ಮನದೊಳಗಿನ ಬಾಷೆ ಕನ್ನಡವೇ ಆಗಿರಬೇಕು

| Published : Nov 14 2024, 12:51 AM IST

ಸಾರಾಂಶ

ಈ ನಾಡು ಮತ್ತು ನುಡಿ ಒಟ್ಟಿಗೆ ಸೇರಿ ನಾನು ಕನ್ನಡಿಗನಾದದ್ದು. ಇಲ್ಲಿ ನಾನು ಎಂದರೆ ನಡೆದಾಡುವ ಕನ್ನಡ ಮತ್ತು ಕರ್ನಾಟಕವೆಂದು ಅರ್ಥವಾಗುತ್ತದೆ.

ಕನ್ನಡಪ್ರಭ ವಾರ್ತೆ ಮೈಸೂರುನಮ್ಮ ಮನೆಯೊಳಗಿನ ಭಾಷೆ ಯಾವುದೇ ಇರಲಿ, ಮನದೊಳಗಿನ ಭಾಷೆ ಕನ್ನಡವೇ ಆಗಿರಲಿ ಎಂದು ರೆ.ಫಾದರ್ ಎಡ್ವರ್ಡ್ ವಿಲಿಯಂ ಸಾಲ್ಡಾನ ಹೇಳಿದರು.ರಮ್ಮನಹಳ್ಳಿಯ ಸಂತ ಜೋಸೆಫರ ಮಹಿಳಾ ಕಾಲೇಜಿನಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿದ ಅವರು, ನಾನು ಕನ್ನಡಿಗ ಎನ್ನುವಾಗ ನಾ ಎಂದರೆ ನಾಡು, ನು ಎಂದರೆ ನುಡಿ ಎಂದರ್ಥ. ಈ ನಾಡು ಮತ್ತು ನುಡಿ ಒಟ್ಟಿಗೆ ಸೇರಿ ನಾನು ಕನ್ನಡಿಗನಾದದ್ದು. ಇಲ್ಲಿ ನಾನು ಎಂದರೆ ನಡೆದಾಡುವ ಕನ್ನಡ ಮತ್ತು ಕರ್ನಾಟಕವೆಂದು ಅರ್ಥವಾಗುತ್ತದೆ. ಪ್ರಸಿದ್ಧ ವಿಜ್ಞಾನಿ ಆಲ್ಬರ್ಟ್ ಐನ್ಸ್ಟೈನ್ಅವರು ಇಲ್ಲಿಯವರೆಗೆ ನಾವು ಮಾಡಿದ ಅನ್ವೇಷಣೆಗಳಲ್ಲಿ ಅತಿ ದೊಡ್ಡ ಅನ್ವೇಷಣೆ ಎಂದರೆ ಭಾಷೆಯೇ ಹೊರತು ಮತ್ತೆ ಬೇರಾವುದೂ ಅಲ್ಲ ಎಂದು ಹೇಳಿರುವ ಮಾತು ಗಮನಿಸಿದರೆ, ಭಾಷೆಯ ಮಹತ್ವ ಈ ಪ್ರಪಂಚದಲ್ಲಿ ಎಷ್ಟೆಂದು ನಮಗೆಲ್ಲ ಅರಿವಾಗಬೇಕಿದೆ ಎಂದರು.ನಾವೇಕೆ ಇಲ್ಲಿನ ನೆಲದ ಭಾಷೆಯಾದ ಕನ್ನಡವನ್ನು ಮಾತನಾಡಬೇಕು ಎನ್ನುವ ಪ್ರಸ್ನೆ ನಮ್ಮೆಲ್ಲರನ್ನು ಕಾಡದೆ ಇರದು. ಈ ಪ್ರಶ್ನೆಗೆ ಉತ್ತರ ಬಹಳ ಸರಳ. ಮಣ್ಣಿನೊಟ್ಟಿಗೆ ಬೆರೆತ ಭಾಷೆಯನ್ನೇಕೆ ನಾವು ಮಾತನಾಡಬೇಕೆಂದರೆ ಉತ್ತರ ಬಹಳ ಸರಳವಾಗಿದೆ. ಈ ನೆಲದಲ್ಲಿ ಹುಟ್ಟಿರುವುದಕ್ಕಾಗಿ, ಈ ಮಣ್ಣಿನ ಅನ್ನ ತಿಂದು ಬೆಳೆಯುತ್ತಿರುವುದಕ್ಕಾಗಿ, ಎಂದರು.