ಸಾಹಿತ್ಯ ಸಮ್ಮೇಳನ ಸಂಭ್ರಮಿಸುವ ಕಾಲ

| Published : Mar 21 2025, 12:36 AM IST

ಸಾರಾಂಶ

ಕೋಟ್ಯಂತರ ಖರ್ಚು ಮಾಡಿ ಸಮ್ಮೇಳನ ಆಯೋಜಿಸಲಾಗುತ್ತಿದೆ. ಇವು ವ್ಯರ್ಥವಾಗಬಾರದು. ಇಂತಹ ಕಾರ್ಯಕ್ರಮಗಳ ಮೂಲಕ ಕನ್ನಡಕ್ಕೆ ಇರುವ ವಿವೇಕ ಎಚ್ಚರಿಸುವ ಕಾರ್ಯವಾಗಬೇಕಿದೆ

ಹುಬ್ಬಳ್ಳಿ: ಸಾಹಿತ್ಯ ಸಮ್ಮೇಳನ ಎನ್ನುವುದು ಸಂಭ್ರಮದ ಕಾಲ. ಕೇವಲ ಆಹ್ವಾನ ಬಂದಿಲ್ಲ ಎಂಬ ಕಾರಣಕ್ಕೆ ಈ ಸಂಭ್ರಮದ ಭಾಗಿಗಳು ನಾವಾಗದಿದ್ದರೆ ಕನ್ನಡ ಭಾಷೆ ಉಳಿಯುವುದು ಕಷ್ಟ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಹೇಳಿದರು.

ಅವರು ಇಲ್ಲಿನ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಭಾಂಗಣ, ಹುಬ್ಬಳ್ಳಿ ನಗರ 10ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಕೋಟ್ಯಂತರ ಖರ್ಚು ಮಾಡಿ ಸಮ್ಮೇಳನ ಆಯೋಜಿಸಲಾಗುತ್ತಿದೆ. ಇವು ವ್ಯರ್ಥವಾಗಬಾರದು. ಇಂತಹ ಕಾರ್ಯಕ್ರಮಗಳ ಮೂಲಕ ಕನ್ನಡಕ್ಕೆ ಇರುವ ವಿವೇಕ ಎಚ್ಚರಿಸುವ ಕಾರ್ಯವಾಗಬೇಕಿದೆ. ಕಾರಣಾಂತರಗಳಿಂದ ನಮ್ಮ ದೈನಂದಿನ ಜೀವನದಲ್ಲಿ, ರಾಜಕೀಯದ ಗಲಾಟೆ, ಚುನಾವಣೆ, ಭ್ರಷ್ಟಾಚಾರ, ಜಾತೀಯತೆ ಸೇರಿದಂತೆ ನೂರಾರು ಶಾಪಗಳ ನಡುವೆ ಕನ್ನಡದ ವಿವೇಕ ಕಳೆದು ಹೋಗದ ಎಚ್ಚರ ಉಳಿಸಿಕೊಳ್ಳಲು ಸಾಧ್ಯವಾದಲ್ಲಿ ಕನ್ನಡ ಉಳಿವಿಗಾಗಿ ಶ್ರಮಿಸಿದ ಮಹನೀಯರ ಶ್ರಮ ಸಾರ್ಥಕವಾಗುತ್ತದೆ ಎಂದರು.

ಕನ್ನಡಕ್ಕೆ ಬಡಿದ ಜಾಢ್ಯ:

ಕನ್ನಡ ನಿರೀಕ್ಷಿತ ವೇಗದಲ್ಲಿ ಬೆಳೆಯುತ್ತಿಲ್ಲ. ಕನ್ನಡ ಶಾಲೆಗಳು ಮುಚ್ಚುತ್ತಿವೆ. ಸಮ್ಮೇಳನದಲ್ಲಿ ರಾಜಕೀಯೇತರವಾಗಿ ಚರ್ಚಿಸುವ ಕಾರ್ಯವಾಗಬೇಕಿದೆ. ಈ ವಿಷಯದಲ್ಲಿ ಎಂದಿಗೂ ರಾಜಕೀಯ ತರದೇ ಎಲ್ಲ ರಾಜಕೀಯ ಪಕ್ಷಗಳು ಬಂದು ಕನ್ನಡದ ಕೆಲಸ ಮಾಡುವಂತಹ ವಾತಾವರಣ ನಿರ್ಮಾಣವಾದರೆ ಮಾತ್ರ ಕನ್ನಡದ ಉಳಿವು ಎಂದರು.

