ಸೋನೆ ಮಳೆಯಿಂದ ಬೇಸತ್ತ ಮಲೆನಾಡಿಗರು

| Published : Sep 08 2025, 01:00 AM IST

ಸಾರಾಂಶ

ಪ್ರಸಕ್ತ ವರ್ಷದ ಪಿರಿಪಿರಿ ಮಳೆ ಮಲೆನಾಡಿಗರ ಪಾಲಿಗೆ ಕಂಠಕವಾಗಿ ಪರಿಣಮಿಸಿದೆ. ಪ್ರತಿದಿನ ಒಂದರಿಂದ ನಾಲ್ಕು ಅಂಗುಲ ಮಳೆಯಾಗುತ್ತಿರುವುದರಿಂದ ನೀರು ಹರಿದಿದ್ದಕ್ಕಿಂತ ಭೂಮಿ ಕುಡಿದಿದ್ದೆ ಹೆಚ್ಚಾಗಿರುವುದರಿಂದ ಎಲ್ಲೆಲ್ಲೂ ಅಂತರ್ಜಲ ಉಕ್ಕಿ ಹರಿಯುತ್ತಿದೆ. ಪರಿಣಾಮ ಶೀತಾಂಶ ಅಧಿಕವಾಗಿದ್ದು ತಾಲೂಕಿನ ಎಲ್ಲ ಬೆಳೆಗಳು ಶೀತದ ಸಮಸ್ಯೆ ಎದುರಿಸುತ್ತಿದ್ದು, ಅದರಲ್ಲೂ ಶುಂಠಿ ಹಾಗೂ ಕಾಳು ಮೆಣಸಿನ ಬೆಳೆ ತಾಲೂಕಿನ ಹಲವೆಡೆ ನಾಮಾವಶೇಷವಾಗಿದ್ದು ಸಾಮೂಹಿಕ ಬೆಳೆ ನಾಶದಿಂದ ಬೆಳೆಗಾರರು ಕೋಟ್ಯಂತರ ರು. ನಷ್ಟ ಹೊಂದುವಂತಾಗಿದೆ.

ಕನ್ನಡಪ್ರಭ ವಾರ್ತೆ ಸಕಲೇಶಪುರ

ಪ್ರಸಕ್ತ ವರ್ಷದ ಪಿರಿಪಿರಿ ಮಳೆ ಮಲೆನಾಡಿಗರ ಪಾಲಿಗೆ ಕಂಠಕವಾಗಿ ಪರಿಣಮಿಸಿದೆ. ಸಾಮಾನ್ಯವಾಗಿ ಮೂರು ತಿಂಗಳು ಮಲೆನಾಡಿನಲ್ಲಿ ಮಳೆಯಾಗುವುದು ವಾಡಿಕೆ. ಆದರೆ, ಈ ಬಾರಿ ಮೇ ತಿಂಗಳ ಮಧ್ಯಭಾಗದಿಂದ ಆರಂಭವಾಗಿರುವ ಮುಂಗಾರು ಮಳೆ ಐದು ತಿಂಗಳು ಕಳೆಯುತ್ತ ಬಂದರೂ ನಿಲ್ಲದ ಪಿರಿಪಿರಿ ಮಳೆಯಿಂದ ಜನರು ಮಳೆಗಾಲದ ಬಗ್ಗೆ ಜನರು ಜಿಗುಪ್ಸೆಗೊಳ್ಳುವಂತೆ ಮಾಡಿದೆ.ದೊಡ್ಡ ಮಳೆ ಇಲ್ಲ:

