ಸಾಹಿತ್ಯ ಸಮ್ಮೇಳನ ಕನ್ನಡದ ಮನಸ್ಸುಗಳ ಕಟ್ಟಬೇಕು: ಪಂಡಿತಾರಾಧ್ಯ ಶ್ರೀ

| Published : Mar 29 2025, 12:30 AM IST

ಸಾಹಿತ್ಯ ಸಮ್ಮೇಳನ ಕನ್ನಡದ ಮನಸ್ಸುಗಳ ಕಟ್ಟಬೇಕು: ಪಂಡಿತಾರಾಧ್ಯ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಸಾಹಿತ್ಯ ಸಮ್ಮೇಳನಗಳು ನುಡಿಜಾತ್ರೆಯ ಕಲ್ಪನೆಯಿಂದ ಹೊರಬಂದು ಕನ್ನಡದ ಮನಸ್ಸುಗಳನ್ನು ಕಟ್ಟುವ ಕೆಲಸ ಮಾಡಬೇಕು ಎಂದು ಸಾಣೆಹಳ್ಳಿ ತರಳಬಾಳು ಶಾಖಾಮಠದ ಪಟ್ಟಾಧ್ಯಕ್ಷ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಜಿಲ್ಲಾ ಸಾಹಿತ್ಯ ಸಮ್ಮೇಳನ ಸಮಾರೋಪ । ಸಾಹಿತಿಗಳಿಗೆ ಆದ್ಯತೆ ನೀಡಲು ಸಲಹೆ

ಕನ್ನಡಪ್ರಭ ವಾರ್ತೆ ಹೊಳಲ್ಕೆರೆ

ಸಾಹಿತ್ಯ ಸಮ್ಮೇಳನಗಳು ನುಡಿಜಾತ್ರೆಯ ಕಲ್ಪನೆಯಿಂದ ಹೊರಬಂದು ಕನ್ನಡದ ಮನಸ್ಸುಗಳನ್ನು ಕಟ್ಟುವ ಕೆಲಸ ಮಾಡಬೇಕು ಎಂದು ಸಾಣೆಹಳ್ಳಿ ತರಳಬಾಳು ಶಾಖಾಮಠದ ಪಟ್ಟಾಧ್ಯಕ್ಷ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಚಿತ್ರದುರ್ಗ ಜಿಲ್ಲಾ ೧೭ನೆಯ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ಕನ್ನಡದ ಮನಸ್ಸುಗಳನ್ನು ಕಟ್ಟುವುದೆಂದರೆ ಅದು ನಮ್ಮ ನೆಲ ಮತ್ತು ನಮ್ಮ ಭಾಷೆಯ ಮೇಲಿನ ಪ್ರೀತಿಯನ್ನು ಹೆಚ್ಚಿಸುತ್ತದೆ ಎಂದರು.

ಇಂಗ್ಲಿಷ್‌ ಕಲಿತ ಮಾತ್ರಕ್ಕೆ ತಮ್ಮ ಮಕ್ಕಳಿಗೆ ಉದ್ಯೋಗಗಳು ಲಭಿಸುತ್ತವೆ ಎನ್ನುವ ನಂಬಿಕೆ ಪೋಷಕರಲ್ಲಿ ಬಲವಾಗಿ ಬೆಳೆದಿರುವುದರಿಂದ ಅವರು ತಮ್ಮ ಮಕ್ಕಳನ್ನು ಇಂಗ್ಲಿಷ್‌ ಮಾಧ್ಯಮದ ಶಾಲೆಗಳಿಗೆ ಸೇರಿಸುವುದು ಹೆಚ್ಚಾಗಿದೆ. ಕನ್ನಡ ನಮ್ಮ ತಾಯಿ, ನಮ್ಮ ಮಾತೃಭಾಷೆ. ಅದರ ಬಗ್ಗೆ ನಿರ್ಲಕ್ಷ್ಯ ತೋರಿದರೆ ಸಂಸ್ಕೃತಿ ಮತ್ತು ಸಂಸ್ಕಾರಗಳನ್ನು ಮರೆತಂತೆ ಎಂದು ಶ್ರೀಗಳು ಹೇಳಿದರು.

