ಸಾಗರ ತಾಲೂಕು ಎಸ್ಸೆಸ್ಸೆಲ್ಸಿಯಲ್ಲಿ ಮೊದಲ ಸ್ಥಾನಕ್ಕೆ ಬರಬೇಕು: ಶಾಸಕ ಗೋಪಾಲಕೃಷ್ಣ ಬೇಳೂರು

| Published : Jun 04 2025, 12:22 AM IST

ಸಾಗರ ತಾಲೂಕು ಎಸ್ಸೆಸ್ಸೆಲ್ಸಿಯಲ್ಲಿ ಮೊದಲ ಸ್ಥಾನಕ್ಕೆ ಬರಬೇಕು: ಶಾಸಕ ಗೋಪಾಲಕೃಷ್ಣ ಬೇಳೂರು
Share this Article
  • FB
  • TW
  • Linkdin
  • Email

ಸಾರಾಂಶ

ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ಸಾಗರ ತಾಲೂಕು ಮೊದಲ ಸ್ಥಾನಕ್ಕೆ ತರುವ ನಿಟ್ಟಿನಲ್ಲಿ ಶಿಕ್ಷಕ ಸಮೂಹ ಪ್ರಯತ್ನಿಸಬೇಕು ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಹೇಳಿದರು.

ಕನ್ನಡಪ್ರಭ ವಾರ್ತೆ ಸಾಗರ

ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ಸಾಗರ ತಾಲೂಕು ಮೊದಲ ಸ್ಥಾನಕ್ಕೆ ತರುವ ನಿಟ್ಟಿನಲ್ಲಿ ಶಿಕ್ಷಕ ಸಮೂಹ ಪ್ರಯತ್ನಿಸಬೇಕು ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಹೇಳಿದರು.

ಇಲ್ಲಿನ ನಗರಸಭೆ ರಂಗಮಂದಿರದಲ್ಲಿ ಮಂಗಳವಾರ ೨೦೨೪-೨೫ನೇ ಸಾಲಿನಲ್ಲಿ ಸಾಗರ ಹೊಸನಗರ ಕ್ಷೇತ್ರವ್ಯಾಪ್ತಿಯಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಉತ್ತಮ ಫಲಿತಾಂಶಕ್ಕೆ ಶ್ರಮಿಸಿದ ಶಿಕ್ಷಕರಿಗೆ, ಶೇ. ೧೦೦ ಫಲಿತಾಂಶ ಪಡೆದ ಶಾಲೆಗಳಿಗೆ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ವರ್ಷ ಸಾಗರ ತಾಲೂಕು ಜಿಲ್ಲೆಗೆ ದ್ವಿತೀಯ ಸ್ಥಾನ, ರಾಜ್ಯಕ್ಕೆ ೧೫ನೇ ಸ್ಥಾನ ಪಡೆದಿರುವುದು ಸಮಾಧಾನ ತಂದಿದ್ದರೂ, ಮುಂದಿನ ವರ್ಷ ಜಿಲ್ಲೆಗೆ ಪ್ರಥಮ ಸ್ಥಾನ ಬರುವಂತೆ ಮಾಡಬೇಕು ಎನ್ನುವುದು ನನ್ನ ಅಭಿಲಾಷೆ ಎಂದರು.

ಆರೋಗ್ಯ ಮತ್ತು ಶಿಕ್ಷಣ ಇಲಾಖೆ ನನ್ನ ಮೆಚ್ಚಿನ ಕ್ಷೇತ್ರವಾಗಿದೆ. ಶೈಕ್ಷಣಿಕ ಕ್ಷೇತ್ರಕ್ಕೆ ಮೂಲಭೂತ ಸೌಲಭ್ಯ ಒದಗಿಸಲು ಅಗತ್ಯ ಗಮನ ಹರಿಸಲಾಗಿದೆ. ನಾಗವಳ್ಳಿ ಕಟ್ಟಿನಕಾರಿನಂತಹ ಕುಗ್ರಾಮಗಳ ಸರ್ಕಾರಿ ಶಾಲೆಗಳು ಶೇ. ೧೦೦ ಫಲಿತಾಂಶ ನಿರಂತರವಾಗಿ ಪಡೆಯುತ್ತಿರುವುದು ವಿದ್ಯಾರ್ಥಿಗಳ ಶ್ರಮ ಹಾಗೂ ಶಿಕ್ಷಕ ಸಮೂಹದ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.