ತಾಲೂಕಿನಲ್ಲಿ ಒಂದೇ ದಿನ ೨೦೦ರಿಂದ ೪೦೦ ಮೀ. ಮೀಟರ್ ಮಳೆ ಸುರಿದಿರುವ ನಿದರ್ಶನಗಳಿದ್ದು, ಭಾರಿ ಮಳೆಯನ್ನು ಕಂಡಿರುವ ಜನರು ಈ ಬಾರಿ ಅಂತಹ ಮಳೆಯಾಗದಿರುವುದು ವಿಶೇಷವಾಗಿದೆ. ತಿಂಗಳಾನುಗಟ್ಟಲೆ ಸುರಿಯುತ್ತಿರುವ ಪಿರಿಪಿರಿ ಮಳೆಯಿಂದ ಬೇಸತ್ತಿದ್ದಾರೆ. ಈ ಬಾರಿ ಐದು ತಿಂಗಳ ಅವಧಿಯಲ್ಲಿ ಒಂದೆರಡು ದಿನಗಳನ್ನು ಹೊರತುಪಡಿಸಿ ಭಾರಿ ಮಳೆಯಾದ ನಿದರ್ಶನಗಳಿಲ್ಲ. ಪ್ರತಿದಿನ ಒಂದರಿಂದ ನಾಲ್ಕು ಅಂಗುಲ ಮಳೆಯಾಗುತ್ತಿರುವುದರಿಂದ ನೀರು ಹರಿದಿದ್ದಕ್ಕಿಂತ ಭೂಮಿ ಕುಡಿದಿದ್ದೆ ಹೆಚ್ಚಾಗಿರುವುದರಿಂದ ಎಲ್ಲೆಲ್ಲೂ ಅಂತರ್ಜಲ ಉಕ್ಕಿ ಹರಿಯುತ್ತಿದೆ. ಪರಿಣಾಮ ಶೀತಾಂಶ ಅಧಿಕವಾಗಿದ್ದು ತಾಲೂಕಿನ ಎಲ್ಲ ಬೆಳೆಗಳು ಶೀತದ ಸಮಸ್ಯೆ ಎದುರಿಸುತ್ತಿದ್ದು, ಅದರಲ್ಲೂ ಶುಂಠಿ ಹಾಗೂ ಕಾಳು ಮೆಣಸಿನ ಬೆಳೆ ತಾಲೂಕಿನ ಹಲವೆಡೆ ನಾಮಾವಶೇಷವಾಗಿದ್ದು ಸಾಮೂಹಿಕ ಬೆಳೆ ನಾಶದಿಂದ ಬೆಳೆಗಾರರು ಕೋಟ್ಯಂತರ ರು. ನಷ್ಟ ಹೊಂದುವಂತಾಗಿದೆ. ಮಳೆ ಕೊರತೆ:

ಕಳೆದ ಐದು ತಿಂಗಳ ಮಳೆ ಬಂದರು ತಾಲೂಕಿನ ಬೆಳಗೋಡು ಹೋಬಳಿಯಲ್ಲಿ ಶೇ. ೯೦ರಷ್ಟು ಮಳೆಕೊರತೆ ಎದುರಾಗಿರುವುದು ವಿಶೇಷ. ಒಟ್ಟಾರೆ ತಾಲೂಕಿನಲ್ಲಿ ಆಗಸ್ಟ್ ಅಂತ್ಯಕ್ಕೆ ೨೨೪೬ ಮೀ.ಮೀ. ವಾಡಿಕೆ ಮಳೆಯಾಗಬೇಕಿತ್ತು. ಆದರೆ ೩೪೫೪ ಮೀ.ಮೀಟರ್ ಮಳೆಯಾಗಿದ್ದು ಶೇ. ೧೫೪ರಷ್ಟು ಅಧಿಕ ಮಳೆಯಾಗಿದೆ. ಕಸಬಾ ಹೋಬಳಿಯಲ್ಲಿ ಇದುವರಗೆ ೨೨೪೬ ಮೀ.ಮೀ. ವಾಡಿಕೆ ಮಳೆಯ ಬದಲಿಗೆ ೨೭೦೩ ಮಿ. ಮೀ. ಅಧಿಕ ಮಳೆಯಾಗಿದ್ದು ಶೇ. ೧೨೦ರಷ್ಟು ಅಧಿಕ ಮಳೆಯಾಗಿದೆ. ಬೆಳಗೋಡು ಹೋಬಳಿಯಲ್ಲಿ ಮಳೆಕೊರತೆ ಕಾಣಿಸಿಕೊಂಡಿದ್ದು ಆಗಸ್ಟ್ ಅಂತ್ಯಕ್ಕೆ ೧೭೮೯ ಮಿ.ಮೀ. ಮಳೆಯಾಗಬೇಕಿತ್ತು. ಆದರೆ, ಇಲ್ಲಿ ೧೬೪೩ ಮಿ.ಮೀಟರ್ ಮಳೆಯಾಗಿದ್ದು ಶೇ. ೯೦ರಷ್ಟು ಮಳೆಕೊರತೆ ಕಾಣಿಸಿಕೊಂಡಿದೆ. ಹಾನುಬಾಳ್ ಹೋಬಳಿಯಲ್ಲಿ ೨೩೭೭ ಮಿ.ಮೀಟರ್ ವಾಡಿಕೆ ಮಳೆಯಾಗ ಬೇಕಿತ್ತು. ಆದರೆ, ೩೪೩೪ ಮಿ.ಮೀಟರ್ ಮಳೆಯಾಗಿದ್ದು ಶೇ. ೧೪೪ರಷ್ಟು ಅಧಿಕ ಮಳೆಯಾಗಿದೆ. ಹೆತ್ತೂರು ಹೋಬಳಿಯಲ್ಲಿ ೨೨೧೮ ಮಿ.ಮೀಟರ್ ವಾಡಿಕೆ ಮಳೆಯಾಗಬೇಕಿತ್ತು. ಆದರೆ, ೫೧೩೨ ಮಿ.ಮೀ ಮಳೆ ಸುರಿದಿದ್ದು ಶೇ. ೨೩೧ರಷ್ಟು ಅಧಿಕ ಮಳೆಯಾಗಿದೆ. ಯಸಳೂರು ಹೋಬಳಿಯಲ್ಲಿ ೧೭೮೩ ಮಿ. ಮೀಟರ್ ವಾಡಿಕೆ ಮಳೆಯಾಗಬೇಕಿದ್ದರೆ ಇಲ್ಲಿ ೨೮೨೬ ಮಿ. ಮೀಟರ್ ಮಳೆ ಸುರಿದಿದ್ದು ಶೇ. ೧೫೧ರಷ್ಟು ಅಧಿಕ ಮಳೆಯಾಗಿದೆ.ಉಕ್ಕದ ಹೇಮಾವತಿ:

