ಸಕಲೇಶಪುರದ ಪುರಸಭೆ ಆವರಣದ ತ್ಯಾಜ್ಯಕ್ಕೆ ಬೆಂಕಿ, ಪರಿಸರ ವಿಷಮಯ

| Published : Apr 03 2024, 01:37 AM IST

ಸಕಲೇಶಪುರದ ಪುರಸಭೆ ಆವರಣದ ತ್ಯಾಜ್ಯಕ್ಕೆ ಬೆಂಕಿ, ಪರಿಸರ ವಿಷಮಯ
Share this Article
  • FB
  • TW
  • Linkdin
  • Email

ಸಾರಾಂಶ

ಸಕಲೇಶಪುರದ ಹಳೆಸಂತೆಮೈದಾನದಲ್ಲಿ ಹಾಕಿರುವ ಪುರಸಭೆ ತ್ಯಾಜ್ಯಕ್ಕೆ ಎರಡು ತಿಂಗಳ ಹಿಂದೆ ಕಿಡಿಗೇಡಿಗಳು ಬೆಂಕಿ ಹಾಕಿದ್ದು ಆ ದಿನವೇ ಪುರಸಭೆ ಆಡಳಿತ ಅಗ್ನಿಶಾಮಕದಳದ ಸಹಾಯದಿಂದ ಬೆಂಕಿ ನಂದಿಸಲು ಪ್ರಯತ್ನ ನಡೆಸಿತ್ತು. ಆದರೆ, ತ್ಯಾಜ್ಯದ ರಾಶಿಯ ಅಡಿಯಲ್ಲಿ ಹುದುಗಿರುವ ಬೆಂಕಿ ಮತ್ತೇರಡೆ ದಿನಗಳಲ್ಲಿ ಮತ್ತೆ ಪ್ರಜ್ವಲಿಸಲಾರಂಭಿಸಿದೆ.

ಕಿಡಿಗೇಡಿಗಳಿಂದ ಕೃತ್ಯ । ಅಗ್ನಿ ಶಮನಕ್ಕೆ ಆಡಳಿತ ಯತ್ನ । ಜ್ವಾಲೆಯ ಹೊಗೆಯಿಂದ ಜನ ಕಂಗಾಲು । ವಾತಾವರಣ ಕಲುಷಿತ

ಶ್ರೀವಿದ್ಯಾಸಕಲೇಶಪುರ

ಕನ್ನಡಪ್ರಭ ವಾರ್ತೆ ಸಕಲೇಶಪುರ

ಇಲ್ಲಿಯ ಪುರಸಭೆಯ ತ್ಯಾಜಕ್ಕೆ ಬಿದ್ದಿರುವ ಬೆಂಕಿ ಸುತ್ತಲಿನ ಸಸ್ಯಸಂಕುಲಕ್ಕೆ ಮಾರಕವಾಗಿ ಪರಿಣಮಿಸಿದ್ದರೆ ಸುತ್ತಲಿನ ಪರಿಸರ ವಿಷದಾಯಕವಾಗುತ್ತಿದೆ.

ಪಟ್ಟಣದ ಹಳೆಸಂತೆಮೈದಾನದಲ್ಲಿ ಹಾಕಿರುವ ಪುರಸಭೆ ತ್ಯಾಜ್ಯಕ್ಕೆ ಎರಡು ತಿಂಗಳ ಹಿಂದೆ ಕಿಡಿಗೇಡಿಗಳು ಬೆಂಕಿ ಹಾಕಿದ್ದು ಆ ದಿನವೇ ಪುರಸಭೆ ಆಡಳಿತ ಅಗ್ನಿಶಾಮಕದಳದ ಸಹಾಯದಿಂದ ಬೆಂಕಿ ನಂದಿಸಲು ಪ್ರಯತ್ನ ನಡೆಸಿತ್ತು. ಆದರೆ, ತ್ಯಾಜ್ಯದ ರಾಶಿಯ ಅಡಿಯಲ್ಲಿ ಹುದುಗಿರುವ ಬೆಂಕಿ ಮತ್ತೇರಡೆ ದಿನಗಳಲ್ಲಿ ಮತ್ತೆ ಪ್ರಜ್ವಲಿಸಲಾರಂಭಿಸಿದೆ. ಇದಾದ ಕೆಲವು ದಿನಗಳ ಕಾಲ ಬೆಂಕಿ ಅವ್ಯಾಹತವಾಗಿ ಉರಿದಿದ್ದು ನಂದಿಸಲು ಯಾವ ಪ್ರಯತ್ನವೂ ನಡೆದಿಲ್ಲ. ರಾಶಿಯ ಆಳದಲ್ಲಿ ಹುದುಗಿದ ಬೆಂಕಿ ಕೇವಲ ಒಂದೇ ದಿನಲ್ಲಿ ಕಾಣಿಸಿಕೊಂಡಿದ್ದು ಬೆಂಕಿ ಹಾಗೂ ಹೊಗೆಯಿಂದ ಇಡೀ ಪರಿಸರ ಕಲುಷಿತಗೊಂಡಿದೆ.