ರಾಜ್ಯದಲ್ಲಿ ಕನ್ನಡ ಶಾಲೆಗಳನ್ನು ಮುಚ್ಚದೆ ಅವುಗಳನ್ನು ಉಳಿಸಿಕೊಂಡು ಹೋಗುವ ಕೆಲಸ ಸರ್ಕಾರದಿಂದ ಆಗಬೇಕು. ಶತಮಾನದ ಅಂಚಿನಲ್ಲಿರುವ ನೂರಾರು ಶಾಲೆಗಳಿಗೆ ವಿಶೇಷ ಅನುದಾನ, ಸೌಲಭ್ಯ ಕೊಟ್ಟು ಅವುಗಳನ್ನು ಉಳಿಸಿಕೊಳ್ಳುವ ಕೆಲಸ ಸರ್ಕಾರ ಮಾಡಬೇಕಿದೆ. ಕನ್ನಡದ ಶಾಲೆಗಳು ಉಳಿದರೆ ಕನ್ನಡದ ಅಸ್ಮಿತೆ ಉಳಿದಂತೆ ಎಂದರು.

ಸಾಹಿತ್ಯ ಸೃಷ್ಟಿಗೆ ವಯಸ್ಸು ಎಂದಿಗೂ ಅಡ್ಡಿಯಾಗಬಾರದು. ಎಲ್ಲರಲ್ಲಿಯೂ ಭಾಷೆ, ಸಾಹಿತ್ಯದ ಬಗ್ಗೆ ಪ್ರೀತಿ ಇರುತ್ತದೆ. ಅದು ಇರುವ ತನಕವೂ ಸಾಹಿತ್ಯ ಸೃಷ್ಟಿಯಾಗುತ್ತಲೇ ಇರುತ್ತದೆ ಎಂದರು.

ಎಂಎಲ್ಸಿ ಕೆ.ಎಸ್. ನವೀನ್ ಮಾತನಾಡಿ, ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಮಾತೃಭಾಷೆ ಪರೀಕ್ಷೆಗೆ 900ಕ್ಕೂ ಅಧಿಕ ಮಕ್ಕಳು ಗೈರಾಗಿದ್ದಾರೆಂದರೆ ನೋವಿನ ಸಂಗತಿ. ಆದ್ದರಿಂದ ಕನ್ನಡ ಶಾಲೆಗಳನ್ನು ಮುಚ್ಚಬಾರದೆಂದು ವಿಧಾನ ಪರಿಷತ್‌ನಲ್ಲಿ ಧ್ವನಿ ಎತ್ತುತ್ತೇನೆ ಎಂದು ಆಶ್ವಾಸನೆ ನೀಡಿದರು.

ಮಧ್ಯ ಕರ್ನಾಟಕದಲ್ಲಿ ಮಳೆ ಬರದಿದ್ದರೂ ಸಾಹಿತ್ಯಕ್ಕೆ ಎಂದೂ ಬರವಿಲ್ಲ ಎಂಬುದನ್ನು ತೋರಿಸಿರುವ ಏಕೈಕ ಜಿಲ್ಲೆ ಚಿತ್ರದುರ್ಗ. ಕನ್ನಡ ಸಾಹಿತ್ಯ ಲೋಕಕ್ಕೆ ವಿಶೇಷ ಕೊಡುಗೆ ನೀಡಿದ ಸಾಹಿತಿಗಳು ಇಲ್ಲಿ ಜನಿಸಿದ್ದಾರೆ. ಇದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ ಎಂದರು.

ಕನ್ನಡವನ್ನು ಪ್ರೀತಿಸಿ, ಗೌರವಿಸಿ, ಎಲ್ಲ ಭಾಷೆಗಿಂತ ಎತ್ತರದ ಸ್ಥಾನದಲ್ಲಿ ನಿಲ್ಲಬೇಕೆಂಬುದು ಎಲ್ಲರ ಬಯಕೆಯಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಅದರ ಜೀವಂತಿಕೆ ಹಾಗೆಯೇ ಉಳಿದಿದೆ. ಆದರೆ, ನಗರ ಪ್ರದೇಶಗಳಲ್ಲಿ ಭಾಷೆ ಅಳಿವಿನ ಹಂಚಿನಲ್ಲಿದೆ. ಇದಕ್ಕೆ ನಾವೇ ಕಾರಣ ಎಂದು ಬೇಸರಿಸಿದರು.

