ಸಾಹಿತ್ಯ ಸಮ್ಮೇಳನ: ಕನ್ನಡಕ್ಕಾಗಿ ಓಟ ಮ್ಯಾರಥಾನ್‌ಗೆ ಚಿತ್ರ ತಾರೆಯರ ಮೆರಗು

| Published : Dec 18 2024, 12:46 AM IST

ಸಾಹಿತ್ಯ ಸಮ್ಮೇಳನ: ಕನ್ನಡಕ್ಕಾಗಿ ಓಟ ಮ್ಯಾರಥಾನ್‌ಗೆ ಚಿತ್ರ ತಾರೆಯರ ಮೆರಗು
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಮಂಗಳವಾರ ಮ್ಯಾರಥಾನ್ ಸ್ಪರ್ಧೆಗೆ ಚಾಲನೆ ನೀಡುವ ವೇಳೆ ನಟರಾದ ನೀನಾಸಂ ಸತೀಶ್, ಡಾಲಿ ಧನಂಜಯ್, ಚಿತ್ರನಟಿ ಸಪ್ತಮಿಗೌಡ, ನಟ ಸಚ್ಚಿನ್ ಚಲುವರಾಯಸ್ವಾಮಿ ಸೇರಿ ಹಲವರು ಓಟದಲ್ಲಿ ಭಾಗವಹಿಸಿದವರಿಗೆ ಉತ್ಸಾಹ ತುಂಬಿ ಕನ್ನಡ ಭಾಷೆ ಉಳಿವಿನ ಬಗ್ಗೆ ಮಾತುಗಳನ್ನಾಡಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕನ್ನಡಕ್ಕಾಗಿ ಓಟ ಘೋಷ ವಾಕ್ಯದೊಂದಿಗೆ ನಡೆದ ಮ್ಯಾರಥಾನ್ ಸ್ಪರ್ಧೆಗೆ ಚಿತ್ರ ತಾರೆಯರು, ಪೊಲೀಸ್ ಅಧಿಕಾರಿಗಳು ಕೈ ಜೋಡಿಸಿ ಮೆರೆಗು ನೀಡಿದರು.

ನಗರದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಮಂಗಳವಾರ ಮ್ಯಾರಥಾನ್ ಸ್ಪರ್ಧೆಗೆ ಚಾಲನೆ ನೀಡುವ ವೇಳೆ ನಟರಾದ ನೀನಾಸಂ ಸತೀಶ್, ಡಾಲಿ ಧನಂಜಯ್, ಚಿತ್ರನಟಿ ಸಪ್ತಮಿಗೌಡ, ನಟ ಸಚ್ಚಿನ್ ಚಲುವರಾಯಸ್ವಾಮಿ ಸೇರಿ ಹಲವರು ಓಟದಲ್ಲಿ ಭಾಗವಹಿಸಿದವರಿಗೆ ಉತ್ಸಾಹ ತುಂಬಿ ಕನ್ನಡ ಭಾಷೆ ಉಳಿವಿನ ಬಗ್ಗೆ ಮಾತುಗಳನ್ನಾಡಿದರು.

ನಂತರ ಮ್ಯಾರಥಾನ್ ಓಟ ನಗರದ ಸರ್ ಎಂವಿ ಕ್ರೀಡಾಂಗಣದಿಂದ ಆರಂಭಗೊಂಡು ಆರ್.ಪಿ.ರಸ್ತೆ ಮೂಲಕ ಹೃದಯಭಾಗ ಬೆಂಗಳೂರು - ಮೈಸೂರು ಹೆದ್ದಾರಿಯ ಜಯಚಾಮರಾಜ ಒಡೆಯರ್ ವೃತ್ತಕ್ಕೆ ಆಗಮಿಸಿತು. ಅಲ್ಲಿಂದ ಸಮ್ಮೇಳನ ನಡೆಯುವ ನಗರದ ಸಾಂಜೋ ಆಸ್ಪತ್ರೆ ಹಿಂಭಾಗದ ಜಾಗಕ್ಕೆ ಆಗಮಿಸಿತು.

