ಸಹಾಯಹಸ್ತ ಲೋಕಸೇವಾ ಚಾರಿಟೇಬಲ್ ಟ್ರಸ್ಟ್‌ ‘ನೆರಳು’ ಮನೆ ಹಸ್ತಾಂತರ

| Published : Dec 10 2024, 12:33 AM IST

ಸಾರಾಂಶ

ಕಬಕ ಗ್ರಾಮದ ರೇವತಿ ಎಂಬವರ ಬಡ ಕುಟುಂಬಕ್ಕೆ ಸಹಾಯಹಸ್ತ ಲೋಕಸೇವಾ ಚಾರಿಟೇಬಲ್ ಟ್ರಸ್ಟ್ ಕರ್ನಾಟಕ ವತಿಯಿಂದ ಸಂಘ ಸಂಸ್ಥೆಗಳ ಸಹಕಾರದಲ್ಲಿ ನೂತನವಾಗಿ ನಿರ್ಮಿಸಿಕೊಟ್ಟ ‘ನೆರಳು’ ಮನೆಯ ಹಸ್ತಾಂತರ ಕಾರ್ಯಕ್ರಮ ಕುಂದ್ರುಕೋಟೆಯಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಪುತ್ತೂರು

ತಾಲೂಕಿನ ಕಬಕ ಗ್ರಾಮದ ರೇವತಿ ಎಂಬವರ ಬಡ ಕುಟುಂಬಕ್ಕೆ ಸಹಾಯಹಸ್ತ ಲೋಕಸೇವಾ ಚಾರಿಟೇಬಲ್ ಟ್ರಸ್ಟ್ ಕರ್ನಾಟಕ ವತಿಯಿಂದ ಸಂಘ ಸಂಸ್ಥೆಗಳ ಸಹಕಾರದಲ್ಲಿ ನೂತನವಾಗಿ ನಿರ್ಮಿಸಿಕೊಟ್ಟ ‘ನೆರಳು’ ಮನೆಯ ಹಸ್ತಾಂತರ ಹಾಗೂ ಸೇವಾ ಸಾಧಕರಿಗೆ ಸನ್ಮಾನ, ಸೇವಾ ಸಂಸ್ಥೆಗಳಿಗೆ ಗೌರವಾರ್ಪಣೆ ಕಾರ್ಯಕ್ರಮ ಕುಂದ್ರುಕೋಟೆಯಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪುತ್ತೂರು ನಗರ ಠಾಣಾ ಇನ್ ಸ್ಪೆಕ್ಟರ್ ಆಂಜನೇಯ ರೆಡ್ಡಿ ಮಾತನಾಡಿ, ಜೀವನದಲ್ಲಿ ಸಹಾಯ ಮಾಡುವ ಮನೋಭಾವ ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು. ಪ್ರೀತಿಯಿಂದ, ಆದರತೆಯಿಂದ ದಾನ ಮಾಡಿದರೆ ಅದು ನಿಜವಾದ ಸಮಾಜ ಸೇವೆ. ಈ ನಿಟ್ಟಿನಲ್ಲಿ ಸಹಾಯಹಸ್ತ ಲೋಕಸೇವಾ ಚಾರಿಟೇಬಲ್ ಟ್ರಸ್ಟ್ ಇತರ ಸಂಘ ಸಂಸ್ಥೆಗಳನ್ನು, ದಾನಿಗಳನ್ನು ಸೇರಿಸಿಕೊಂಡು ನೂತನ ಮನೆಯನ್ನು ಹಸ್ತಾಂತರಿಸುವ ಮೂಲಕ ಇನ್ನೊಬ್ಬರಿಗೆ ಮಾಡುವ ಸಹಾಯದಿಂದ ಸಂತೋಷ ಕಂಡಿದೆ ಎಂದರು.

ಪುತ್ತೂರು ಗ್ರಾಮಾಂತರ ಠಾಣಾ ಎಸ್‌ಐ ಸುಷ್ಮಾ ಭಂಡಾರಿ ಮಾತನಾಡಿ, ಸಹಾಯಹಸ್ತ ಲೋಕಸೇವಾ ಚಾರಿಟೇಬಲ್ ಟ್ರಸ್ಟ್ ಜಾತಿ-ಮತ-ಬೇಧವನ್ನು ಮೀರಿ ಸಮಾಜದಲ್ಲಿನ ಆಶಕ್ತಿಗೆ ಸಹಾಯ ಮಾಡುವ ಮೂಲಕ ಎಲ್ಲರಿಗೂ ಸ್ಪೂರ್ತಿದಾಯಕವಾಗಿದೆ. ಇನ್ನಷ್ಟು ಬಡವರಿಗೆ ಸಹಾಯಹಸ್ತ ಚಾಚುವ ಮೂಲಕ ನಿರಂತರವಾಗಿ ಸಂಸ್ಥೆಯ ಸೇವೆ ನಡೆಯಲಿದೆ ಎಂದರು.

ಸಹಾಯಹಸ್ತ ಲೋಕಸೇವಾ ಚಾರಿಟೇಬಲ್ ಟ್ರಸ್ಟ್ ಗೌರವಾಧ್ಯಕ್ಷ ಉದನೇಶ್ವರ ಭಟ್ ಕಾರ್ಯಕ್ರಮ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿದ್ದರು. ಪುತ್ತೂರಿನ ವೈದ್ಯ ಡಾ. ಸುರೇಶ್ ಪುತ್ತೂರಾಯ, ಮಂಗಳೂರು ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ಸ್ಥಾಪಕ ಅರ್ಜುನ್ ಭಂಡಾರ್‌ಕರ್, ಅಪತ್ಭಾಂಧವ ಈಶ್ವರ್ ಮಲ್ಪೆ ಶುಭ ಹಾರೈಸಿದರು. ಟ್ರಸ್ಟ್‌ನ ಸಚಿನ್, ರಾಜೇಶ್ ಇದ್ದರು.

ಅರ್ಜುನ್ ಭಂಡಾರ್‌ಕರ್ ಮನೆಯ ಕೀ ಹಸ್ತಾಂತರಿಸುವ ಮೂಲಕ ಮನೆಯನ್ನು ರೇವತಿಗೆ ಅವರಿಗೆ ಹಸ್ತಾಂತರಿಸಿದರು.

ಟ್ರಸ್ಟ್ ಕೋಶಾಧಿಕಾರಿ ಗಿರೀಶ್ ಎಂ.ಎಸ್. ಸ್ವಾಗತಿಸಿ, ವಂದಿಸಿದರು. ಸಿಆರ್‌ಪಿ ಗಣೇಶ್ ನಡುವಾಳ್ ನಿರೂಪಿಸಿದರು.