ಕಾರ್ಯಕ್ರಮ ಉದ್ಘಾಟಿಸಿದ ರೇಡಿಯೋ ಜಾಕಿ ಸುನಿಲ್ಮಾತನಾಡಿ, ಕನ್ನಡ ಭಾಷೆ ನಮ್ಮೆಲ್ಲರ ತಾಯಿ. ಆಕೆಯೇ ನಮ್ಮೆಲ್ಲರಿಗೂ ಉಸಿರನ್ನಿತ್ತು, ಕನ್ನಡಿಗರೆಂಬ ಹೆಸರನ್ನು ಕೊಟ್ಟವಳು. ಈ ತಾಯಿಯ ಋಣ ತೀರಿಸಿ, ಉಳಿಸಬೇಕಾದವರು ನಾವು, ಅದು ನಮ್ಮೆಲ್ಲರ ಹೊಣೆ. ಒಂದು ಭಾಷೆ ಅಳಿವಿನ ಅಂಚಿಗೆ ಸರಿದಿದ್ದೇ ಆದರೆ ಅದರೊಟ್ಟಿಗೆ ನಮ್ಮ ಸಂಸ್ಕೃತಿ, ಸ್ವಂತಿಕೆ, ಸಂಪ್ರದಾಯ, ಸದಾಭಿರುಚಿಗೆಲ್ಲವೂ ನಾಶವಾಗುತ್ತದೆ ಎಂದು ಎಚ್ಚರಿಸಿದರು.ಎಂಡಿಇಎಸ್ ನ ಗೌರವ ಖಜಾಂಚಿ ನವೀನ್ಕುಮಾರ್ ವಿಶೇಷ ಆಹ್ವಾನಿತರಾಗಿದ್ದರು. ಸಾತಗಳ್ಳಿ ಸಂತ ಜೋಸೆಫರ ಬಾಲಕಿಯರ ಪ. ಪೂ ಕಾಲೇಜು ಪ್ರಾಂಶುಪಾಲೆ ಕ್ರಿಶ್ಚಿಯಾನ ಪಿ ಫೆರೇರಾ, ಸಂತ ಜೋಸೆಫರ ಮಹಿಳಾ ಕಾಲೇಜು ಪ್ರಾಂಶುಪಾಲೆ ಪೃಥ್ವಿ ಎಸ್ ಶಿರಹಟ್ಟಿ, ಆರ್. ಜೆ ಸುನಿಲ್, ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಉಮ್ಮೆ ಐಮಾನ್, ಹಿಂದಿ ವಿಭಾಗದ ಮುಖ್ಯಸ್ಥೆ ಶೋಭಾ, ಬಿಸಿಎ ವಿಭಾಗದಿಂದ ಮಾನಸ, ಶ್ರೀಪ್ರಿಯ, ಸೃಷ್ಟಿ, ವಜೀಹಾ ಭಾನು, ಫರ್ಸೀನ್, ಕೀರ್ತನ ಬಿಕಾಂ ವಿಭಾಗದಿಂದ ಹರ್ಷಿತಾ ಮತ್ತು ಬಿಬಿಎ ವಿಭಾಗದಿಂದ ಫೈಜಾ ಉಮ್ಮೆ ಕುಲ್ಸಮ್ ಇದ್ದರು. ಕನ್ನಡ ವಿಭಾಗ ಮುಖ್ಯಸ್ಥ ಎ.ಎಸ್. ಮಹೇಶ್ ಸ್ವಾಗತಿಸಿದರು. ವಾಣಿಜ್ಯವಿಭಾಗದ ಮುಖ್ಯಸ್ಥೆ ಪುಷ್ಪಾ ವಂದಿಸಿದರು. ಸಹಾಯಕ ಪ್ರಾಧ್ಯಾಪಕಿ ಯಶಸ್ವಿನಿ ನಿರೂಪಿಸಿದರು. ವಿದ್ಯಾರ್ಥಿಗಳು ಕನ್ನಡ ಗೀತೆಗ ಳನ್ನು ಹಾಡಿ, ನೃತ್ಯ ಮಾಡಿ ನೆರೆದವರನ್ನು ರಂಜಿಸಿದರು.