ಇಂದು ಕನ್ನಡದ ವಿವೇಕಕ್ಕೆ ಜಾಢ್ಯ ಬಡಿದಿದೆ. ಪ್ರತಿಯೊಬ್ಬ ಕನ್ನಡಿಗರು ನಿಮ್ಮ ಬಳಿ ಮತಕೇಳಲು ಆಗಮಿಸುವ ಜನಪ್ರತಿನಿಧಿಗಳಿಗೆ ಕನ್ನಡ ಶಾಲೆಗಳ ಬಗ್ಗೆ ಪ್ರಶ್ನಿಸುವ ಕಾರ್ಯ ಮಾಡಿ. ಕನ್ನಡ ಭಾಷೆ ಕಲಿಯುವವರ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ರಾಜ್ಯದಲ್ಲಿ ಶೇ. 65ರಷ್ಟು ಕನ್ನಡಿಗರು ತಮ್ಮ ಮಕ್ಕಳಿಗೆ ಆಂಗ್ಲಮಾಧ್ಯಮ ಶಿಕ್ಷಣ ಕಲಿಸುತ್ತಿದ್ದಾರೆ. ನಮ್ಮವರೇ ನಮ್ಮ ಭಾಷೆ ಉಳಿವಿಗೆ ಶ್ರಮಿಸದಿದ್ದರೆ ಕನ್ನಡ ಹೇಗೆ ಉಳಿಯಲು ಸಾಧ್ಯ. ಇದೇ ಪರಿಸ್ಥಿತಿ ಮುಂದುವರಿದರೆ ಮುಂದಿನ 75-100 ವರ್ಷಗಳಲ್ಲಿ ಕನ್ನಡ ಬರವಣಿಗೆ ಭಾಷೆಯಾಗಿ ಉಳಿಯದೇ ಕೇವಲ ಆಡುಭಾಷೆಯಾಗಿ ಉಳಿಯಲಿದೆ ಎಂದರು.

ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ ಮಾತನಾಡಿ, ಕಸಾಪ ಕನ್ನಡದ ಉಳಿವಿಗಾಗಿ ನಿರಂತರವಾಗಿ ಶ್ರಮಿಸುತ್ತಿದೆ ಎಂದರು.

ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷ ವೆಂಕಟೇಶ ಮರೇಗುದ್ದಿ, ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಬಿ.ವಿ. ಶಿರೂರ ಮಾತನಾಡಿದರು. ಈ ವೇಳೆ ಮಾಜಿ ಸಂಸದ ಪ್ರೊ.ಐ.ಜಿ. ಸನದಿ, ವಿಪ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ, ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಉಮೇಶಗೌಡ ಕೌಜಗೇರಿ, ವೀಣಾ ವಂಟಮುರಿ, ಎಚ್‌.ಎಫ್‌. ಜಕ್ಕಪ್ಪನವರ, ಗೋವಿಂದ ಜೋಶಿ, ಬಿ.ಎ. ಪಾಟೀಲ, ಡಾ. ಶರಣಪ್ಪ ಕೊಟಗಿ, ಡಿ.ಟಿ. ಪಾಟೀಲ, ಸಂಕಲ್ಪ ಶೆಟ್ಟರ, ಎಂ.ಎ. ಸುಬ್ರಹ್ಮಣ್ಯ, ಡಾ. ಎಂ.ಜಿ. ಸಜ್ಜನರ, ಮಂಜುನಾಥ ಅಬ್ಬಯ್ಯ, ವಿ.ಎಫ್‌. ಚಳಕಿ ಸೇರಿದಂತೆ ಹಲವರಿದ್ದರು.

ಕಸಾಪ ತಾಲೂಕಾಧ್ಯಕ್ಷೆ ವಿದ್ಯಾ ವಂಟಮುರಿ ಸ್ವಾಗತಿಸಿದರು. ಡಾ. ಬಿ.ಎಸ್‌. ಮಾಳವಾಡ ನಿರೂಪಿಸಿದರು. ಆರ್‌.ಎಂ. ಗೋಗೇರಿ ವಂದಿಸಿದರು. ಕಾರ್ಯಕ್ರಮದ ಪೂರ್ವದಲ್ಲಿ ಇಲ್ಲಿನ ದೇಶಪಾಂಡೆ ನಗರದ ಕಾಮಾಕ್ಷಿ ದೇವಾಲಯದಿಂದ ಸವಾಯಿ ಗಂಧರ್ವ ಸಭಾಂಗಣದ ವರೆಗೆ ವಿವಿಧ ಕಲಾ ತಂಡಗಳೊಂದಿಗೆ ಸಮ್ಮೇಳನದ ಸರ್ವಾಧ್ಯಕ್ಷರ ಮೆರವಣಿಗೆ ನಡೆಯಿತು. ಕಾರ್ಯಕ್ರಮದ ಬಳಿಕ ವಿವಿಧ ಗೋಷ್ಠಿಗಳು, ಸರ್ವಾಧ್ಯಕ್ಷರೊಂದಿಗೆ ಸಂವಾದ ಕಾರ್ಯಕ್ರಮ ನೆರವೇರಿತು.