ಹೊಳೆಮಲ್ಲೇಶ್ವರಸ್ವಾಮಿ ದೇವಸ್ಥಾನ ಸಮೀಪ ಹೇಮಾವತಿ ನದಿಯಲ್ಲಿ ಆದಿಚಂಚುನಗಿರಿಮಠದ ಶ್ರೀ ಶಂಭುನಾಥ ಸ್ವಾಮೀಜಿ ಹಾಗೂ ತೆಂಕಲಗೋಡುಮಠದ ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವದಲ್ಲಿ ಎರಡನೇ ವರ್ಷದ ಗಂಗಾರತಿ ಆಯೋಜಿಸಲಾಗಿತ್ತು. ಈ ವೇಳೆ ಮಾತನಾಡಿದ ಶ್ರೀ ಶಂಭುನಾಥ ಸ್ವಾಮೀಜಿ ಲೋಕಕಲ್ಯಾಣಕ್ಕಾಗಿ ಗಂಗಾರತಿ ಆಯೋಜಿಸಲಾಗಿದ್ದು, ಈ ರೀತಿಯ ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆಯಿಂದ ಗ್ರಾಮಕ್ಕೆ ಒಳಿತಾಗಲಿದೆ. ವಿದ್ಯಾವಂತರು ಹಾಗೂ ಬುದ್ಧಿವಂತರಿಂದ ನಾಡಿಗೆ ದ್ರೋಹವಾಗಬಾರದು. ಮನುಷ್ಯ ಜನ್ಮದಲ್ಲಿ ಪುಣ್ಯ ಕೆಲಸ ಮಾಡುವುದರಿಂದ ಮೋಕ್ಷ ದೊರೆಯಲಿದೆ ಎಂದರು.

ಕನ್ನಡಪ್ರಭ ವಾರ್ತೆ ಸಕಲೇಶಪುರ

ಪಟ್ಟಣದ ಆರಾಧ್ಯ ದೈವ ಶ್ರೀ ಸಕಲೇಶ್ವರಸ್ವಾಮಿ ದಿವ್ಯ ರಥೋತ್ಸವ ಸೋಮವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಆದ್ಧೂರಿಯಾಗಿ ಜರುಗಿತು.ಸಕಲೇಶ್ವರಸ್ವಾಮಿ ದೇವಸ್ಥಾನದಲ್ಲಿ ಕಳೆದ ಎರಡು ದಿನಗಳ ಕಾಲ ನಡೆದ ಪೂಜಾ ಕೈಂಕರ್ಯದ ನಂತರ ಬ್ರಹ್ಮರಥೋತ್ಸವಕ್ಕೆ ಶಾಸಕ ಸಿಮೆಂಟ್ ಮಂಜು ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ಪಟ್ಟಣದ ಬ್ರಾಹ್ಮಣರ ಬೀದಿಯಲ್ಲಿ ಸಾಗಿದ ರಥವನ್ನು ಸಾವಿರಾರು ಭಕ್ತರು ಕಣ್ತುಂಬಿಕೊಂಡರು. ಭಾನುವಾರ ಸಂಜೆ ಹೊಳೆಮಲ್ಲೇಶ್ವರಸ್ವಾಮಿ ದೇವಸ್ಥಾನ ಸಮೀಪ ಹೇಮಾವತಿ ನದಿಯಲ್ಲಿ ಆದಿಚಂಚುನಗಿರಿಮಠದ ಶ್ರೀ ಶಂಭುನಾಥ ಸ್ವಾಮೀಜಿ ಹಾಗೂ ತೆಂಕಲಗೋಡುಮಠದ ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವದಲ್ಲಿ ಎರಡನೇ ವರ್ಷದ ಗಂಗಾರತಿ ಆಯೋಜಿಸಲಾಗಿತ್ತು. ಈ ವೇಳೆ ಮಾತನಾಡಿದ ಶ್ರೀ ಶಂಭುನಾಥ ಸ್ವಾಮೀಜಿ ಲೋಕಕಲ್ಯಾಣಕ್ಕಾಗಿ ಗಂಗಾರತಿ ಆಯೋಜಿಸಲಾಗಿದ್ದು, ಈ ರೀತಿಯ ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆಯಿಂದ ಗ್ರಾಮಕ್ಕೆ ಒಳಿತಾಗಲಿದೆ. ವಿದ್ಯಾವಂತರು ಹಾಗೂ ಬುದ್ಧಿವಂತರಿಂದ ನಾಡಿಗೆ ದ್ರೋಹವಾಗಬಾರದು. ಮನುಷ್ಯ ಜನ್ಮದಲ್ಲಿ ಪುಣ್ಯ ಕೆಲಸ ಮಾಡುವುದರಿಂದ ಮೋಕ್ಷ ದೊರೆಯಲಿದೆ ಎಂದರು.ತೆಂಕಲಗೋಡು ಮಠದ ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಪಂಚಭೂತಗಳನ್ನು ಪೂಜಿಸುವುದನ್ನು ನಾವು ಅನಾದಿಕಾಲದಿಂದ ನಡೆಸಿಕೊಂಡು ಬಂದಿದ್ದೆವೆ. ಹಿಂದೂ ಧರ್ಮವೆಂದರೆ ಜೀವನದ ಒಳಿತು ಕೇಡುಕುಗಳನ್ನು ತಿಳಿಸುವ ಒಂದು ಪದ್ಧತಿ. ಧರ್ಮದ ಸಾರವನ್ನು ಅರಿತವನು ಎಂದಿಗೂ ತಪ್ಪು ಮಾಡುವುದಿಲ್ಲ ಎಂದರು. ಈ ವೇಳೆ ಶಾಸಕ ಸಿಮೆಂಟ್ ಮಂಜು ಉಪಸ್ಥಿತರಿದ್ದರು. ಸೋಮವಾರ ಬ್ರಾಹಣ್ಮರ ಬೀದಿಯಲ್ಲಿ ರಥಕ್ಕೆ ಪೂಜೆ ಸಲ್ಲಿಸುವ ಮೂಲಕ ೧೨ ಗಂಟೆಗೆ ರಥ ಎಳೆಯಲು ಚಾಲನೆ ನೀಡಲಾಯಿತು. ಮಧ್ಯಾಹ್ನ ೩ ಗಂಟೆಗೆ ಪುರಭವನಕ್ಕೆ ಎಳೆದು ತರಲಾದ ರಥಕ್ಕೆ ಸಾವಿರಾರು ಭಕ್ತಾದಿಗಳು ಬಾಳೆಹಣ್ಣು ಎಸೆದು ಹಣ್ಣುಕಾಯಿ ಸಮರ್ಪಿಸುವ ಮೂಲಕ ದೇವರ ಕೃಪೆಗೆ ಪಾತ್ರರಾದರು.

