ಸಾರಾಂಶ
ಬ್ಯಾಡಗಿ: ಶಿಕ್ಷಣ ವ್ಯಾಪಾರೀಕರಣವಾಗುತ್ತಿದ್ದು, ವಿದ್ಯಾರ್ಥಿಗಳಿಗೆ ನೈತಿಕ ಬದುಕಿಗೆ ಸಹಕಾರ ನೀಡುತ್ತಿಲ್ಲ. ಹಣ ಕೊಟ್ಟು ಪಡೆದುಕೊಳ್ಳುವ ಶೈಕ್ಷಣಿಕ ವ್ಯವಸ್ಥೆಗೆ ಕಡಿವಾಣ ಹಾಕದಿದ್ದಲ್ಲಿ ಸರ್ಕಾರವೇ ವೃದ್ಧಾಶ್ರಮ ತೆರೆಯಬೇಕಾದ ಅನಿವಾರ್ಯತೆ ಎದುರಾಗಬಹುದು ಎಂದು ಹಿರಿಯ ಮಹಿಳಾ ಸಾಹಿತಿ ಸಂಕಮ್ಮ ಸಂಕಣ್ಣನವರ ಎಚ್ಚರಿಸಿದರು.
ಪಟ್ಟಣದ ಎಸ್‌ಎಸ್‌ಪಿಎನ್ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಶಾಲಾ ಸಂಸತ್ತು ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ವರ್ಣಮಾಲೆಯಿಂದ ಹಿಡಿದು ಉನ್ನತ ಶಿಕ್ಷಣದವರೆಗೂ ಲಕ್ಷಗಟ್ಟಲೇ ಶುಲ್ಕ ತುಂಬಿ ವಿದ್ಯೆ ಪಡೆದುಕೊಳ್ಳಬೇಕಿದೆ. ಹಣದ ಮಾನದಂಡದಿಂದಲೇ ಶೈಕ್ಷಣಿಕ ವ್ಯವಸ್ಥೆ ಮುನ್ನಡೆಯುತ್ತಿರುವಾಗ ನೈತಿಕ, ಸಾಮಾಜಿಕ ಹಾಗೂ ಬದುಕಿನ ಶಿಕ್ಷಣ ಕೊಡಿಸುವವರು ಯಾರು, ಇದು ಅರ್ಥವಾಗದಿರುವ ಪ್ರಶ್ನೆ ಎಂದರು.ಉಚಿತ ಶಿಕ್ಷಣ ಉಚಿತ ಸೇವೆ: ಸರ್ಕಾರ ಶಿಕ್ಷಣವನ್ನು ಉಚಿತವಾಗಿ ಕೊಡಬೇಕು. ಅಂತೆಯೇ ಉಚಿತವಾಗಿ ಜನರು ಸೇವೆ ಪಡೆದುಕೊಳ್ಳಬೇಕು. ಅಷ್ಟಕ್ಕೂ ಕೋಟಿಗಟ್ಟಲೇ ಹಣ ವ್ಯಯಿಸಿ ವೈದ್ಯಕೀಯ ಶಿಕ್ಷಣ ಪಡೆದ ವ್ಯಕ್ತಿ ಹಣಕ್ಕಾಗಿ ಸೇವೆ ಕೊಡುವಾಗ ಅವನ ನಿರ್ಧಾರಗಳನ್ನು ನಾವ್ಯಾರು ಪ್ರಶ್ನಿಸದಂತಾಗಿದೆ. ಇಂತಹ ಸಂದರ್ಭಗಳಲ್ಲಿ ಬಡವರಿಗೆ ವೈದ್ಯಕೀಯ ಉಚಿತ ಸೇವೆ ಎಲ್ಲಿಂದ ಸಿಗಬೇಕು? ಕೇವಲ ಇದೊಂದು ಉದಾಹರಣೆ, ಇಂತಹ ಅನಿವಾರ್ಯ ಸಂದರ್ಭಗಳಲ್ಲಿ ಉದ್ಯೋಗದಾತನ ಕುಟುಂಬಕ್ಕೂ ರಕ್ಷಣೆ ಹಾಗೂ ಭದ್ರತೆ ಇಲ್ಲದಂತಾಗಿದೆ ಎಂದರು.
ಪ್ರಾಯೋಗಿಕ ಬದುಕಿನ ಅನುಭವ ಮಕ್ಕಳಿಗೆ ಸಿಗುತ್ತಿಲ್ಲ. ನೀತಿ ಪಾಠವಿಲ್ಲದೇ ಪಾಲಕರಿಗೂ ಉದ್ಯೊಗದಾತ ಮಕ್ಕಳಿಂದ ಪೋಷಣೆ ಹಾಗೂ ರಕ್ಷಣೆ ಸಿಗುತ್ತಿಲ್ಲ. ಅಷ್ಟಕ್ಕೂಅವರೂ ದಾಂಪತ್ಯ ಜೀವನವೂ ವರ್ಷಕ್ಕೊಮ್ಮ ಮದುವೆ ವಾರ್ಷಿಕೋತ್ಸವಗಳನ್ನು ಆಚರಿಸಿಕೊಳ್ಳುತ್ತಾ ಅನಿಶ್ಚಿತತೆಯಿಂದ ದಿನಗಳನ್ನು ನೂಕುತ್ತಾ ಸಾಗಿಸುತ್ತಿದ್ದಾರೆ ಎಂದರು.ವೇದಿಕೆಯಲ್ಲಿ ಸಂಸ್ಥೆಯ ಛೇರಮನ್ ಚಂದ್ರಣ್ಣ ಶೆಟ್ಟರ, ಹರೀಶ ಮಾಳಪ್ಪನವರ, ಚಂದ್ರು ಛತ್ರದ, ಮುಖ್ಯಶಿಕ್ಷಕ ಸುಭಾಸ್ ಎಲಿ ಸೇರಿದಂತೆ ಇತರರಿದ್ದರು.