ಸಾರಾಂಶ
ಎಲ್ಲ ಸಂಸ್ಕೃತಿಯ ಸಾರವನ್ನು ಜೀರ್ಣಿಸಿಕೊಂಡು ಮನುಷ್ಯ ಬೆಳೆಯಬೇಕು. ಸಣ್ಣ ಕಥೆಗಳ ಮೂಲಕ ಇತಿಹಾಸದ ಚರಿತ್ರೆಯನ್ನು ಅನುಭವಕ್ಕೆ ತರುವುದು ಮಾಸ್ತಿ ಅವರ ಸಾಹಿತ್ಯದ ಮುಖ್ಯ ಉದ್ದೇಶವಾಗಿತ್ತು. ಮಾಸ್ತಿ ಕನ್ನಡದ ಆಸ್ತಿ ಎಂದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಆರ್.ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠದ ಪ್ರಾಧ್ಯಾಪಕ ಡಾ.ಮಲ್ಲಪ್ಪ ಬಂಡಿ ಹೇಳಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಎಲ್ಲ ಸಂಸ್ಕೃತಿಯ ಸಾರವನ್ನು ಜೀರ್ಣಿಸಿಕೊಂಡು ಮನುಷ್ಯ ಬೆಳೆಯಬೇಕು. ಸಣ್ಣ ಕಥೆಗಳ ಮೂಲಕ ಇತಿಹಾಸದ ಚರಿತ್ರೆಯನ್ನು ಅನುಭವಕ್ಕೆ ತರುವುದು ಮಾಸ್ತಿ ಅವರ ಸಾಹಿತ್ಯದ ಮುಖ್ಯ ಉದ್ದೇಶವಾಗಿತ್ತು. ಮಾಸ್ತಿ ಕನ್ನಡದ ಆಸ್ತಿ ಎಂದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಆರ್.ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠದ ಪ್ರಾಧ್ಯಾಪಕ ಡಾ.ಮಲ್ಲಪ್ಪ ಬಂಡಿ ಹೇಳಿದರುಶಿವಾನುಭವ ಸಮಿತಿ ಹಾಗೂ ಸಾಹಿತ್ಯ ಸಂಸ್ಕೃತಿ ಸಂವಹನ ವೇದಿಕೆ ಚರಂತಿಮಠ ಬಾಗಲಕೋಟೆ ಸಹಯೋಗದಲ್ಲಿ ಜ್ಞಾನಪೀಠ ಪುರಸ್ಕೃತರ ಸಾಹಿತ್ಯ ಸಂವಾದ ತಿಂಗಳ ಉಪನ್ಯಾಸ ಮಾಲಿಕೆ 4ರಲ್ಲಿ ಜ್ಞಾನಪೀಠ ಪುರಸ್ಕೃತ ಮಾಸ್ತಿ ವೆಂಕಟೇಶ ಅಯ್ಯಂಗಾರ ಅವರ ಕಥನ ಸಾಹಿತ್ಯದಲ್ಲಿ ಜೀವನದೃಷ್ಟಿ ಕುರಿತು ಉಪನ್ಯಾಸ ನೀಡಿದರು.
ಎಲ್ಲವನ್ನು ದಾಟಿ ನಿಲ್ಲುವ ಚೈತನ್ಯ ಶಕ್ತಿ ಮನುಷ್ಯನಲ್ಲಿದೆ ಎಂದು ನಂಬಿದ ಸಾಂಸ್ಕೃತಿಕ ಪರಂಪರೆ ನಮ್ಮದು. ಇಂತಹ ಪರಂಪರೆಯ ದರ್ಶನ ದೃಷ್ಟಿಯನ್ನು ತಮ್ಮ ಕಥೆ, ಕಾದಂಬರಿಗೆ ಆಧಾರ ಸ್ತಂಭವಾಗಿಟ್ಟುಕೊಂಡು ಬರವಣಿಗೆ ಮಾಡಿದವರು ಮಾಸ್ತಿ, ಕನ್ನಡಕ್ಕೆ ಸಣ್ಣಕತೆ ಎಂಬ ಹೊಸ ಪ್ರಕಾರ ಕೊಟ್ಟವರು ಮಾಸ್ತಿ. ಕನ್ನಡ ಸಣ್ಣ ಕಥೆಗಳ ಪಿತಾಮಹ, ಕನ್ನಡದ ಆಸ್ತಿ ಎಂದೇ ಪ್ರಸಿದ್ಧರಾದ ಡಾ.ಮಾಸ್ತಿ ವೆಂಕಟೇಶ ಅಯ್ಯಂಗಾರರು ಸಾಹಿತ್ಯದ ಸರ್ವಕ್ಷೇತ್ರಗಳಲ್ಲೂ ಸೇವೆ ಸಲ್ಲಿಸಿ ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸಿದ ಸಾಧಕ. ತಮ್ಮ ಉನ್ನತ ಸರ್ಕಾರಿ ಸೇವೆಯಿಂದ ಸ್ವಯಂ ನಿವೃತ್ತಿ ಪಡೆದ ನಂತರ ಕನ್ನಡನಾಡು ನುಡಿಯ ಉತ್ಕರ್ಷಕ್ಕೆ ಬದುಕನ್ನು ಮುಡಿಪಾಗಿಟ್ಟವರು. ಕನ್ನಡ ಸಾಹಿತ್ಯ ಲೋಕದಲ್ಲಿ ಮಾಸ್ತಿ ಎಂದೇ ಖ್ಯಾತರಾಗಿರುವ ಈ ಸಾಹಿತಿ ಶ್ರೀನಿವಾಸ ಎಂಬ ಕಾವ್ಯನಾಮದಡಿಯಲ್ಲಿ ಬರೆಯುತ್ತಿದ್ದರು ಎಂದು ಸ್ಮರಿಸಿದರು.ಸಾನ್ನಿಧ್ಯವನ್ನು ವಹಿಸಿ ಆಶೀರ್ವಚನ ನೀಡಿದ ಚರಂತಿಮಠದ ಪ್ರಭು ಸ್ವಾಮೀಜಿ, ಮಾಸ್ತಿ ಅವರು ಕನ್ನಡ ಸಾಹಿತ್ಯದ ಸೀಮಾ ಪುರುಷರಾಗಿದ್ದವರು. ಬದುಕಿನ ಪರಿರ್ವತನೆಗಾಗಿ ಸಾಹಿತ್ಯ, ಕಥೆಗಳು ಮುಖ್ಯವಾಗಿವೆ ಎಂದರು.
ಬಿ.ವಿ.ವಿ.ಸಂಘದ ಆಡಳಿತಾಧಿಕಾರಿ ಡಾ.ವಿಜಯಕುಮಾರ ಕಟಗಿಹಳ್ಳಿಮಠ ಅಧ್ಯಕ್ಷತೆ ವಹಿಸಿದ್ದರು, ವೇದಿಕೆ ಮೇಲೆ ಸಿದ್ದರಹಳ್ಳಿ ಗವಿಮಠದ ಮಲ್ಲಿಕಾರ್ಜುನ ಸ್ವಾಮೀಜಿ ಇದ್ದರು, ಡಾ.ನಂಜುಂಡಸ್ವಾಮಿ ಸ್ವಾಗತಿಸಿದರು. ಐ.ಕೆ. ಮಠದ ನಿರೂಪಿಸಿದರು. ನಂದಿನಿ ದೊಡಮನಿ ವಂದಿಸಿದರು.