ಸಾಹಿತಿಗಳಿಗೆ ಆದ್ಯತೆ ನೀಡಬೇಕು:

ಜಿಲ್ಲಾ ಸಮ್ಮೇಳನದ ಆಹ್ವಾನ ಪತ್ರಿಕೆ ಮತದಾರರ ಪಟ್ಟಿಯಂತಿದೆ. ಸಮ್ಮೇಳನದ ಆಹ್ವಾನ ಪತ್ರಿಕೆಯಲ್ಲಿ ರಾಜಕೀಯ ಮುಖಂಡರ ಹೆಸರುಗಳೇ ಪ್ರಾಧಾನ್ಯತೆ ಪಡೆದುಕೊಂಡಿವೆ. ಸಮ್ಮೇಳನದಲ್ಲಿ ಸಾಹಿತಿಗಳಿಗೆ ಆದ್ಯತೆ ನೀಡುವ ಕೆಲಸ ಆಗಬೇಕು ಎಂದರು.

ಸಮ್ಮೇಳನಾಧ್ಯಕ್ಷ ಪ್ರೊ.ಜಿ.ಪರಮೇಶ್ವರಪ್ಪ, ಮಾಜಿ ಶಾಸಕ ಪಿ.ರಮೇಶ್, ತರಳಬಾಳು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜಿ.ಎ.ದೇವರಾಜಯ್ಯ, ಕಸಾಪ ಜಿಲ್ಲಾಧ್ಯಕ್ಷ ಕೆ.ಎಂ.ಶಿವಸ್ವಾಮಿ, ತಾಲೂಕು ಅಧ್ಯಕ್ಷರಾದ ಎನ್.ಶಿವಮೂರ್ತಿ, ವಿ.ಎಲ್.ಪ್ರಶಾಂತ್ ಇತರರು ಇದ್ದರು.

ರಾಜಕಾರಣಿಗಳ ವೇತನ ಏರಿಕೆ

ವಿಧಾನಮಂಡಲದಲ್ಲಿ ಯಾವುದೇ ಗಂಭೀರ ಚರ್ಚೆಯೂ ಇಲ್ಲದೆ ನಮ್ಮ ಜನಪ್ರತಿನಿಧಿಗಳು ತಮ್ಮ ವೇತನ ಮತ್ತು ಭತ್ಯೆಗಳನ್ನು ಹೆಚ್ಚಿಸಿಕೊಂಡಿದ್ದಾರೆ. ಜನರ ಸಂಕಷ್ಟಗಳನ್ನು ಪರಿಹರಿಸುವಲ್ಲಿಯೂ ಇಷ್ಟೇ ಸುಲಭ ಮತ್ತು ಸರಳವಾದ ವಿಧಾನವನ್ನು ಯಾಕೆ ಇವರು ಅನುಸರಿಸುತ್ತಿಲ್ಲವೋ ಎಂಬ ಪ್ರಶ್ನೆ ಜನರನ್ನು ಕಾಡುತ್ತದೆ. ಜನಪ್ರತಿನಿಧಿಗಳ ವೇತನ ಹೆಚ್ಚಾದಂತೆ ಜನಸಾಮಾನ್ಯರ ಸಂಕಷ್ಟಗಳೂ ಬಗೆಹರಿಯುವಂತಾಗಬೇಕು ಎಂದು ಶ್ರೀಗಳು ತಾಕೀತು ಮಾಡಿದರು.

ಕಾರ್ಯಕರ್ತರ ಲೋಪವೇ ಕಾರಣ

ಮೊದಲ ದಿನದ ಕಾರ್ಯಕ್ರಮದಲ್ಲಿ ಸ್ವಾಮೀಜಿ ಒಬ್ಬರು ಹಾಜರಾಗಿ, ವೇದಿಕೆ ಏರದೇ ಹಿಂದಿರುಗಿದ ಘಟನೆ ಮನಸ್ಸಿಗೆ ತುಂಬಾ ನೋವುಂಟು ಮಾಡಿದೆ. ಇದಕ್ಕೆ ಕಾರ್ಯಕರ್ತರ ಲೋಪವೇ ಕಾರಣ. ಎಂದೂ ಈ ರೀತಿಯಾಗಬಾರದು ಎಂದು ಪಂಡಿತಾರಾಧ್ಯ ಶ್ರೀ ಸಲಹೆ ನೀಡಿದರು.