಕಡಬ ತಹಸೀಲ್ದಾರ್ ಪ್ರಭಾಕರ ಖಜೂರೆ, ಸುಳ್ಯ ತಹಸೀಲ್ದಾರ್ ಮಂಜುಳಾ, ಕಡಬ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಸುಳ್ಯ ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ, ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ವಿಮಲ್‌ಬಾಬು, ವೈದ್ಯಾಧಿಕಾರಿ ಡಾ. ತ್ರಿಮೂರ್ತಿ, ಸುಬ್ರಹ್ಮಣ್ಯ ಗ್ರಾ.ಪಂ. ಅಧ್ಯಕ್ಷೆ ಸುಜಾತ ಕಲ್ಲಾಜೆ, ಮಾಸ್ಟರ್ ಪ್ಲಾನ್ ಸದಸ್ಯರಾದ ಸತೀಶ್ ಕೂಜುಗೋಡು, ಲೋಲಾಕ್ಷ ಕೈಕಂಬ, ಎಂ.ಡಿ.ಪವನ್, ಅಚ್ಚುತ ಆಲ್ಕಬೆ, ಕೆಎಸ್‌ಆರ್‌ಟಿಸಿಯ ವೇಣುಗೋಪಾಲ್ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎಂಜಿನಿಯರ್ ಉದಯಕುಮಾರ್ ಸ್ವಾಗತಿಸಿದರು. ಮಹೇಶ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.