ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಡಿಸೆಂಬರ್ ೨೦ರಿಂದ ಮೂರು ದಿನಗಳ ಕಾಲ ನಡೆಯುವ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಂಬಂಧಿಸಿದಂತೆ ೪೦ ಮಂದಿ ವಕೀಲರನ್ನು ವಿವಿಧ ಉಪ ಸಮಿತಿಗಳಿಗೆ ಸದಸ್ಯರನ್ನಾಗಿ ನೇಮಕ ಮಾಡಿ ಶಾಸಕ ಪಿ.ರವಿಕುಮಾರ್ ವಕೀಲರಿಗೆ ನೇಮಕಾತಿ ಪತ್ರ ನೀಡಿದರು.ನಗರದ ಪ್ರವಾಸಿ ಮಂದಿರದಲ್ಲಿ ವಕೀಲರೊಂದಿಗೆ ಸಭೆ ನಡೆಸಿ ಮಾತನಾಡಿ, ಸಮ್ಮೇಳನದ ಯಶಸ್ವಿಗೆ ವಕೀಲರ ಪಾತ್ರ ಇರಬೇಕು. ವಿವಿಧ ಸಮಿತಿಗಳಿಗೆ ನೇಮಿಸಿರುವ ವಕೀಲರು ಸಮಿತಿಯ ಸಭೆಗಳಲ್ಲಿ ಭಾಗವಹಿಸಿ ಸಲಹೆ ನೀಡುವುದು ಅವಶ್ಯವಾಗಿದೆ. ಈಗಾಗಲೇ ನಾನು ವಸತಿ ಸಮಿತಿ ಅಧ್ಯಕ್ಷನಾಗಿ ಕೆಲಸ ಮಾಡುತ್ತಿದ್ದು, ಹಲವಾರು ಸಭೆಗಳು ನಡೆದಿವೆ ಮುಂದಿನ ಸಭೆಗಳಲ್ಲಿ ವಸತಿ ಸಮಿತಿಗೆ ನೇಮಕಗೊಂಡಿರುವ ವಕೀಲರು ಭಾಗಹಿಸುವಂತೆ ತಿಳಿಸಿದರು.
ಮಂಡ್ಯ ನಗರದಲ್ಲಿ ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ಎರಡು ಜಾಗ ಗುರುತಿಸಲಾಗಿದ್ದು, ಮುಂದಿನ ದಿನಗಳಲ್ಲಿ ಕಟ್ಟಡ ನಿರ್ಮಾಣ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.ಸಭೆಯಲ್ಲಿ ವಕೀಲ ಟಿ.ಎಸ್.ಸತ್ಯಾನಂದ ಮಾತನಾಡಿ, ಸಮ್ಮೇಳನಾಧ್ಯಕ್ಷರ ಉಪಸಮಿತಿಗೆ ವಕೀಲ ಬಸವಯ್ಯ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದು ವಕೀಲರಿಗೆ ಸಂದ ಗೌರವ ಎಂದರು.
ಹಿರಿಯ ವಕೀಲ ಬಸವಯ್ಯ ಮಾತನಾಡಿ, ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಎಲ್ಲರೂ ನಮ್ಮ ಮನೆಯ ವ್ಯವಹಾರ ಎಂದು ತಿಳಿದು ವಕೀಲರು ಮನೆಯ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು. ಎಲ್ಲರೂ ಒಮ್ಮತದಿಂದ ಮನಃಪೂರ್ವಕವಾಗಿ ಕೆಲಸ ಮಾಡಿದರೆ ಸಾಹಿತ್ಯ ಸಮ್ಮೇಳನಕ್ಕೆ ಯಶಸ್ಸು ಸಿಗುತ್ತದೆ ಎಂದರು.ವಕೀಲರ ಸಂಘದ ಅಧ್ಯಕ್ಷ ರಾಜೇಂದ್ರ, ಎಂ.ಜೆ.ಜೈನ್, ಅರುಣ್‌ಕುಮಾರ್, ಉಮಾ, ಮಹೇಶ್, ಜಯಲಕ್ಷ್ಮೀ, ಕೆಂಪೇಗೌಡ, ಶಿವಕುಮಾರ್, ಭಾಸ್ಕರ್, ರೂಪಾ, ಪೂರ್ಣಿಮಾ, ಕೃಷ್ಣಮೂರ್ತಿ, ನಾಗರಾಜು ಇತರರು ಸಭೆಯಲ್ಲಿ ಭಾಗವಹಿಸಿದ್ದರು.
ಮೇಲುಕೋಟೆಗೆ ಇಂದು ಸಾಹಿತ್ಯ ಸಮ್ಮೇಳನ ಪ್ರಚಾರ ರಥ ಆಗಮನಮೇಲುಕೋಟೆ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರ ರಥ ಖ್ಯಾತ ಕವಿ ಪು.ತಿ,ನ ತವರೂರು ಮೇಲುಕೋಟೆಗೆ ಸೋಮವಾರ ಆಗಮಿಸಲಿದೆ. ರಥ ಮೇಲುಕೋಟೆ ಹೊರಭಾಗದ ವೀರಾಂಜನೇಯಸ್ವಾಮಿ ದೇವಾಲಯದ ಬೆಳ್ಳಗೆ 9 ಗಂಟೆಗೆ ಆಗಮಿಸಲಿದೆ. ಅಲ್ಲಿ ಸ್ವಾಗತ ಕಾರ್ಯಕ್ರಮ ಆಯೋಜಿಸಲಾಗಿದ್ದು ವಿವಿಧ ಶಾಲಾ ಕಾಲೇಜು ಮಕ್ಕಳು ಭಾಗವಹಿಸಲಿದ್ದಾರೆ. ನಂತರ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿರುವ ಸಾಹಿತ್ಯ ರಥ ಡಿಸೆಂಬರ್‌ನಲ್ಲಿ ಮಂಡ್ಯದಲ್ಲಿ ನಡೆಯುವ ಸಾಹಿತ್ಯ ಸಮ್ಮೇಳದ ಮಾಹಿತಿ ನೀಡಲಿದೆ. ರಥದ ಸುಗಮ ಸಂಚಾರ ಮತ್ತು ಭವ್ಯ ಸ್ವಾಗತಕ್ಕೆ ಗ್ರಾಮ ಪಂಚಾಯ್ತಿ ವ್ಯವಸ್ಥೆ ಮಾಡಿಕೊಂಡಿದೆ.