ಸಾಲಸೂಲ ಮಾಡಿ ನಾವ್ ಹೊಲ ಬಿತ್ತಿವ್ರಿ. ಎಕ್ರಿಗೆ ನಾಲ್ವತ್ತು ಸಾವ್ರ ಇಟ್ಟಿವಿ ಒಂದು ನಯಾಪೈಸೆನೂ ಇಲ್ಲ ಯಪ್ಪಾ. ಏನ್ಮಾಡಬೇಕೋ ತಿಳಿವಲ್ತು ನೋಡೆಪ್ಪ

ಕನಕಗಿರಿ: ರೀ ಸಾಹೇಬ್ರ ನಮ್ ಪರಿಸ್ಥಿತಿ ಹೆಂಗ್ ಆಗೈತಿ ನೋಡ್ರಿ ಇಲ್ಲಿ. ಬಿತ್ತಿದ ಬೆಳಿ ಒಣಗಿ ಹೊಗೈತ್ರಿ. ಪರಿಹಾರ ಕೊಡಬ್ಯಾಡ್ರಿ ಬ್ಯಾಂಕಿನ ಸಾಲಮನ್ನಾ ಮಾಡ್ರಿ ಪುಣ್ಯಾ ಬರತೈತಿ ನಿಮಗ.....

ಬುಧವಾರ ತಾಲೂಕಿನ ನಾನಾ ಗ್ರಾಮಗಳಿಗೆ ಬರ ವೀಕ್ಷಣೆಗೆ ಬಂದಿದ್ದ ಸಚಿವ ತಂಗಡಗಿಯವರ ಮುಂದೆ ರೈತರು ಅಳಲು ತೋಡಿಕೊಂಡ ಪರಿ ಇದು.!

ಹೌದು, ಮುಖ್ಯಮಂತ್ರಿಗಳ ಆದೇಶದ ಮೇರೆಗೆ ಕೊಪ್ಪಳ ಜಿಲ್ಲೆಯ ಬರ ವೀಕ್ಷಣೆಗೆ ಮುಂದಾಗಿರುವ ನೂತನ ಸಚಿವ ತಂಗಡಗಿ ಅವರು, ಜಿಟಿಜಿಟಿ ಮಳೆಯಲ್ಲೂ ತಾಲೂಕಿನ, ಸುಳೇಕಲ್, ಕನಕಗಿರಿ ಹಾಗೂ ಹುಲಿಹೈದರ ಬರ ವೀಕ್ಷಣೆ ಕೈಗೊಂಡಾಗ ನೂರಾರು ರೈತರು ಸಚಿವರಿದ್ದ ಸ್ಥಳಕ್ಕೆ ಹೋಗಿ ಬರಗಾಲದಿಂದ ನಷ್ಟವಾದ ಬೆಳೆ ಕಿತ್ತು ತೋರಿಸಿ ತಮ್ಮ ಅಳಲನ್ನು ತೋಡಿಕೊಂಡರು.

ಸಾಲಸೂಲ ಮಾಡಿ ನಾವ್ ಹೊಲ ಬಿತ್ತಿವ್ರಿ. ಎಕ್ರಿಗೆ ನಾಲ್ವತ್ತು ಸಾವ್ರ ಇಟ್ಟಿವಿ ಒಂದು ನಯಾಪೈಸೆನೂ ಇಲ್ಲ ಯಪ್ಪಾ. ಏನ್ಮಾಡಬೇಕೋ ತಿಳಿವಲ್ತು ನೋಡೆಪ್ಪ. ಬೆಳಿ ನಷ್ಟ ಪರಿಹಾರ ಬ್ಯಾಡ, ಬ್ಯಾಂಕಿನ ಸಾಲ ಮನ್ನಾ ಮಾಡಿ ಪುಣ್ಯ ಕಟ್ಟಿಕೊಳ್ರಿ ಯಪ್ಪಾ ಎಂದು ಕೈ ಜೋಡಿಸಿ ರೈತ ಮಹಿಳೆಯೊಬ್ಬಳು ಸಚಿವರಿಗೆ ಕಣ್ಣೀರಿಡುತ್ತಾ ಮನವಿ ಮಾಡಿದಳು.