ರಥೋತ್ಸವದ ಹಿನ್ನಲೆಯಲ್ಲಿ ಪಟ್ಟಣದ ಮುಖ್ಯಬೀದಿಯಲ್ಲಿ ಮಹಿಳೆಯರು ರಂಗೋಲಿ ಬಿಡಿಸುವ ಮೂಲಕ ತಳಿರುತೋರಣ ಕಟ್ಟುವ ಮೂಲಕ ಶೃಂಗರಿಸಿದ್ದರು. ತಾಲೂಕು ಆಡಳಿತ ವಿದ್ಯುತ್‌ ಅಲಂಕಾರ ಮಾಡುವ ಮೂಲಕ ಪಟ್ಟಣದ ಮುಖ್ಯಬೀದಿಯ ಮೆರುಗು ಹೆಚ್ಚಿಸಿತ್ತು. ಹಲವಾರು ಸಂಘಸಂಸ್ಥೆಗಳು ರಥೋತ್ಸವದ ಅಂಗವಾಗಿ ತಂಪುಪಾನೀಯ,ಲಘು ಉಪಹಾರ, ಊಟ ಬಡಿಸುವ ಮೂಲಕ ಭಕ್ತರ ದಾಹ ಹಾಗೂ ಹೊಟ್ಟೆಹಸಿವನ್ನು ನೀಗಿಸಿದರು. ರಥೋತ್ಸವದ ನೇತೃತ್ವವನ್ನು ಸಕಲೇಶ್ವರಸ್ವಾಮಿ ದೇವಸ್ಥಾನ ಆಡಳಿತ ಮಂಡಳಿಯ ಬ್ಯಾಕರವಳ್ಳಿ ಜಯಣ್ಣ, ರವಿಕುಮಾರ್, ಮಹೇಶ್ ಸೇರಿದಂತೆ ಹಲವರು ವಹಿಸಿದ್ದರು.