ಸಾರಾಂಶ
ಕನ್ನಡಪ್ರಭ ವಾರ್ತೆ, ಸಕಲೇಶಪುರ
ತಾಲೂಕಿನ ಊರಹಬ್ಬವೆನಿಸಿದ ಸಕಲೇಶ್ವರಸ್ವಾಮಿ ಬ್ರಹ್ಮ ರಥೋತ್ಸವದ ವಿಜೃಂಭಣೆಯಿಂದ ನಡೆಯಿತು.ಪ್ರತಿ ವರ್ಷದಂತೆ ಐದು ದಿನಗಳ ಕಾಲ ನಡೆಯಲಿರುವ ರಥೋತ್ಸವ ಕಾರ್ಯಕ್ರಮದ ಮೂರನೆ ದಿನ ಬ್ರಹ್ಮ ರಥೋತ್ಸವ ನಡೆಯುವುದು ಸಾಮಾನ್ಯವಾಗಿದ್ದು ಆಡುಭಾಷೆಯಲ್ಲಿ ಗಳಿಗೆ ತೇರು’ ಎಂದು ಕರೆಯಲಾಗುತ್ತದೆ. ಗಿರಿಜಾ ಕಲ್ಯಾಣ ಕಾರ್ಯಕ್ರಮ ದೇವಸ್ಥಾನದಲ್ಲಿ ನಡೆಯಿತು. ರಥೋತ್ಸವಕ್ಕೂ ಮೊದಲು ಉತ್ಸವ ಮೂರ್ತಿಗಳಿಗೆ ಪಂಚಾಮತ ಅಭಿಷೇಕ, ವೇದ ಪಾರಾಯಣ, ಪೂರ್ವಕ ಪುಷ್ಪ ಗಂಧೋತ್ಸವ, ರಥ ಸನ್ನಿಧಿ ಪೂಜೆ ನಡೆಯಿತು. ನಂತರ ಉತ್ಸವ ಮೂರ್ತಿಗಳನ್ನು ಮಂಗಳ ವಾದ್ಯಗಳೊಂದಿಗೆ ದೇವಸ್ಥಾನದ ಸುತ್ತ ಪ್ರದಕ್ಷಿಣೆ ನಡೆಸಿ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ರಥದಲ್ಲಿ ದೇವರ ಪ್ರತಿಷ್ಠಾಪನೆ ವೇಳೆ ಪ್ರತಿವರ್ಷದಂತೆ ಆಕಾಶದಲ್ಲಿ ಮೂರು ಗರುಡ ಪಕ್ಷಿಗಳು ನಿಗದಿತ ಸಮಯಕ್ಕೆ ಆಗಮಿಸಿ ಹಾರಾಟ ನಡೆಸಿದ್ದು ಭಕ್ತರಲ್ಲಿ ಸಂತೋಷ ತಂದಿತು. ರಥಾರೋಹಣ ನಡೆದ ನಂತರ ಬಗೆ ಬಗೆಯಾಗಿ ಅಲಂಕರಿಸಿದ್ದ ರಥವನ್ನು ಭಕ್ತರ ಹರ್ಷೋದ್ಘಾರದೊಂದಿಗೆ ಎಳೆಯಲಾಯಿತು.
