ಸೈಂಟ್ ಮಿಲಾಗ್ರಿಸ್ ಸೊಸೈಟಿಯಿಂದ ಅಂಧಮಕ್ಕಳಿಗೆ ಅಗತ್ಯ ವಸ್ತುಗಳ ವಿತರಣೆ

| Published : Aug 27 2025, 01:02 AM IST

ಸೈಂಟ್ ಮಿಲಾಗ್ರಿಸ್ ಸೊಸೈಟಿಯಿಂದ ಅಂಧಮಕ್ಕಳಿಗೆ ಅಗತ್ಯ ವಸ್ತುಗಳ ವಿತರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಅಂಧಮಕ್ಕಳು ತಮಗೆ ಹೊರಜಗತ್ತು ಕಾಣುತ್ತಿಲ್ಲ ಎನ್ನುವ ಬೇಸರಪಡುವ ಅಗತ್ಯವಿಲ್ಲ.

ಸಿದ್ದಾಪುರ: ವಾಣಿಜ್ಯ ಕ್ಷೇತ್ರದಲ್ಲಿ ತೊಡಗಿಕೊಂಡ ಸಂಸ್ಥೆಗಳು ಸಮಾಜದ ಏಳ್ಗೆಗೆ ಕೈಜೋಡಿಸಿದಾಗ ಹೆಚ್ಚಿನ ಬದಲಾವಣೆ ಸಾಧ್ಯ ಎಂದು ಸ್ಥಳೀಯ ಹೋಲಿ ರೋಜಾರಿಯೋ ಚರ್ಚಿನ ಧರ್ಮಗುರು ಫಾ.ಸಿರಿಲ್ ಫರ್ನಾಂಡಿಸ್ ಹೇಳಿದರು.ಅವರು ಕಾರವಾರದ ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋಆಪರೇಟಿವ್ ಸೊಸೈಟಿಯ ಸಿದ್ದಾಪುರ ಶಾಖೆಯ ವತಿಯಿಂದ ಪಟ್ಟಣದ ಹಾಳತಕಟ್ಟಾದ ಆಶಾಕಿರಣ ಟ್ರಸ್ಟನ ಮುರುಘರಾಜೇಂದ್ರ ಅಂಧರಶಾಲೆಯ ಅಂಧಮಕ್ಕಳಿಗೆ ಅಗತ್ಯವಸ್ತುಗಳ ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.

ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋಆಪರೇಟಿವ್ ಸೊಸೈಟಿ ಸಮಾಜಮುಖಿಯಾದ ಇಂಥ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿರುವು ಶಾಘ್ಲನೀಯ ಎಂದರು.

ಅಂಧಮಕ್ಕಳು ತಮಗೆ ಹೊರಜಗತ್ತು ಕಾಣುತ್ತಿಲ್ಲ ಎನ್ನುವ ಬೇಸರಪಡುವ ಅಗತ್ಯವಿಲ್ಲ. ನಿಮಗೆ ಒಳಗಣ್ಣು ಅತ್ಯಂತ ಶಕ್ತಿಶಾಲಿಯಾಗಿದೆ. ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಿ. ನಮ್ಮ ಸಂಪತ್ತನ್ನು ಹಂಚಿಕೊಂಡಾಗ, ಒಳ್ಳೆಯದನ್ನು ಮಾಡಿದಾಗ ದೇವರು ಆಶೀರ್ವದಿಸುತ್ತಾನೆ. ಇನ್ನು ಹೆಚ್ಚಿನ ಇಂಥ ಸಮಾಜಮುಖಿಯಾದ ಕಾರ್ಯ ಮಾಡಲು ಈ ಸಂಸ್ಥೆಗೆ ಶಕ್ತಿ ದೊರಕಲಿ ಎಂದರು.

ಮುಖ್ಯ ಅತಿಥಿ ಆಶಾಕಿರಣ ಟ್ರಸ್ಟನ ಉಪಾಧ್ಯಕ್ಷ ಸಿ.ಎಸ್.ಗೌಡರ್ ಮಾತನಾಡಿ, ಗ್ರಾಹಕ ಸ್ನೇಹಿಯಾದ ಸೈಂಟ್ ಮಿಲಾಗ್ರಿಸ್ ಬ್ಯಾಂಕ್ ಗ್ರಾಹಕರಿಗೆ ಉತ್ತಮ ಸೇವೆ ನೀಡುವುದರ ಜೊತೆಗೆ ಮಾನವೀಯ ಕಾಳಜಿಯನ್ನು ಹೊಂದಿದೆ. ಇಲ್ಲಿನ ಮಕ್ಕಳಿಗೆ ಅಗತ್ಯವಸ್ತುಗಳನ್ನು ನೀಡಿರುವುದು ಬ್ಯಾಂಕ್‌ನ ವಿಶಾಲ ಮನೋಭಾವಕ್ಕೆ ಸಾಕ್ಷಿ ಎಂದರು.