ಸಂತೆ ನಡೆಸುವ ಉದ್ದೇಶದಿಂದಲೇ ೧೯೬೦ರ ದಶಕದಲ್ಲಿ ಸುಮಾರು ಎರಡು ಎಕರೆ ಪ್ರದೇಶದಲ್ಲಿ ಐವತ್ತಕ್ಕೂ ಅಧಿಕ ಮೇಪ್ಲವರ್ ಜಾತಿಯ ಮರಗಳನ್ನು ಬೆಳಸಲಾಗಿತ್ತು. ಬೃಹತ್ತಾಗಿ ಬೆಳದಿರುವ ಹಲವು ಮರಗಳನ್ನು ವಿವಿಧ ಕಾರಣಕ್ಕಾಗಿ ತುಂಡರಿಸಲಾಗಿದೆ. ಸದ್ಯ ಈ ಪ್ರದೇಶದಲ್ಲಿ ಇಂದಿಗೂ ೨೦ಕ್ಕೂ ಅಧಿಕ ಮರಗಳಿದ್ದು ಎಲ್ಲ ಮರಗಳು ಸೊಂಪಾಗಿ ಬೆಳದಿರುವುದರಿಂದ ಸುತ್ತಲಿನ ನಿವಾಸಿಗಳಿಗೆ ಬೇಸಿಗೆಯಲ್ಲೂ ಧಗೆಯ ಅನುಭವ ತಟ್ಟದಂತೆ ಮಾಡಿವೆ. ಆದರೆ ಈಗ ಮರಗಳಿಗೂ ಬೆಂಕಿ ಬಿಸಿ ತಾಗುತ್ತಿದೆ.

ಜನರಲ್ಲಿ ಅನಾರೋಗ್ಯ:

ತ್ಯಾಜದಿಂದ ಹೊರಬರುತ್ತಿರುವ ನಿರಂತರ ಹೊಗೆ ಸದ್ಯ ಸ್ಥಳೀಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದ್ದು ಪ್ಲಾಸ್ಟಿಕ್ ಸಹಿತ ಹಲವು ರಾಸಾಯನಿಕ ವಸ್ತುಗಳು ಈ ತ್ಯಾಜದಲ್ಲಿ ಸೇರಿರುವುದರಿಂದ ಇದರಿಂದ ಉತ್ಪತ್ತಿಯಾಗುವ ಹೊಗೆಯಿಂದ ಸುತ್ತಲಿನ ಹಲವಾರು ಸಣ್ಣ ಕೈಗಾರಿಕೆಗಳ ಕಾರ್ಮಿಕರು, ನಿವಾಸಿಗಳು ಹಾಗೂ ಸಮೀಪದಲ್ಲೆ ಇರುವ ಸುಭಾಷ್ ಮೈದಾನಕ್ಕೆ ಬರುವ ಕ್ರೀಡಾಪಟುಗಳಲ್ಲಿ ಕಫ, ಕೆಮ್ಮು, ದಮ್ಮು ಹಾಗೂ ಗಂಟಲು ರೋಗ ಕಾಣಿಸಿಕೊಂಡಿದೆ.

ಕಿಡಿಗೇಡಿಗಳ ಕೃತ್ಯ:

ತ್ಯಾಜಕ್ಕೆ ಬೆಂಕಿ ಬೀಳಲು ಕಾಣದ ಕೈಗಳ ಕೈವಾಡವಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದು ಪಟ್ಟಣದಲ್ಲಿ ತ್ಯಾಜ್ಯ ವಿಲೇವಾರಿಗೆ ಸ್ಥಳದ ಸಮಸ್ಯೆ ಬಿಗಾಡಯಿಸಿದ ಹಲವು ವರ್ಷಗಳಿಂದ ಪಟ್ಟಣದಲ್ಲಿರುವ ಖಾಲಿ ನಿವೇಶನಗಳಲ್ಲಿ ತ್ಯಾಜ್ಯ ಹಾಕಲಾಗುತ್ತಿದೆ. ತ್ಯಾಜ್ಯ ವಿಲೇವಾರಿ ಮಾಡಲೇಬೇಕು ಎಂಬ ಅನಿವಾರ್ಯ ಪರಿಸ್ಥಿತಿ ಸೃಷ್ಟಿಮಾಡುವ ಉದ್ದೇಶದಿಂದ ತ್ಯಾಜ್ಯಕ್ಕೆ ಕಿಡಿಗೇಡಿಗಳು ಬೆಂಕಿ ಹಾಕಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.

