ವಿದ್ಯಾರ್ಥಿನಿಯರ ಸುರಕ್ಷತೆಗೆ ಹೆಚ್ಚಿನ ಆದ್ಯತೆ

| Published : Apr 25 2024, 01:04 AM IST

ಸಾರಾಂಶ

ವಿದ್ಯಾರ್ಥಿನಿಯರ ಸುರಕ್ಷತೆಗೆ ಕಾಲೇಜು ಮತ್ತು ಕೆ.ಎಲ್.ಇ ಆಡಳಿತ ಮಂಡಳಿಯ ವತಿಯಿಂದ ಕಾಲೇಜಿನ ಆವರಣ ಮತ್ತು ಗ್ರಂಥಾಲಯ, ಎಲ್ಲ ಪ್ರಯೋಗಾಲಯ ಮತ್ತು ಎಲ್ಲ ತರಗತಿಗಳಲ್ಲಿ ಸಿಸಿ ಕ್ಯಾಮೆರಾ.

ಹುಬ್ಬಳ್ಳಿ:

ಕಾಲೇಜಿನಲ್ಲಿ ವಿದ್ಯಾರ್ಥಿಗಳ ಅದರಲ್ಲಿಯೂ ವಿದ್ಯಾರ್ಥಿನಿಯರ ಸುರಕ್ಷತೆಗೆ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು, ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ ಎಂದು ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಎಸ್.ಎನ್. ಎಮ್ಮಿ ಹೇಳಿದರು.

ಅವರು ಇಲ್ಲಿನ ಶ್ರೀ ಕಾಡಸಿದ್ಧೇಶ್ವರ ಕಲಾ ಮಹಾವಿದ್ಯಾಲಯ ಮತ್ತು ಎಚ್.ಎಸ್.ಕೆ. ವಿಜ್ಞಾನ ಸಂಸ್ಥೆಯ ಮಹಿಳಾ ಸಬಲೀಕರಣ ಘಟಕ (ಡಬ್ಲೂ.ಇ.ಸಿ) ಮತ್ತು ಆಂತರಿಕ ದೂರು ಸಮಿತಿ (ಐ.ಸಿ.ಸಿ) ಸಂಯುಕ್ತ ಆಶ್ರಯದಲ್ಲಿ ಈಚೆಗೆ ಏರ್ಪಡಿಸಿದ್ದ ವಿದ್ಯಾರ್ಥಿನಿಯರ ಪಾಲಕರ ಸಭೆಯಲ್ಲಿ ಮಾತನಾಡಿದರು.

ವಿದ್ಯಾರ್ಥಿನಿಯರ ಸುರಕ್ಷತೆಗೆ ಕಾಲೇಜು ಮತ್ತು ಕೆ.ಎಲ್.ಇ ಆಡಳಿತ ಮಂಡಳಿಯ ವತಿಯಿಂದ ಕಾಲೇಜಿನ ಆವರಣ ಮತ್ತು ಗ್ರಂಥಾಲಯ, ಎಲ್ಲ ಪ್ರಯೋಗಾಲಯ ಮತ್ತು ಎಲ್ಲ ತರಗತಿಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವುದು ಸೇರಿದಂತೆ ವಿವಿಧ ಸುರಕ್ಷತಾ ಕ್ರಮ ತೆಗೆದುಕೊಳ್ಳಲಾಗಿದೆ. ಗುರು-ಶಿಷ್ಯ ವ್ಯವಸ್ಥೆಯನ್ನು ಕಾಲೇಜಿನಲ್ಲಿ ಜಾರಿಗೊಳಿಸಿದ್ದು, ಪ್ರತಿಯೊಬ್ಬ ಶಿಕ್ಷಕ (ಮೆಂಟರ್) ಸುಮಾರು 30 ವಿದ್ಯಾರ್ಥಿಗಳ ಮೇಲ್ವಿಚಾರಣೆ ಮಾಡುತ್ತಾರೆ. ಆದ್ದರಿಂದ ವಿದ್ಯಾರ್ಥಿನಿಯರು ಸಮಸ್ಯೆಗಳ ಕುರಿತು ಶಿಕ್ಷಕರೊಡನೆ ಮುಕ್ತವಾಗಿ ಚರ್ಚಿಸಲು ಅವಕಾಶವಿದೆ ಎಂದರು.

ವಿದ್ಯಾರ್ಥಿನಿಯರು, ಶಿಕ್ಷಕರು ಮತ್ತು ಪಾಲಕರು ಕೈಜೋಡಿಸಿದಾಗ ಮಾತ್ರ ಯಶಸ್ಸು ಸಾಧ್ಯ. ವಿದ್ಯಾರ್ಥಿನಿಯರು ಮೊಬೈಲ್ ಬಳಕೆಯನ್ನು ಶಿಕ್ಷಣಕ್ಕೆ ಮಾತ್ರ ಬಳಸಬೇಕು. ಅನವಶ್ಯಕ ಚಾಟಿಂಗ್, ಸೆಲ್ಫಿಗಳಿಗೆ ಬಳಸುವುದನ್ನು ಕಡಿಮೆ ಮಾಡಬೇಕು. ಕಾಲೇಜಿನಲ್ಲಿ ಸಮವಸ್ತ್ರ ಮತ್ತು ಚೆಸ್ಟ್ ಕಾರ್ಡ್ ಧರಿಸಬೇಕು, ಇಲ್ಲವಾದರೆ ಕಾಲೇಜಿನ ಒಳಗಡೆ ಪ್ರವೇಶ ನಿರಾಕರಿಸಲಾಗುವುದು. ವಾರಕ್ಕೊಮ್ಮೆ ಮಾತ್ರ ಸಮವಸ್ತ್ರ ಇರುವುದಿಲ್ಲ, ಅಂದು ಸಭ್ಯವಾದ ಉಡುಪು ಧರಿಸಬೇಕು. ಉತ್ತಮ ನಡತೆ, ಶಿಸ್ತು ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಕಾಲೇಜು ಒಕ್ಕೂಟದ ಅಧ್ಯಕ್ಷೆ ಮತ್ತು ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ವಿಜಯಶ್ರೀ ಹಿರೇಮಠ, ಪಾಲಕರ ಪರವಾಗಿ ಡಾ. ಪ್ರಶಾಂತಿನಿ, ಅನ್ವರ್ ಗಿರಣಿ, ರತ್ನವ್ವ ಹಳ್ಳಿ, ಶ್ರೀಮತಿ ಅಂಗಡಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯೆ ಡಾ. ಉಮಾ ನೇರ್ಲೆ ಕಾಲೇಜಿನಲ್ಲಿ ಕೈಗೊಂಡಿರುವ ಸುರಕ್ಷತಾ ಕ್ರಮಗಳ ಕುರಿತು ವಿವರಿಸಿದರು.

ಮಹಿಳಾ ಸಬಲೀಕರಣ ಘಟಕ (ಡಬ್ಲೂ.ಇ.ಸಿ) ಸಂಚಾಲಕಿ ಸುಜಾತಾ ಪಟ್ಟೇದ ಸ್ವಾಗತಿಸಿದರು. ಆಂತರಿಕ ದೂರು ಸಮಿತಿ (ಐ.ಸಿ.ಸಿ) ಸಂಚಾಲಕ ಡಾ. ಬಸವರಾಜ ಜರಕುಂಟಿ ನಿರೂಪಿಸಿ, ವಂದಿಸಿದರು.