ಪತ್ರಕರ್ತ, ಸಾಹಿತಿ ಗಂಗಾಧರ ಕೊಳಗಿ ಮಾತನಾಡಿ, ಸಂಸ್ಥೆಯ ಲಾಭಾಂಶದ ಭಾಗವನ್ನು ಸರ್ಕಾರದ ನಿಯಮದ ಪ್ರಕಾರ ಕಾಟಾಚಾರಕ್ಕಾಗಿ ವ್ಯಯ ಮಾಡದೇ ಸಮಾಜದ ಅಸಹಾಯಕರಿಗೆ, ನೊಂದವರಿಗೆ ನೀಡುತ್ತಿರುವದು ಅತ್ಯಂತ ಮಾದರಿಯ ಕಾರ್ಯ ಎಂದರು.

ಬ್ಯಾಂಕಿನ ಶಿರಸಿ ವಿಭಾಗದ ಅಭಿವೃದ್ಧಿ ಅಧಿಕಾರಿ ವಿನೋದ ಮಡಿವಾಳ ಮಾತನಾಡಿ, ೨೦೦೩ರಲ್ಲಿ ಜಾರ್ಜ್‌ ಫರ್ನಾಂಡಿಸ್ ಸಂಸ್ಥಾಪಿಸಿದ ಬ್ಯಾಂಕ್ ರಾಜ್ಯದ ೯ ಜಿಲ್ಲೆಗಳಲ್ಲಿ ೧೧೧ ಶಾಖೆಗಳನ್ನು ಹೊಂದಿದೆ. ೩ ಲಕ್ಷಕ್ಕೂ ಹೆಚ್ಚು ಶೇರು ಸದಸ್ಯರು, ₹೧೪೦೦ ಕೋಟಿಗೂ ಅಧಿಕ ದುಡಿಯುವ ಬಂಡವಾಳ ಹೊಂದಿದ ನಮ್ಮ ಬ್ಯಾಂಕ್ ೨೦೧೬ರಿಂದ ಪ್ರತಿವರ್ಷ ದೇಶ ಸ್ವಾತಂತ್ರ್ಯ ಪಡೆದ ಸವಿನೆನಪಿಗೆ ಬ್ಯಾಂಕಿನ ಸಂಸ್ಥಾಪಕರು ಹಾಗೂ ಅಧ್ಯಕ್ಷರು ಆಗಿರುವ ಜಾರ್ಜ್‌ ಫರ್ನಾಂಡಿಸ್ ಅವರ ಆಶಯದಂತೆ ಸಮಾಜದಲ್ಲಿ ನೊಂದವರಿಗೆ ಅಗತ್ಯ ವಸ್ತುಗಳನ್ನು ನೀಡುವ ಅಭಿಯಾನವನ್ನು ನಿರಂತರವಾಗಿ ನಡೆಸುತ್ತ ಬಂದಿದೆ. ಎಲ್ಲ ನಿರ್ದೇಶಕರ, ಸದಸ್ಯರ, ಸಿಬ್ಬಂದಿ ಪ್ರಾಮಾಣಿಕ ಸಹಕಾರದಿಂದ ಸಂಸ್ಥೆಯ ಎಲ್ಲ ಶಾಖೆಗಳಿಂದ ೩೮೦೦ ಜನರನ್ನು ಈ ಅಭಿಯಾನ ತಲುಪುತ್ತಿದೆ ಎಂದರು.

ವೇದಿಕೆಯಲ್ಲಿ ಆಶಾಕಿರಣ ಟ್ರಸ್ಟ್‌ ಪದಾಧಿಕಾರಿ ವಾಸುದೇವ ಶೇಟ್, ಸ್ಥಳೀಯ ಶಾಖೆಯ ವ್ಯವಸ್ಥಾಪಕ ಲೋಕೇಶ ನಾಯ್ಕ, ಅಧಿಕಾರಿಗಳಾದ ಚಿನ್ಮಯ ಹೆಗಡೆ, ರಾಘವೇಂದ್ರ ಭಂಡಾರಿ, ಸಿಬ್ಬಂದಿ ಇದ್ದರು.

ಸಿಬ್ಬಂದಿ ಯಶೋದಾ ನಾಯ್ಕ ಸ್ವಾಗತಿಸಿದರು. ಪವಿತ್ರಾ ವಂದಿಸಿದರು. ಸೌಮ್ಯಾ ನಿರ್ವಹಿಸಿದರು.