ಸುಮಾರು 4 ಕಿ.ಮೀ ವರೆಗಿನ ಓಟದಲ್ಲಿ ವಿವಿಧ ಜಿಲ್ಲೆ, ತಾಲೂಕುಗಳಿಂದ ಸಾವಿರಾರು ಜನರು, ಶಾಲಾ, ಕಾಲೇಜು ವಿದ್ಯಾರ್ಥಿಗಳು, ಕನ್ನಡ ಸಂಘಟನೆಗಳ ಮುಖಂಡರು, ಹೋರಾಟಗಾರರು, ಕ್ರೀಡಾಪಟುಗಳು, ಅಧಿಕಾರಿಗಳು, ರಾಜಕೀಯ ಮುಖಂಡರು, ಸರ್ಕಾರಿ ನೌಕರರು ಪಾಲ್ಗೊಂಡು ಗಮನ ಸೆಳೆದರು.

ಶ್ರೀಗಳು, ಸಚಿವರು, ಶಾಸಕರು ಸಾಥ್:

ಮ್ಯಾರಾಥಾನ್ ಓಟದಲ್ಲಿ ಸ್ವತಃ ಆದಿಚುಂಚನಗಿರಿ ಶ್ರೀಗಳು, ಸಚಿವ ಚಲುವರಾಯಸ್ವಾಮಿ ಕೆಲದೂರ ಹೆಜ್ಜೆ ಹಾಕಿ ಸಾಥ್ ನೀಡಿದರು. ಮಂಡ್ಯ ಕ್ಷೇತ್ರದ ಶಾಸಕ ಪಿ.ರವಿಕುಮಾರ್, ವಿಧಾನ ಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ, ಮಧು ಜಿ. ಮಾದೇಗೌಡ ಕಸಾಪ ರಾಜ್ಯಾಧ್ಯಕ್ಷ ಮಹೇಶ್ ಜೋಷಿ, ಜಿಲ್ಲಾ ಸಂಚಾಲಕಿ ಮೀರಾ ಶಿವಲಿಂಗಯ್ಯ ಓಟದ ಕೊನೆವರೆಗೂ ಉತ್ಸಾಹದಿಂದಲೇ ಹೆಜ್ಜೆ ಹಾಕಿದರು.

ಕನ್ನಡ ಪರ ಜೈಕಾರ, ಧ್ವಜ ಹಿಡಿದು ಸಂಭ್ರಮ:

ಕನ್ನಡ ಧ್ವಜವಿರುವ ಬಿಳಿ ಟೀ ಶರ್ಟ್ ತೊಟ್ಟು, ನಾಡ ಧ್ವಜ ಹಿಡಿದು ಮ್ಯಾರಥಾನ್ ನಲ್ಲಿ ಹೆಜ್ಜೆ ಹಾಕುತ್ತಿದ್ದ ವೇಳೆ ಕನ್ನಡಪರ ಜೈಕಾರ, ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಯಾಗಲಿ ಜಯಘೋಷಣೆಗಳು ಕೇಳಿ ಬಂದವು. ಮೈಸೂರಿನಿಂದ ಬೆಂಗಳೂರಿಗೆ ಹೋಗುವ ಹೆದ್ದಾರಿ ರಸ್ತೆ ಯುದ್ದಕ್ಕೂ ಸಾವಿರಾರು ಮಂದಿ ಪಾಲ್ಗೊಂಡಿದ್ದರಿಂದ ಒಂದು ರೀತಿಯಲ್ಲಿ ಹಬ್ಬದಲ್ಲಿ ಮೆರವಣಿಗೆ ಮಾಡಿದಂತೆ ಕಂಡು ಬಂತು.