ಹಳೆಸಂತೆ ಮೈದಾನ ಸಂಪೂರ್ಣ ಕಸಮಯ:

ಸ್ವಾತಂತ್ರ್ಯಪೂರ್ವದಿಂದ ತಾಲೂಕು ಕ್ರೀಡಾಂಗಣಕ್ಕೆ ಹೊಂದಿಕೊಂಡಿರುವ ಹಳೆಸಂತೆ ಮೈದಾನದಲ್ಲಿ 2002 ರ ವರಗೆ ಪ್ರತಿವಾರ ಸಂತೆ ನಡೆಸಿಕೊಂಡು ಬರಲಾಗುತಿತ್ತು. ವ್ಯಾಪಾರಿಗಳ ಅನುಕೂಲಕ್ಕಾಗಿ ಉತ್ತಮ ದರ್ಜೆಯ ಸಂತೆಕಟ್ಟೆಗಳನ್ನು ನಿರ್ಮಾಣ ಮಾಡಲಾಗಿತ್ತು. ಆದರೆ, ಸಂತೆ ಸ್ಥಳಾಂತರಗೊಂಡ ನಂತರ ಸಂತೆಕಟ್ಟೆಗಳನ್ನು ಬಳಸಿಕೊಂಡು ಶೂನ್ಯ ಘನ ತ್ಯಾಜ್ಯ ಘಟಕ ನಿರ್ಮಾಣ ಮಾಡಲಾಗಿತ್ತು. ಆದರೆ, ಘಟಕ ನಿರ್ಮಾಣಗೊಂಡ ಒಂದೇ ವರ್ಷಕ್ಕೆ ಪುರಸಭೆ, ಸಿಬ್ಬಂದಿ ಕೊರತೆ ಕಾರಣ ನೀಡಿ ಯೋಜನೆಯನ್ನು ಕೈಬಿಡಲಾಯಿತು. ಪರಿಣಾಮ ಅಂದಿನಿಂದ ಘಟಕದಲ್ಲಿ ಸಂಗ್ರಹಿಸಲಾಗಿರುವ ತ್ಯಾಜ್ಯವನ್ನು ವಿಲೇವಾರಿ ಮಾಡಲಾಗದೆ ಘಟಕದಲ್ಲಿ ಸಂಗ್ರಹವಾಗಿದೆ.

ಕಸಕ್ಕೆ ಬಿದ್ದಿರುವ ಬೆಂಕಿ ಸಾಕಷ್ಟು ಮರಗಳ ಹನನಕ್ಕೆ ಕಾರಣವಾಗಲಿದೆ, ಅಲ್ಲದೆ ಶೂನ್ಯ ಘನತ್ಯಾಜ್ಯ ಘಟಕದಲ್ಲಿ ಸಂಗ್ರಹವಾಗಿರುವ ತ್ಯಾಜ್ಯವನ್ನು ಪುರಸಭೆ ಆಡಳಿತ ತೆರವುಗೊಳಿಸಬೇಕಿದೆ.

ಪ್ರವೀಣ್. ಸ್ಥಳೀಯ ವ್ಯಾಪಾರಸ್ಥರು.

ಬೆಂಕಿ ನಂದಿಸಲು ಎರಡು ಬಾರಿ ಪ್ರಯತ್ನ ನಡೆಸಲಾಗಿದೆ. ಅಪಾರ ರಾಶಿಯಲ್ಲಿರುವ ತ್ಯಾಜ್ಯದಿಂದ ಸಂಪೂರ್ಣ ಬೆಂಕಿ ನಂದಿಸುವುದು ಅಸಾಧ್ಯವಾಗಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಕ್ರಮವಹಿಸಲಾಗುವುದು.

ರಮೇಶ್. ಪುರಸಭೆ ಮುಖ್ಯಾಧಿಕಾರಿ.

ತ್ಯಾಜ್ಯದ ರಾಶಿಗೆ ಬಿದ್ದಿರುವ ಬೆಂಕಿ.