ಚುನಾವಣಾ ಸಿಬ್ಬಂದಿಗೆ ತರಬೇತಿ ಕಾರ್ಯಾಗಾರ

| Published : Apr 02 2024, 01:04 AM IST

ಸಾರಾಂಶ

ಮತಗಟ್ಟೆಯಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು ಎಂತಹುದೇ ಸಂದರ್ಭವನ್ನು ಪರಿಹರಿಸುವ ಜವಾಬ್ದಾರಿ ಹೊಂದಿರುತ್ತಾರೆ. ತಾಂತ್ರಿಕವಾಗಿ ಮತ್ತು ಸಹಜವಾಗಿ ಉದ್ಘವವಾಗುವಂತಹ ಸಮಸ್ಯೆಗಳ ಆಳ ಮತ್ತು ಗಂಭೀರತೆಯನ್ನು ಅರಿತು ಕರ್ತವ್ಯ ನಿರ್ವಹಿಸಿರಿ. ನಿಮ್ಮ ಕರ್ತವ್ಯ ನಿರ್ವಹಣೆ ಮತದಾರರಲ್ಲಿ ನಂಬಿಕೆ ಮತ್ತು ಉತ್ಸಾಹವನ್ನು ತುಂಬುವಂತಿರಲಿ

ಕನ್ನಡಪ್ರಭ ವಾರ್ತೆ ಹುಣಸೂರು

ಲೋಕಸಭಾ ಚುನಾವಣೆ ಹಿನ್ನೆಲೆ ಚುನಾವಣಾ ಕರ್ತವ್ಯದಲ್ಲಿ ಪಾಲ್ಗೊಳ್ಳುವ ಮತಗಟ್ಟೆ ಅಧಿಕಾರಿ (ಪಿಆರ್‌ಒ) ಗಳು ಮತ್ತು ಸಹಾಯಕ ಮತಗಟ್ಟೆ ಅಧಿಕಾರಿ (ಎಪಿಆರ್‌ಒಇ) ಗಳಿಗೆ ಮೊದಲ ಹಂತದ ತರಬೇತಿ ನೀಡಲಾಯಿತು.

ಪಟ್ಟಣದ ಸಂತ ಜೋಸೆಫರ ವಿದ್ಯಾಸಂಸ್ಥೆ ಆವರಣದಲ್ಲಿ ಸೋಮವಾರ 19 ಕೊಠಡಿಗಳಲ್ಲಿ 249 ಪಿಆರ್‌.ಒಗಳಿಗೆ ಮತ್ತು 500 ಎಪಿಆರ್‌.ಒಗಳಿಗೆ ಮತದಾನದ ದಿನ ಅನುಸರಿಸಬೇಕಾದ ಕ್ರಮಗಳ ಕುರಿತು 34 ಮಾಸ್ಟರ್ ಟ್ರೈನರ್ಸ್‌ಗಳು ತರಬೇತಿ ನೀಡಿದರು.

ಬೆಳಗಿನ ಅವಧಿಯಲ್ಲಿ ಥಿಯರಿ ಮೂಲಕ ತರಬೇತಿ ನೀಡಿದರೆ ಮಧ್ಯಾಹ್ನದ ಅವಧಿಯಲ್ಲಿ ಇವಿಎಂ (ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್) ಯಂತ್ರಗಳ ಬಳಕೆ ಕುರಿತು ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ಒದಗಿಸಲಾಯಿತು.

ತರಬೇತಿ ಕಾರ್ಯಾಗಾರವನ್ನು ಸಹಾಯಕ ಚುನಾವಣಾಧಿಕಾರಿ ಮಹಮದ್ ಹ್ಯಾರಿಸ್ ಸುಮೇರ್ ಉದ್ಘಾಟಿಸಿ ಮಾತನಾಡಿ, ಮತಗಟ್ಟೆಯಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು ಎಂತಹುದೇ ಸಂದರ್ಭವನ್ನು ಪರಿಹರಿಸುವ ಜವಾಬ್ದಾರಿ ಹೊಂದಿರುತ್ತಾರೆ. ತಾಂತ್ರಿಕವಾಗಿ ಮತ್ತು ಸಹಜವಾಗಿ ಉದ್ಘವವಾಗುವಂತಹ ಸಮಸ್ಯೆಗಳ ಆಳ ಮತ್ತು ಗಂಭೀರತೆಯನ್ನು ಅರಿತು ಕರ್ತವ್ಯ ನಿರ್ವಹಿಸಿರಿ. ನಿಮ್ಮ ಕರ್ತವ್ಯ ನಿರ್ವಹಣೆ ಮತದಾರರಲ್ಲಿ ನಂಬಿಕೆ ಮತ್ತು ಉತ್ಸಾಹವನ್ನು ತುಂಬುವಂತಿರಲಿ ಎಂದರು.

ವಿಷಯಗ್ರಹಿಕೆ ಸರಿಯಾಗಿದ್ದಲ್ಲಿ ಸಮಸ್ಯೆ ಶೀಘ್ರ ಪರಿಹಾರವಾಗಲು ಸಾಧ್ಯ. ಇವಿಎಂ ಯಂತ್ರಗಳ ಕುರಿತು ಸಮಗ್ರ ಮಾಹಿತಿ ಪಡೆಯಿರಿ. ಅನುಮಾನಗಳಿದ್ದಲ್ಲಿ ಮಾಸ್ಟರ್ ಟ್ರೈನರ್ಸ್‌ಗಳಲ್ಲಿ ಪ್ರಶ್ನಿಸಿ ಪರಿಹರಿಸಿಕೊಳ್ಳಿರಿ. ಪಾರದರ್ಶಕತೆಯನ್ನು ಕಾಯ್ದುಕೊಂಡು ಪ್ರಜಾಪ್ರಭುತ್ವದ ಹಬ್ವವನ್ನು ಯಶಸ್ವಿಯಾಗಿಸಿರಿ ಎಂದು ಅವರು ಕೋರಿದರು.

ತಹಸೀಲ್ದಾರ್ ಎಂ. ನಯನಾ, ಉಪ ತಹಸೀಲ್ದಾರ್ ಅರುಣ್, ಮಾಸ್ಟರ್ ಟ್ರೈನರ್ ಡಾ. ಕಾವ್ಯ, ಚುನಾವಣಾ ಸಿಬ್ಬಂದಿ ಇದ್ದರು.