ಎಡಿಜಿಪಿ, ಐಜಿಪಿ ಭಾಗಿ:

ಕನ್ನಡಕ್ಕಾಗಿ ಓಟದಲ್ಲಿ ಎಡಿಜಿಪಿ ಅಲೋಕ್ ಕುಮಾರ್, ಮಂಡ್ಯ ಜಿಲ್ಲೆಯ ಬೆಸಗರಹಳ್ಳಿ ಗ್ರಾಮದವರಾದ, ಬೆಂಗಳೂರು ಸೆಂಟ್ರಲ್ ಐಜಿಪಿ ಬಿ.ಆರ್.ರವಿಕಾಂತೇಗೌಡರು ಭಾಗವಹಿಸಿದ್ದು ವಿಶೇಷವಾಗಿತ್ತು. ಮರಳಿಗ ಗ್ರಾಮದ ಅವಿನಾಶ್ ಮಗುವನ್ನು ಹೆಗಲ ಮೇಲೆ ಹೊತ್ತು ಓಡಿದ್ದು ಗಮನ ಸೆಳೆಯಿತು.

ಬಿಗಿ ಪೊಲೀಸ್ ವ್ಯವಸ್ಥೆ:

ಮ್ಯಾರಥಾನ್ ಹಿನ್ನೆಲೆಯಲ್ಲಿ ಹೆದ್ದಾರಿಯ ಒಂದು ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಸುಸ್ತಾದ ವಿದ್ಯಾರ್ಥಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ಮುನ್ನೆಚ್ಚರಿಕೆಯಾಗಿ ಪ್ರಾಥಮಿಕ ಚಿಕಿತ್ಸಾ ವ್ಯವಸ್ಥೆ ಕಲ್ಪಿಸಲಾಗಿತ್ತು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಆರಂಭದಲ್ಲಿ ನಟ ಡಾಲಿ ಧನಂಜಯ್, ಇಂಗ್ಲಿಷ್ ನಲ್ಲಿ ಬಡವ, ಕನ್ನಡದಲ್ಲಿ ಶ್ರೀಮಂತ ಎಂದು ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು.

ಕನ್ನಡ ಸಾಹಿತ್ಯ ಹಿನ್ನೆಲೆಯಲ್ಲಿ ಮ್ಯಾರಥಾನ್ ಆಯೋಜಿಸಿರುವುದಕ್ಕೆ ಇಷ್ಟು ಪ್ರಮಾಣದಲ್ಲಿ ಜನರು ಸೇರಿರುವುದಕ್ಕೆ ಕನ್ನಡದ ಮೇಲಿರುವ ಅಭಿಮಾನವನ್ನು ತೋರುತ್ತದೆ. ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುವ ಮೂರು ದಿನಗಳು ನಿಮ್ಮಲ್ಲಿ ಇದೇ ಹುಮ್ಮಸ್ಸು ಇರಲಿ. ಪ್ರತಿಯೊಬ್ಬರೂ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಕರೆ ನೀಡಿದರು.

ಕರ್ನಾಟಕ ರಾಜ್ಯದಲ್ಲಿ ಕನ್ನಡ ಹೆಚ್ಚು ಮಾತನಾಡುವ ಜಿಲ್ಲೆ ಯಾವುದಾದರೂ ಇದ್ದರೆ ಅದು ಮಂಡ್ಯ ಜಿಲ್ಲೆ. ಜಿಲ್ಲೆಯ ಜನರು ಮ್ಯಾರಥಾನ್ ನಲ್ಲಿ ಚೆನ್ನಾಗಿ ಓಡಬೇಕು. ಆರೋಗ್ಯ ಚೆನ್ನಾಗಿಟ್ಟುಕೊಳ್ಳಬೇಕು. ಆರೋಗ್ಯ ಚೆನ್ನಾಗಿದ್ದರೆ ದೇಹ ಗಟ್ಟಿಯಾತ್ತದೆ. ಮಂಡ್ಯದವರು ಹೇಗೆ ಎಂಬುದನ್ನು ಇಡೀ ಇಂಡಿಯಾಗೆ ತೋರಿಸಬೇಕು.

ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಕನ್ನಡ ಚಿತ್ರಗಳನ್ನು ಹೆಚ್ಚು ಹೆಚ್ಚಾಗಿ ನೋಡಿ ಕನ್ನಡ ಸಿನಿಮಾಗಳನ್ನು ಪ್ರೋತ್ಸಾಹಿಸಿ ಇಷ್ಟೊಂದು ಜನ ಸೇರಿರುವುದನ್ನು ನೋಡಿ ತುಂಬಾ ಖುಷಿಯಾಯಿತ್ತು ಎಂದು ಮತ್ತೊರ್ವ ನಟ ನೀನಾಸಂ ಸತೀಶ್ ಕಿವಿಮಾತು ಹೇಳಿದರು.