ಈ ಬಾರಿ ಮುಂಗಾರು ಹಂಗಾಮು ಕೈಕೊಟ್ಟ ಪರಿಣಾಮ ಸೂರ್ಯಕಾಂತಿ, ಮೆಕ್ಕೆಜೋಳ, ಹತ್ತಿ, ತೊಗರಿ, ಸಜ್ಜೆ, ನವಣಿ, ಮಡಿಕೆ, ಹೆಸರು ಸೇರಿದಂತೆ ನಾನಾ ಬೆಳೆಗಳು ತೇವಾಂಶ ಕೊರತೆಯಿಂದ ಸಂಪೂರ್ಣವಾಗಿ ಒಣಗಿ ಹೋಗಿವೆ. ಇನ್ನೂ ಕೆಲ ಕಡೆಗಳಲ್ಲಿ ಬಿತ್ತನೆ ಮಾಡಿರುವ ಪೈರು ಕಮರಿ ಹೋಗಿರುವುದನ್ನು ಸಚಿವರು ಪರಿಶೀಲಿಸಿದರು. ಇನ್ನೂ ಹುಲಿಹೈದರ ಹೋಬಳಿ ಕೇಂದ್ರದಲ್ಲಿಯೂ ಬೆಳೆ ವೀಕ್ಷಣೆ ಮಾಡಿದ ಸಚಿವರು, ಮಳೆಯಿಲ್ಲದೆ ಬೆಳೆ ಬೆಳೆಯದಿರುವುದು, ಎಲೆಗಳಿಗೆ ರೋಗ ಬಿದ್ದಿರುವುದನ್ನು ಗಮನಿಸಿದರು.

ಈ ವೇಳೆ ಜಿಲ್ಲಾಧಿಕಾರಿ ಸುರೇಶ ಇಟ್ನಾಳ್, ಸಹಾಯಕ ಆಯುಕ್ತ ಮಮ್ಮದ ಜಿಲಾನಿ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಕೃಷ್ಣ ಉಕ್ಕುಂದ, ಜಿಪಂ ಉಪ ಕಾರ್ಯದರ್ಶಿ ಕೃಷ್ಣಮೂರ್ತಿ, ಡಿವೈಎಸ್ಪಿ ಜೆ.ಎಸ್.ನ್ಯಾಮಗೌಡ, ಪಿಐ ವಿ.ನಾರಾಯಣ, ತಹಸೀಲ್ದಾರ ಚಂದ್ರಶೇಖರ ಗಾಳಿ, ತಾಪಂ ಇಒ ರಾಜಶೇಖರ, ಸಹಾಯಕ ಕೃಷಿ ನಿರ್ದೇಶಕಿ ಅಭಿಲಾಷಾ, ತಾಲೂಕು ಪಶು ವೈದ್ಯಾಧಿಕಾರಿ ಮಲ್ಲಯ್ಯ, ಪಪಂ ಉಪಾಧ್ಯಕ್ಷ ಕಂಠಿರಂಗಪ್ಪ ನಾಯಕ, ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ರೆಡ್ಡಿಶ್ರೀನಿವಾಸ, ಟಿ.ಜೆ ರಾಮಚಂದ್ರ, ಶಾಂತಪ್ಪ ಬಸರಿಗಿಡ, ವೆಂಕಟೇಶ ಕುಲಕರ್ಣಿ, ರಾಜಸಾಬ್‌ ನಂದಾಪೂರ, ನಾಗೇಶ ಬಡಿಗೇರ, ಪಾಮಣ್ಣ ಅರಳಿಗನೂರು, ನೀಲಕಂಠ ಬಡಿಗೇರ, ಮಲ್ಲಿಕಾರ್ಜುನ ಕನ್ನೇರಮಡು ಸೇರಿ ಇತರರು ಇದ್ದರು.

ಸಚಿವ ತಂಗಡಗಿ ಭಾವುಕ: ದುಡಿಯುವ ಕೈಗಳಿಗೆ ಕೆಲಸ ಇಲ್ಲದಿರುವುದು, ಒಣಗಿ ಹೋಗಿರುವ ಬೆಳೆಯಿಂದ ರೈತರು ಹಾಕುತ್ತಿರುವ ಕಣ್ಣೀರಿಗೆ ಸಚಿವ ತಂಗಡಗಿ ಭಾವುಕರಾದರು. ಸುಳೇಕಲ್, ಕನಕಗಿರಿ, ಹುಲಿಹೈದರ ಸೀಮಾ ವ್ಯಾಪ್ತಿಯಲ್ಲಿನ ರೈತರ ಪರಿಸ್ಥಿತಿ ಅರಿತ ಸಚಿವರು, ಭಾವುಕರಾಗಲು ಕಾರಣವಾಯಿತು. ಬೆಳೆ ವೀಕ್ಷಣೆ ವೇಳೆ ಸಚಿವರ ಜತೆಗೆ ಇದ್ದ ಜಿಲ್ಲಾಧಿಕಾರಿಗಳ ನೇತೃತ್ವದ ತಂಡದ ಅಧಿಕಾರಿಗಳ ಮುಖವೂ ಮುದುಡಿ ಹೋಗಿತ್ತು.