ಸಾರಾಂಶ
ಧರ್ಮಸ್ಥಳ ಮಂಜುನಾಥ ಕ್ಷೇತ್ರದ ಮಾನಹಾನಿಗೆ ಕಾರಣರಾದ ವ್ಯಕ್ತಿಗಳನ್ನು ತಕ್ಷಣ ಬಂಧಿಸಬೇಕು ಅವರ ನಿಜ ಬಣ್ಣ ಬಯಲಾಗಿದೆ ಎಂದು ಬಿಜೆಪಿ ಡಿ ಕೃಷ್ಣಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಕುಣಿಗಲ್ ಧರ್ಮಸ್ಥಳ ಮಂಜುನಾಥ ಕ್ಷೇತ್ರದ ಮಾನಹಾನಿಗೆ ಕಾರಣರಾದ ವ್ಯಕ್ತಿಗಳನ್ನು ತಕ್ಷಣ ಬಂಧಿಸಬೇಕು ಅವರ ನಿಜ ಬಣ್ಣ ಬಯಲಾಗಿದೆ ಎಂದು ಬಿಜೆಪಿ ಡಿ ಕೃಷ್ಣಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಕುಣಿಗಲ್ ಪಟ್ಟಣದಲ್ಲಿ ಧರ್ಮಸ್ಥಳದ ಪರವಾಗಿ ನಡೆದ ಬೃಹತ್ ಪ್ರತಿಭಟನಾ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದರು. ಧರ್ಮಸ್ಥಳ ಕ್ಷೇತ್ರದ ಅಭಿವೃದ್ಧಿ ಹಾಗೂ ಹೆಗ್ಗಡೆ ಕುಟುಂಬದ ಬೆಳವಣಿಗೆ ಸಮಾಜ ಸೇವೆ ಜನ ಅಭಿಪ್ರಾಯವನ್ನು ಸಹಿಸಲಾಗದ ಕೆಲವು ಧರ್ಮಾಂದರು ಧರ್ಮಸ್ಥಳದ ಮೇಲೆ ಇಲ್ಲಸಲ್ಲದ ಕೃತ್ಯಗಳನ್ನ ಮಾಡಲು ಸಂಚು ರೂಪಿಸಿದ್ದರು. ಸುಳ್ಳಿನ ವೇಷದ ಕಥೆ ತುಂಬಾ ದಿನ ನಡೆಯುವುದಿಲ್ಲ ಸತ್ಯ ಈಗ ಹೊರ ಬರುತ್ತಿದೆ. ಸುಳ್ಳಿನ ವ್ಯಕ್ತಿಗಳು ತಮ್ಮ ನಿಜ ಬಣ್ಣವನ್ನು ಒಪ್ಪಿಕೊಳ್ಳುವ ಸ್ಥಿತಿಗೆ ಬಂದಿದ್ದಾರೆ. ಧರ್ಮಸ್ಥಳದ ಮಂಜುನಾಥ ಸತ್ಯವಾಗಿದ್ದಾನೆ ಎಂಬುದಕ್ಕೆ ಈ ಘಟನೆ ಸಾಕ್ಷಿ ಎಂದರು. ಈ ಸಂದರ್ಭದಲ್ಲಿ ಮಾತನಾಡಿದ ಜೈನ ಸಮುದಾಯದ ಮುಖಂಡ ಸಂತೋಷ್, ಜೈನ ಧರ್ಮ ಲಿಂಗಾಯಿತ ವೀರಶೈವ ಎಲ್ಲಾ ಧರ್ಮಗಳಿಗೆ ಧರ್ಮಸ್ಥಳ ಕೇಂದ್ರ ಬಿಂದುವಾಗಿದೆ. ಇವರ ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯಲು ಧರ್ಮಸ್ಥಳದ ಧರ್ಮಾಧಿಕಾರಿಗಳು ಬಿಡುತ್ತಿರಲಿಲ್ಲ. ಅದಕ್ಕೋಸ್ಕರ ಅವರ ಮೇಲೆ ಒಂದು ವಿಶೇಷ ಸಂಚು ರೂಪಿಸಿದ್ದರು. ಆದರೆ ಶಕ್ತಿ ಕೇಂದ್ರದ ಕೇಂದ್ರ ಬಿಂದುವಾಗಿರುವ ಭಗವಂತ ಮಂಜುನಾಥ್ ಸ್ವಾಮಿ ಅದನ್ನು ತಡೆದು ಮತ್ತೊಮ್ಮೆ ತನ್ನ ಇರುವಿಕೆಯನ್ನು ನಿರೂಪಿಸಿದ್ದಾನೆ ಎಂದರು. ಬಿಜೆಪಿ ತಾಲೂಕು ಅಧ್ಯಕ್ಷ ಕೊಡುಗೀಹಳ್ಳಿ ದಿನೇಶ್ ಮಾತನಾಡಿ, ಕಾಣದ ಕೈಗಳ ಸಂಚು ಈಗ ಹೊರ ಬರುತ್ತಿದೆ. ಅವರ ಬಣ್ಣ ಬಯಲಾಗುತ್ತಿದೆ. ಅಪರಾಧ ಕೃತ್ಯ ಮಾಡುತ್ತಿರುವ ಹಾಗೂ ಅಪರಾಧ ಕೃತ್ಯಕ್ಕೆ ಕುಮ್ಮಕ್ಕು ನೀಡುತ್ತಿರುವ ಮತ್ತು ಪ್ರಚೋದನಕಾರಿ ಹೇಳಿಕೆಗಳು ಭಾಷಣಗಳನ್ನು ತಕ್ಷಣ ನಿಲ್ಲಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಕುಣಿಗಲ್ ಪಟ್ಟಣದ ಗ್ರಾಮ ದೇವತೆ ವೃತ್ತದಿಂದ ಸಾವಿರಾರು ಬಿಜೆಪಿ ಹಾಗೂ ಹಿಂದುಪರ ಕಾರ್ಯಕರ್ತರು ಹುಚ್ಚ ಮಾಸ್ತಿಗೌಡ ವೃತ್ತದ ಮುಖಾಂತರ ಮೆರವಣಿಗೆ ನಡೆಸಿ ತಹಸೀಲ್ದಾರ್ ಕಚೇರಿಯಲ್ಲಿ ಮನವಿ ಸಲ್ಲಿಸಿದರು.