ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಸಂತ ಸೇವಾಲಾಲ್ ಅವರು ಕೇವಲ ಒಂದು ಸಮುದಾಯಕ್ಕೆ ಸೀಮಿತವಾದವರಲ್ಲ, ಅವರು ಮಾನವಕುಲದ ಉದ್ದಾರಕ್ಕಾಗಿ ಶ್ರಮಿಸಿದ ಮಹಾನ್ ಚೇತನ. ಅವರ ತತ್ವಾದರ್ಶ ಇಂದಿನ ಮಕ್ಕಳಿಗೆ ತಿಳಿಸಿಕೊಡುವುದು ನಮ್ಮೆಲ್ಲರ ಕರ್ತವ್ಯ ಎಂದು ಉಪವಿಭಾಗಾಧಿಕಾರಿ ಕಾಂತರಾಜ್ ಅಭಿಪ್ರಾಯಪಟ್ಟರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಂತ ಸೇವಾಲಾಲ್ ಜಯಂತಿಯಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು ಲಂಬಾಣಿ ಸಮುದಾಯದಲ್ಲಿ ಮನೆಮಾಡಿದ್ದ ಮೂಢನಂಬಿಕೆಗಳನ್ನು ತೊಡೆದುಹಾಕಲು ಸೇವಾಲಾಲರು ಹಿಂದೆ ಶ್ರಮಿಸಿದರು. ಅವರು ಕೇವಲ ಸಮಾಜ ಸುಧಾರಕರಷ್ಟೇ ಅಲ್ಲದೆ, ಆಯುರ್ವೇದ ಮತ್ತು ಪ್ರಕೃತಿ ಚಿಕಿತ್ಸೆಯಲ್ಲಿ ಪರಿಣಿತರಾಗಿದ್ದರು. ಪ್ರಕೃತಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿರಬೇಕು ಮತ್ತು ಇತರ ಜೀವಿಗಳನ್ನು ಸಂರಕ್ಷಿಸಬೇಕು ಎಂಬ ಸಂದೇಶ ನೀಡಿದ್ದರು.ಸೇವಾಲಾಲ್ ಹಾಕಿಕೊಟ್ಟ ಅಹಿಂಸೆ, ಸತ್ಯ ಮತ್ತು ಶಿಕ್ಷಣ ಮಾರ್ಗ ಇಂದಿನ ಪೀಳಿಗೆಗೆ ಅತ್ಯಂತ ಅವಶ್ಯಕವಾಗಿದೆ ಎಂದು ತಿಳಿಸಿದರು.

ಜಾಗತೀಕರಣ ಮತ್ತು ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದ ನಡುವೆಯೂ ಲಂಬಾಣಿ ಸಮುದಾಯದವರು ತಮ್ಮ ವಿಶಿಷ್ಟ ಉಡುಗೆ-ತೊಡುಗೆ, ಹಬ್ಬಗಳು ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಇಂದಿಗೂ ಉಳಿಸಿಕೊಂಡು ಬಂದಿರುವುದು ಹೆಮ್ಮೆಯ ವಿಷಯ ಎಂದರು.

ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಆರ್.ಶಿವಣ್ಣ ಗಂಜಿಗಟ್ಟೆ, ಮಾತನಾಡಿ, ಸಂತ ಸೇವಾಲಾಲ್ ಅವರ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.


ರಾಜ್ಯ ಸರ್ಕಾರವು ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಿ, ಹಕ್ಕು ಪತ್ರ ವಿತರಿಸುವ ಮೂಲಕ ಲಂಬಾಣಿ ಸಮಾಜದ ದಶಕಗಳ ಕನಸನ್ನು ನನಸು ಮಾಡಿದೆ. ಫೆ.14ರಂದು ಹಾವೇರಿಯಲ್ಲಿ ನಡೆದ ಸಮಾರಂಭದಲ್ಲಿ ತಾಂಡಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಲಾಗಿದೆ. ಇದರಿಂದ ನಿವಾಸಿಗಳಿಗೆ ಸ್ವಂತ ಸರ್ವೆ ನಂಬರ್ ಹಾಗೂ ಹಕ್ಕುಪತ್ರಗಳು ದೊರೆಯಲಿವೆ. ಸರ್ಕಾರ ಸ್ಥಾಪಿಸಿರುವ ತಾಂಡಾ ಅಭಿವೃದ್ಧಿ ನಿಗಮದ ಸೌಲಭ್ಯಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸಲು ಮುಖಂಡರು ಶ್ರಮಿಸಬೇಕು ಎಂದು ಹೇಳಿದರು.

