ಸಂತ ಸತ್ಪುಷರು ಮನುಕುಲದ ಉದ್ಧಾರಕರು

| Published : Nov 19 2024, 12:47 AM IST

ಸಾರಾಂಶ

ಜೀವನ ಮನುಕುಲಕ್ಕೆ ಆದರ್ಶ, ದಾಸ ಸಂತ ಕನಕದಾಸ, ಕನಕ ಚಿಂತನೆಗಳು, ಜೀವನದಲ್ಲಿ ಅಳವಡಿಸಿಕೊಳ್ಳಿ

ಕನ್ನಡಪ್ರಭ ವಾರ್ತೆ ವಿಜಯಪುರ

ಇಡೀ ಜೀವನ ಮನುಕುಲಕ್ಕೆ ಆದರ್ಶ, ತತ್ವಾದರ್ಶಗಳನ್ನ ನೀಡಿದ ಸಂತ ಶ್ರೇಷ್ಠ ಕನಕದಾಸರ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಕರೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಹಮ್ಮಿಕೊಂಡ ಸಂತ ಶ್ರೇಷ್ಠ ಭಕ್ತ ಕನಕದಾಸರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಂತ, ಸತ್ಪುರುಷರು ಈ ಮನುಕುಲದ ಉದ್ದಾರಕರು ಹಾಗೂ ಸುಧಾರಕರು. ಸಂತರಿಗೆ ಗೌರವ ಸಲ್ಲಿಸುವ ಉದ್ದೇಶದೊಂದಿಗೆ ವಿವಿಧ ಸಂತರ ಜಯಂತಿಗಳನ್ನು ಆಚರಿಸಲಾಗುತ್ತದೆ. ಕನಕದಾಸ, ಬುದ್ಧ, ಬಸವ ಅಂಬೇಡ್ಕರ್ ಅವರ ಆದರ್ಶ ವಿಚಾರಗಳನ್ನು ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.

ಕನಕದಾಸರ ತತ್ವ ಚಿಂತನೆಗಳನ್ನ ಅವರ ಆದರ್ಶಮಯ ವಿಚಾರಗಳನ್ನು ಮಕ್ಕಳ ಮನೋಭೂಮಿಕೆಯಲ್ಲಿ ಮೂಡಿಸಲು ಪ್ರಾಥಮಿಕ ಪ್ರೌಢ ಮತ್ತು ಪದವಿ ಪೂರ್ವ ಹಂತದಲ್ಲಿ ಕನಕದಾಸರ ವಿಚಾರಧಾರೆಗಳನ್ನು ತಲುಪಿಸುವ ಅವರ ಬಗೆಗೆ ಅನೇಕ ಸ್ಪರ್ಧೆಗಳನ್ನು, ವಿಶೇಷ ಉಪನ್ಯಾಸಗಳನ್ನು ಬಾಲ ವಿಕಾಸ ಅಕಾಡೆಮಿ ಮುಂಬರುವ ದಿನಗಳಲ್ಲಿ ಯೋಜನೆ ಸಿದ್ಧಪಡಿಸಿಕೊಂಡಿದೆ ಎಂದು ತಿಳಿಸಿದರು.

ಸಿಇಒ ರಿಷಿ ಆನಂದ ಮಾತನಾಡಿ, ಕನಕದಾಸರು ಸಮಾಜದ ಒಳಿತಿಗಾಗಿ ನೀಡಿರುವ ಸಂದೇಶ ಪಾಲಿಸೋಣ, 16ನೇ ಶತಮಾನದಲ್ಲಿ ಭಕ್ತಿ ಪಂಥದಲ್ಲಿನ ದಾಸವರೇಣ್ಯರು ಸಮಾಜದ ಸಮಾನತೆಗಾಗಿ ತಮ್ಮ ಕೀರ್ತನೆಗಳಿಂದ ಜನಸಾಮಾನ್ಯರಾಡುವ ಭಾಷೆಯಲ್ಲಿಯೇ ತಿಳಿಹೇಳಿ ಸಮಾಜದ ಸುಧಾರಕರಾಗಿದ್ದಾರೆ ಎಂದರು.

ಉಪನ್ಯಾಸ ನೀಡಿದ ಪ್ರೊ.ಎ.ಎಚ್ ಕೊಳಮಲಿ, ನೊಂದವರ ಧ್ವನಿ, ಮೇರು ವ್ಯಕ್ತಿತ್ವಯುಳ್ಳವರು, ಕನಕದಾಸರು ಮಹಾನ ತ್ಯಾಗಿಯಾಗಿದ್ದರು. ದಾಸ ಸಾಹಿತ್ಯದ ಆಶ್ವಿನಿ ದೇವತೆಯಾಗಿದ್ದರು. ನಳಚರಿತೆ, ಮೋಹನ ತರಂಗಿಣಿ, ಹರಿಭಕ್ತಿಸಾರ ಕೀರ್ತನೆಗಳನ್ನು ರಚಿಸುವ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತ ಗೊಳಿಸಿದ್ದಾರೆ. ತಲ್ಲಣಿಸಿದರು ಕಂಡೆ ತಾಳು ಮನವೇ ಎಲ್ಲರನು ಸಲಹುವನ್ನು ಇದಕ್ಕೆ ಸಂಶಯವಿಲ್ಲ ಎಂಬ ವ್ಯಾಖ್ಯೆಗಳು ಉದಾಹರಣೆಯಾಗಿವೆ ಎಂದು ಹೇಳಿದರು.