ಕಳೆದ ಐದು ತಿಂಗಳು ನಿರಂತರವಾಗಿ ಮಳೆ ಸುರಿದರೂ ತಾಲೂಕಿನ ವ್ಯಾಪ್ತಿಯಲ್ಲಿ ಹರಿಯುವ ಹೇಮಾವತಿ ನದಿ ಒಮ್ಮೆಯು ಒಡಲು ತುಂಬಿ ಹರಿಯಲೇ ಇಲ್ಲ. ಈ ಬಾರಿ ಒಮ್ಮೆ ಮಾತ್ರ ನದಿಯಲ್ಲಿ ೮ ಅಡಿಗಳಷ್ಟು ನೀರು ಹರಿದಿದ್ದನ್ನು ಹೊರತುಪಡಿಸಿದರೆ ಎಂದೂ ಕೂಡ ಅಪಾಯದ ಮಟ್ಟ ಮೀರದಿರುವುದು ಈ ಮಳೆಗಾಲದ ವಿಶೇಷವಾಗಿದೆ. ಹೆಚ್ಚು ಸುರಿಯದ ಹಾಗೂ ಬಿಡುವು ನೀಡದ ಪಿರಿಪಿರಿ ಮಳೆಯಿಂದಾಗಿ ಜನರು ಬೇಸತ್ತಿದ್ದಾರೆ.ಬೆಳೆ ಉಳಿಸಿಕೊಳ್ಳಲು ಸಾಹಸ:

ಗೌರಿ-ಗಣೇಶ ಹಬ್ಬದ ಹಿಂದಿನ ಒಂದೆರಡು ದಿನಗಳ ಕಾಲ ಸೂರ್ಯನ ಮುಖದರ್ಶನವಾಗಿದ್ದನ್ನು ಹೊರತುಪಡಿಸಿದರೆ ಕಳೆದ ಐದು ತಿಂಗಳ ಅವಧಿಯಲ್ಲಿ ಮಳೆಯಾಗದ ದಿನಗಳೆ ಇಲ್ಲ. ಹೀಗೆ ನಿರಂತರವಾಗಿ ಸುರಿಯುತ್ತಿರುವ ಮಳೆ ಹೆತ್ತೂರು ಹೋಬಳಿಯಲ್ಲಿ ವಾಡಿಕೆಗಿಂತ ಎರಡು ಪಟ್ಟು ಅಧಿಕ ಸುರಿದಿದ್ದರಿಂದ ಈ ಹೋಬಳಿಯಲ್ಲಿ ಅಧಿಕ ಶೀತದಿಂದ ಮೆಣಸಿನ ಬೆಳೆ ಸಾಮೂಹಿಕವಾಗಿ ನಾಶವಾಗಿದೆ. ಅಳಿದುಳಿದ ಬಳ್ಳಿಗಳನ್ನು ಉಳಿಸಿಕೊಳ್ಳಲು ಔಷಧಿಗಳ ಸಿಂಪಡಣೆ ಮಾಡುವ ತವಕದಲ್ಲಿ ಬೆಳೆಗಾರರಿದ್ದರು ಮಳೆ ಇದಕ್ಕೆ ಅವಕಾಶವನ್ನೆ ನೀಡದ ಪರಿಣಾಮ ಜನರು ಮಳೆಗೆ ಹಿಡಿಶಾಪ ಹಾಕುತ್ತಿದ್ದಾರೆ. ಸಣ್ಣ ಮಳೆ ಕಾಫಿಗೂ ಮಾರಕವಾಗಿದ್ದು ಅಧಿಕ ಶೀತಾಂಶದಿಂದ ಕೂಡಿರುವ ಮಳೆ ಕಾಫಿಯಲ್ಲಿ ಕೊಳೆರೋಗ ಉತ್ಪತ್ತಿಗೆ ಕಾರಣವಾಗಿದ್ದು ಸಾಕಷ್ಟು ಪ್ರಮಾಣದಲ್ಲಿ ಫಸಲು ನೆಲಸೇರುತ್ತಿದೆ. ಅಡಿಕೆ ಫಸಲು ಸಹ ಅಧಿಕ ಪ್ರಮಾಣದಲ್ಲಿ ಧರೆ ಸೇರಿದ್ದು ಫಸಲು ಉಳಿಸಿಕೊಳ್ಳಲು ಔಷಧಿ ಸಿಂಪಡಣೆ ಅಗತ್ಯವಿದೆ. ಆದರೆ, ಇದಕ್ಕೆ ಮಳೆ ಅವಕಾಶವನ್ನೆ ನೀಡುತ್ತಿಲ್ಲ. ಕಾಫಿಗೆ ಗೊಬ್ಬರ ನೀಡುವ ಸಮಯವಾಗಿದ್ದು ಮಳೆ ಬಿಡುವಿಗಾಗಿ ಜನರು ಕಾದು ಕುಳಿತಿದ್ದಾರೆ. ತೋಟಗಳು ನಿರ್ಜನ:

ಸಣ್ಣ ಮಳೆಯಿಂದಾಗಿ ಜನರು ಬೇಸತ್ತಿದ್ದು ಸಾಕಷ್ಟು ಕಾಫಿತೋಟಗಳಲ್ಲಿ ಕೆಲಸಕ್ಕೆ ರಜೆ ನೀಡಲಾಗಿದೆ. ಅಧಿಕ ಚಳಿ ಹಾಗೂ ಮಳೆಯಿಂದಾಗಿ ಜನರು ಬೇಸತ್ತಿದ್ದು ಮನೆಯಿಂದ ಜನರು ಹೊರಬಾರದ ಕಾರಣ ಗ್ರಾಮ ಹಾಗೂ ಪಟ್ಟಣದ ರಸ್ತೆಗಳೆಲ್ಲ ಜನರಿಲ್ಲದೆ ಬಣಗುಡುತ್ತಿದ್ದರೆ, ವರ್ತಕರು ವ್ಯಾಪಾರವಿಲ್ಲದೆ ಕಂಗೆಟ್ಟಿದ್ದಾರೆ. ತೊಳೆದ ಬಟ್ಟೆಗಳು ಒಣಗಲು ವಾರಗಳ ಕಾಲ ಹಿಡಿಯುತ್ತಿದೆ. ಹಾಸಿಗೆ ಹೊದಿಕೆಗಳು ಮುಗ್ಗು ಹಿಡಿಯುತ್ತಿವೆ ಎಂಬ ದೂರು ಮಹಿಳೆಯರಿಂದ ಕೇಳಿ ಬರುತ್ತಿದೆ. ಒಟ್ಟಾರೆ ಈ ಬಾರಿಯ ಮಳೆಗಾಲ ಮಲೆನಾಡಗರಿಗೆ ಜಿಗುಪ್ಸೆ ಹಿಡಿಸಿರುವುದರಲ್ಲಿ ಎರಡು ಮಾತಿಲ್ಲ.

------------- * ಹೇಳಿಕೆ1

ಯಾರಿಗೆ ಬೇಕು ಈ ಮಳೆ, ಪಿರಿಪಿರಿ ಮಳೆಯಿಂದ ಎಲ್ಲವು ರೋಗ ಮಯವಾಗುತ್ತಿದೆ. ಸದ್ಯ ಮಳೆ ನಿಂತರೆ ಸಾಕು ಎನ್ನುವಂತಾಗಿದೆ. - ಹೀತು ನಾಗರ, ಬೆಳೆಗಾರ * ಹೇಳಿಕೆ2 ಈ ಬಾರಿ ತಾಲೂಕಿನಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಬೆಳಗೋಡು ಹೋಬಳಿಯಲ್ಲಿ ಮಳೆ ಕೊರತೆ ಎದುರಾಗಿದ್ದರೆ ಹೆತ್ತೂರು ಹೋಬಳಿಯಲ್ಲಿ ಎರಡು ಪಟ್ಟು ಅಧಿಕ ಮಳೆಯಾಗಿರುವುದರಿಂದ ಬೆಳೆಗಳನ್ನು ಉಳಿಸಿಕೊಳ್ಳುವುದು ಅಸಾಧ್ಯ ಎಂಬ ಪರಿಸ್ಥಿತಿ ಸೃಷ್ಟಿಯಾಗಿದೆ. - ಪ್ರಕಾಶ್ ಕುಮಾರ್, ಸಹಾಯಕ ನಿರ್ದೇಶಕ ಕೃಷಿ ಇಲಾಖೆ (7ಎಚ್ಎಸ್ಎನ್8ಎ)