ದೇವಸ್ಥಾನ ಬೀದಿಯಲ್ಲಿ ದೇವರ ಉತ್ಸವ ಮೂರ್ತಿ ಸಾಗುವಾಗ ಮಹಿಳೆಯರು ತಮ್ಮ ಮನೆಯಂಗಳಕ್ಕೆ ಅಡ್ಡನೀರು ಹಾಕಿ ಸ್ವಾಗತಿಸಿದರು. ರಸ್ತೆ ತುಂಬೆ ಚಿತ್ತಾಕರ್ಷಕವಾದ ದೊಡ್ಡ ರಂಗೋಲಿಗಳು ರಥೋತ್ಸವಕ್ಕೆ ಮತ್ತಷ್ಟು ಕಳೆ ಕಟ್ಟಿತ್ತು. ಬ್ರಹ್ಮ ರಥೋತ್ಸವ ಸಾಂಕೇತಿಕ ರಥೋತ್ಸವವಾಗಿದ್ದು ದೇವಸ್ಥಾನದಿಂದ ಸ್ವಲ್ಪ ದೂರ ಎಳೆದು ನಿಲ್ಲಿಸಲಾಗುತ್ತದೆ ಮುಂದುವರಿದಂತೆ ಗುರುವಾರ ದಿವ್ಯ ರಥೋತ್ಸವ ನಡೆಯಲಿದ್ದು, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಉತ್ಸವ ನಡೆಸಲಾಗುವುದು.ಬಹ್ಮ ರಥೋತ್ಸವದ ದಿನ ಸಣ್ಣ ಕೈಗಾರಿಕಾ ಉದ್ಯಮಿಗಳ ಸಂಘ ಸೇರಿದಂತೆ ಹಲವು ಭಕ್ತಾಧಿಗಳ ಮನೆಯಿಂದ ಭಕ್ತರಿಗಾಗಿ ತಂಪು ಪಾನಿಯ, ಪ್ರಸಾದ, ಪಾನಕ, ಮಜ್ಜಿಗೆ ವಿತರಿಸಲಾಯಿತು. ರಥೋತ್ಸವಕ್ಕೆ ಬಂದಿದ್ದ ಭಕ್ತರು ಇಷ್ಟಾರ್ಥ ಸಿದ್ಧಿಗಾಗಿ ಮಂಗಳ ದ್ರವ್ಯಗಳನ್ನು ನೀಡಿ ಪೂಜೆ ಸಲ್ಲಿಸಿದರೆ ಯುವಕರು ರಥದ ಕಳಶಕ್ಕೆ ಬಾಳೆಹಣ್ಣು ಹೊಡೆಯುವ ಮುಖಾಂತರ ಸಂಭ್ರಮ ಆಚರಿಸಿದರು.
ದೇವಸ್ಥಾನ ಸಮಿತಿ, ಭಕ್ತ ಮಂಡಳಿ ಹಾಗೂ ರಥೋತ್ಸವ ವ್ಯವಸ್ಥಾಪನಾ ಸಮಿತಿ ಪದಾಧಿಕಾರಿಗಳು ಬಹ್ಮ ರಥೋತ್ಸವದ ಉಸ್ತುವಾರಿ ನೋಡಿಕೊಂಡರು. ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಶಾಸಕ ಸಿಮೆಂಟ್ ಮಂಜು ತಮ್ಮ ಧರ್ಮ ಪತ್ನಿ ಪ್ರತಿಭಾ ಮಂಜುನಾಥ್ ಜೊತೆ ರಥವನ್ನು ಎಳೆಯುವ ಮುಖಾಂತರ ರಥೋತ್ಸವಕ್ಕೆ ಚಾಲನೆ ನೀಡಿದರು. ಮಾಜಿ ಶಾಸಕ ಎಚ್. ಕೆ ಕುಮಾರಸ್ವಾಮಿ, ಜಿ.ಪಂ ಮಾಜಿ ಸದಸ್ಯೆ ಚಂಚಲಾ ಕುಮಾರಸ್ವಾಮಿ, ಕಾಂಗ್ರೆಸ್ ಮುಖಂಡ ಮುರುಳಿಮೋಹನ್, ಪುರಸಭಾ ಅಧಕ್ಷೆ ಜ್ಯೋತಿ ರಾಜ್‌ಕುಮಾರ್, ತಹಸೀಲ್ದಾರ್ ಮೇಘನಾ, ಹಿಂದೂ ಮುಖಂಡ ರಘು ಹಾಗೂ ದೇವಸ್ಥಾನದ ಪದಾಧಿಕಾರಿಗಳು ಇದ್ದರು.ಸಕಲೇಶ್ವರಸ್ವಾಮಿ ರಥೋತ್ಸವದ ಹಿನ್ನೆಲೆಯಲ್ಲಿ ೨೦ಸಾವಿರಕ್ಕೂ ಹೆಚ್ಚು ಭಕ್ತಾಧಿಗಳು ಆಗಮಿಸುವುದರಿಂದ ಸುಗಮ ವಾಹನ ಸಂಚಾರಕ್ಕಾಗಿ ಬೈಪಾಸ್ ರಸ್ತೆಯಲ್ಲಿ ಎಲ್ಲಾ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದ್ದು ಪಟ್ಟಣದ ಮುಖ್ಯ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