ಕನ್ನಡ ಉಳಿವಿಗಾಗಿ ಹಮ್ಮಿಕೊಂಡಿರುವ ಮ್ಯಾರಥಾನ್‌ನಲ್ಲಿ ಇಷ್ಟು ಜನ ಭಾಗವಹಿಸಿರುವುದನ್ನು ನೋಡಿ ತುಂಬ ಖುಷಿಯಾಯಿತು. ಎಲ್ಲರೂ ಭಾಗವಹಿಸಿ ಎಜಾಯ್ ಮಾಡಿ ಎಂದು ಚಿತ್ರನಟಿ ಸಪ್ತಮಿಗೌಡ ಸಲಹೆ ನೀಡಿದರು.

ಮ್ಯಾರಥಾನ್ ಸ್ಪರ್ಧೆ ವಿಜೇತರು

ಪುರುಷರ ವಿಭಾಗ- ಶ್ರೀರಂಗಪಟ್ಟಣ ನ್ಯೂ ಆಕ್ಸ್ ಫರ್ಡ್ ಶಾಲೆ 9ನೇ ತರಗತಿ ವಿದ್ಯಾರ್ಥಿ ಎಚ್.ಡಿ.ದೊರೆ ಪ್ರಥಮ, ಪಾಂಡವಪುರ ಹೊಸಹಳ್ಳಿಯ ತೃತೀಯ ಬಿಎ ಓದುತ್ತಿರುವ ಸಾಗರ್ ದ್ವಿತೀಯ, , ಮಂಡ್ಯ ಎಕ್ಸ್ ಮುನ್ಸಿಪಲ್ ಕಾಲೇಜಿನ ದ್ವಿತೀಯ ಪಿಯುಸಿಯ ಭರತ್ - ತೃತೀಯ, ಮಂಡ್ಯ ಕ್ಯಾತುಂಗೆರೆ ಸ್ಯಾಂಥೋಮ್ ಪ್ರಥಮ ಪಿಯುಸಿ ವಿದ್ಯಾರ್ತಿ ಟಿ.ಪಿ.ಭುವನ್ - ನಾಲ್ಕನೆ ಹಾಗೂ ಮಂಡ್ಯ ಬಾಲಕ ಕಾಲೇಜಿನ ಪ್ರಥಮ ಬಿಎ ವಿದ್ಯಾರ್ಥಿ ಪಿ.ಮಹದೇವ - 5ನೇ ಬಹುಮಾನ ಪಡೆದುಕೊಂಡರು.

ಮಹಿಳಾ ವಿಭಾಗ- ಮಂಡ್ಯ ವಿಶ್ವವಿದ್ಯಾಲಯದ ಎಂ.ಪ್ರಿಯಾ - ಪ್ರಥಮ, ಮಂಡ್ಯ ಸೆಂಟ್ ಥಾಮಸ್ ನ ಶಾರ್ವರಿ - ದ್ವಿತೀಯ, ಪಾಂಡವಪುರ ಕ್ಯಾತನಹಳ್ಳಿಯ ಕೆ.ಅಕ್ಷತ - ತೃತೀಯ, ಮಂಡ್ಯದ ಎನ್.ಆರ್.ಶೋಭ ನಾಲ್ಕನೇ, ಪಾಂಡವಪುರ ಕ್ಯಾತನಹಳ್ಳಿ ಕೆ.ಪಿ.ವರಲಕ್ಷ್ಮಿ - 5ನೇ ಸ್ಥಾನ, ಮಂಡ್ಯ ಸುಭಾಷ್ ನಗರದ ಎಸ್.ಜಿ.ವಿಜಯ 6ನೇ ಹಾಗೂ ಮಂಡ್ಯದ ಎನ್.ಭಾವನ 7ನೇ ಸ್ಥಾನ ಪಡೆದುಕೊಂಡರು.