ಅಖಿಲ ಕರ್ನಾಟಕ ಬಂಜಾರ ಗುರುಪೀಠದ ಶ್ರೀ ನಂದಮಸಂದ್ ಸೇವಲಾಲ್ ಸ್ವಾಮೀಜಿ ಮಾತನಾಡಿ. ಸಂತ ಸೇವಾಲಾಲ್ ಮಹಾರಾಜರು ಬಂಜಾರ ಸಮುದಾಯಕ್ಕೆ ಜ್ಞಾನ, ಅರಿವು ಮತ್ತು ಆಶ್ರಯ ನೀಡಿದ ಮಹಾನ್ ಗುರುಗಳಾಗಿದ್ದಾರೆ. ಕಾಮ, ಕ್ರೋಧ, ಲೋಭ, ಮೋಹ, ಮದ ಮತ್ತು ಮತ್ಸರಗಳೆಂಬ ಅರಿಷಡ್ವರ್ಗಗಳನ್ನು ಗೆದ್ದವರೇ ನಿಜವಾದ ಸಂತ ಎಂದು ಹೇಳಿದರು.

ಕರ್ನಾಟಕ ಪ್ರದೇಶ ಬಂಜಾರ ಸೇವಾ ಸಂಘ ಜಿಲ್ಲಾಧ್ಯಕ್ಷ ಗಿರೀಶ್ ನಾಯ್ಕ್ ಮಾತನಾಡಿ, ಸಂತ ಸೇವಾಲಾಲ್ ಅವರು ಬುಡಕಟ್ಟು ಜನರಲ್ಲಿ ಧೈರ್ಯ ಸಾಹಸ, ಆತ್ಮಸ್ಥೈರ್ಯ ಮತ್ತು ಆತ್ಮಭಿಮಾನ ಮೂಡಿಸಿದರು. ಅವರ ಬೋಧನೆ ಮತ್ತು ಚಿಂತನೆಗಳು ಬಂಜಾರ ಜನಾಂಗದಲ್ಲಿ ಏಕತೆ ಉಂಟುಮಾಡಿವೆ. ಇಂದು ಬಂಜಾರರು ಸಾಂಸ್ಕೃತಿಕ ನೆಲೆಯಲ್ಲಿ ತಮ್ಮ ಅಸ್ಮಿತೆಯನ್ನು ಗುರುತಿಕೊಳ್ಳಲು ಈ ಮಹಾನುಭವರ ಸತ್ಕಾರ್ಯಗಳೇ ಕಾರಣ.

ಸಮುದಾಯದ ಜನರು ಮೂಢನಂಬಿಕೆಗಳನ್ನು ತೊರೆದು, ಅಜ್ಞಾನದಿಂದ ಹೊರಬಂದು ಶಿಕ್ಷಣಕ್ಕೆ ಒತ್ತು ನೀಡಬೇಕು. ಸೇವಾಲಾಲರ ವಿಚಾರಗಳು ಕೇವಲ ಇತಿಹಾಸಕ್ಕೆ ಸೀಮಿತವಾಗದೆ, ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಅವರ ಜಯಂತಿ ಅರ್ಥಪೂರ್ಣವಾಗುತ್ತದೆ ಎಂದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ತಹಶೀಲ್ದಾರ್ ಬಿ.ಎಂ.ಗೋವಿಂದರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ್, ಬಂಜಾರ ಸಮುದಾಯದ ಮುಖಂಡರರಾದ ನಾಗೇದ್ರನಾಯ್ಕ, ಪ್ರಕಾಶರಾಮನಾಯ್ಕ,ಅನಂತನಾಯ್ಕ್, ಯಂಕಸಾದು, ಮಾಧವ ನಾಯ್ಕ, ಗೀತ ಗೋವಿಂದರಾಜು, ರತ್ನಮ್ಮ, ಉಮೇಶ್, ಆನಂದ್ ಕುಮಾರ್, ಪಾಪಯ್ಯ, ಶ್ರೀನಿವಾಸ್ ನಾಯಕ, ಭೋವಿ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ ಇದ್ದರು.