ಸರ್ಕಾರ ಎಸ್.ಎಸ್.ಎಲ್.ಸಿ.ಯಲ್ಲಿ ಅನುತ್ತೀರ್ಣರಾದ ಮಕ್ಕಳಿಗೆ ಉಚಿತವಾಗಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದ್ದು, ಸುಮಾರು ೮೦ಸಾವಿರ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಯಾವುದೇ ಮಗುವೂ ಶಾಲೆಯಿಂದ ಹೊರಗೆ ಉಳಿಯಬಾರದು. ಪೋಷಕರು ಮಕ್ಕಳನ್ನು ಶಾಲೆಯಿಂದ ಬಿಡಿಸಿ ಕೆಲಸಕ್ಕೆ ಕಳಿಸಿದ್ದು ನನ್ನ ಗಮನಕ್ಕೆ ಬಂದರೆ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಮಕ್ಕಳು ಶಿಕ್ಷಣ ಮುಂದುವರೆಸಲು ಸಮಸ್ಯೆಯಾದರೆ ನನ್ನ ಗಮನಕ್ಕೆ ತನ್ನಿ ಎಂದು ಹೇಳಿದರು.

ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಆರ್.ಜಯಂತ್ ಮಾತನಾಡಿ, ಕ್ಷೇತ್ರದ ಶಾಸಕ ಬೇಳೂರು ರಾಜ್ಯದಲ್ಲಿಯೆ ಮೊದಲ ಬಾರಿಗೆ ಇಂತಹ ಕಾರ್ಯಕ್ರಮ ಆಯೋಜಿಸಿದ್ದಾರೆ. ಇದು ಅವರ ಶಿಕ್ಷಣದ ಮೇಲಿನ ಪ್ರೀತಿಯನ್ನು ತೋರಿಸುತ್ತದೆ. ಪೌಷ್ಠಿಕ ಆಹಾರ, ಉತ್ತಮ ಶಿಕ್ಷಕರು ಇದ್ದರೆ ಮಕ್ಕಳು ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಮಾಲತೇಶಪ್ಪ, ಲಕ್ಷ್ಮಣ್ ನಾಯ್ಕ್, ಕೃಷ್ಣಮೂರ್ತಿ, ಮಧುಮಾಲತಿ, ಕಲಸೆ ಚಂದ್ರಪ್ಪ, ಗಣಪತಿ ಮಂಡಗಳಲೆ, ಸೈಯದ್ ಜಾಕೀರ್, ಎಲ್.ಚಂದ್ರಪ್ಪ, ಸೋಮಶೇಖರ ಲ್ಯಾವಿಗೆರೆ, ಹೊಳೆಯಪ್ಪ ಇನ್ನಿತರರು ಹಾಜರಿದ್ದರು. ಐ.ಎನ್.ಸುರೇಶ ಬಾಬು ಸ್ವಾಗತಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಪರಶುರಾಮಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಅನ್ನಪೂರ್ಣ ವಂದಿಸಿದರು.

ಕಾರ್ಯಕ್ರಮದಲ್ಲಿ ಶೇ.೧೦೦ ಫಲಿತಾಂಶ ಪಡೆದ ಸಾಗರ ತಾಲೂಕಿನ ೨೧, ಹೊಸನಗರ ತಾಲೂಕಿನ ೬ ಶಾಲೆಗಳನ್ನು ೬೧೫ಕ್ಕಿಂತ ಹೆಚ್ಚಿನ ಅಂಕ ಪಡೆದ ಸಾಗರ ತಾಲೂಕಿನ ೩೫ಮತ್ತು ಹೊಸನಗರ ತಾಲೂಕಿನ ೧೫ ವಿದ್ಯಾರ್ಥಿಗಳನ್ನು, ಉತ್ತಮ ಫಲಿತಾಂಶ ತರುವಲ್ಲಿ ಪ್ರಮುಖಪಾತ್ರ ವಹಿಸಿದ ಸಾಗರ ತಾಲೂಕಿನ ೧೫೮ ಶಿಕ್ಷಕರು, ಹೊಸನಗರ ತಾಲೂಕಿನ ೪೨ ಶಿಕ್ಷಕರು ಹಾಗೂ ಎರಡು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಸನ್ಮಾನಿಸಲಾಯಿತು.