ಸಿದ್ದರಾಮ ಬಿರಾದಾರ, ರಾಮಸ್ವಾಮಿ ಕೊಳಮಲಿ, ಎಸ್.ಸಿ.ಕುರ್ಲೆ ಕಾವ್ಯ ವಾಚನ ಮಾಡಿದರು. ಮಹೇಶ ಪೂಜಾರಿ ಹಾಗೂ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯ ನಿರ್ದೇಶಕ ಸಂತೋಷ ಭೋವಿ ಸ್ವಾಗತಿಸಿದರು.

ಪಾಲಿಕೆ ಸದಸ್ಯರಾದ ಅಶೋಕ ನ್ಯಾಮಗೊಂಡ, ರಾಹುಲ್ ಜಾಧವ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ, ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ, ಪಾಲಿಕೆ ಉಪ ಆಯುಕ್ತ ಮಹಾವೀರ ಬೋರಣ್ಣವರ, ಹೆಸ್ಕಾಂ ಅಧಿಕ್ಷಕ ಅಭಿಯಂತರ ಸಿದ್ದಪ್ಪ ಬಿಂಜಗೇರಿ, ಪಶುಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಅಶೋಕ ಘೋಣಸಗಿ, ರವಿ ಕಿತ್ತೂರ, ಸುಜಾತ ಕಳ್ಳಿಮನಿ, ವಿದ್ಯಾವತಿ ಅಂಕಲಗಿ, ಅಡಿವೆಪ್ಪ ಸಾಲಗಲ್, ಭಿಮರಾಯ ಜಿಗಜಿಣಗಿ, ದೇವೇಂದ್ರ ಮಿರೇಕರ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ವಿವಿಧ ಸಮುದಾಯದ ಮುಖಂಡರು, ಸಾರ್ವಜನಿಕರು ಶಾಲಾ ಮಕ್ಕಳು ಭಾಗವಹಿಸಿದ್ದರು.

ಮೆರವಣಿಗೆ: ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಕನಕದಾಸರ ಭಾವಚಿತ್ರದ ಮೆರವಣಿಗೆಗೆ ಜಿಪಂ ಸಿಇಒ ರಿಷಿ ಆನಂದ ಚಾಲನೆ ನೀಡಿದರು. ಭವ್ಯ ಮರೆವಣಿಗೆಯು ನಗರದಲ್ಲಿ ಸಂಚರಿಸಿ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಸಮಾವೇಶಗೊಂಡಿತು.

ಬಾಕ್ಸ್‌

ಮುಖಂಡರ ಆಕ್ರೋಶ

ಪ್ರತಿಬಾರಿಯೂ ನಡೆಯುವ ಮಹಾತ್ಮರ ಜಯಂತಿಗಳಂದು ಜನಪ್ರತಿನಿಧಿಗಳು ಇರುವುದಿಲ್ಲ. ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ, ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸೇರಿದಂತೆ ಯಾರೋಬ್ಬರೂ ಕಾರ್ಯಕ್ರಮಗಳಿಗೆ ಹಾಜರಾಗುವುದಿಲ್ಲ. ಇದನ್ನು ಖಂಡಿಸಿದ ವಿವಿಧ ಸಮಾಜದ ಮುಖಂಡರು ಸಭೆಯನ್ನು ಬಹಿಷ್ಕರಿಸಲು ಮುಂದಾದರು. ಈ ವೇಳೆ ಮಾತಿನ ಚಕಮಕಿಯೂ ನಡೆದು, ಕೊನೆಗೆ ಕೆಲವರು ಕಾರ್ಯಕ್ರಮದಿಂದ ಎದ್ದು ಹೊರನಡೆದ ಘಟನೆಯೂ ನಡೆಯಿತು.ಕನ್ನಡಪ್ರಭ ವಾರ್ತೆ ವಿಜಯಪುರಇಡೀ ಜೀವನ ಮನುಕುಲಕ್ಕೆ ಆದರ್ಶ, ತತ್ವಾದರ್ಶಗಳನ್ನ ನೀಡಿದ ಸಂತ ಶ್ರೇಷ್ಠ ಕನಕದಾಸರ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಕರೆ ನೀಡಿದರು.