ಸಾರಾಂಶ
ಹನೂರು: ಲೋಕಸಭಾ ಚುನಾವಣೆ ನಾಳೆ ನಡೆಯಲಿರುವ ಮತದಾನ ಕೇಂದ್ರಗಳನ್ನು ವಿಶೇಷವಾಗಿ ಮಹಿಳೆಯರಿಗೆ ಸಖೀ ಮತಗಟ್ಟೆ ಹಾಗೂ ರೈತರನ್ನು ಉತ್ತೇಜನ ನೀಡುವ ನಿಟ್ಟಿನಲ್ಲಿ ಅನ್ನದಾತರ ಮತಗಟ್ಟೆ ಕೇಂದ್ರ ತೆರೆದು ಗಮನ ಸೆಳೆಯಲಾಗಿದೆ. ಪಟ್ಟಣದ ಬಿಎಂಜಿ ಶಾಲೆಯಲ್ಲಿ ನೂರರ ಮತಗಟ್ಟೆಯನ್ನು ವಿಶೇಷವಾಗಿ ಮಹಿಳೆಯರಿಗೆ ತೆರೆಯಲಾಗಿದ್ದು ಜೊತೆಗೆ ಕೌದಳ್ಳಿ 189ರ ಮತಗಟ್ಟೆ ಹಾಗೂ ಮಂಚಾಪುರ ಗ್ರಾಮದ 196 ಮತಗಟ್ಟೆ ಮತ್ತು ಪಿಜಿ ಪಾಳ್ಯ ಗ್ರಾಮದ 239ರಲ್ಲಿ ಸಖೀ ಮತಗಟ್ಟೆಗಳನ್ನು ತೆರೆಯುವ ಮೂಲಕ ತಳಿರು ತೋರಣಗಳಿಂದ ಸಿಂಗರಿಸಿ ವಿಶೇಷವಾಗಿ ಗುಲಾಬಿ ಬಣ್ಣ ಬಳಿದು ಮತಗಟ್ಟ ಕೇಂದ್ರಕ್ಕೆ ಮಹಿಳೆಯರ ಮತದಾನ ಮಾಡಲು ಭವ್ಯ ಸ್ವಾಗತ ಕೋರುವ ಮೂಲಕ ವಿಶೇಷವಾಗಿ ಸಿದ್ಧಪಡಿಸಲಾಗಿದೆ.
ಅನ್ನದಾತರ ಮತಗಟ್ಟೆ ವಿಶೇಷ ಅಲಂಕಾರ:ತಾಲೂಕಿನ ಚಿಕ್ಕಮಾಲಾಪುರದ ಗ್ರಾಮದ 247ರ ಮತಗಟ್ಟೆಯಲ್ಲಿ ಅನ್ನದಾತ ರೈತರ ಮತಗಟ್ಟೆ ತೆರೆಯಲಾಗಿದ್ದು ತಳಿರು ತೋರಣ ಹಸಿರು ಹಾಗೂ ಹೂಗಳಿಂದ ಸಿಂಗರಿಸಿ ಬಣ್ಣದ ಚಿತ್ತಾರ ಬಿಡುವ ಮೂಲಕ ವಿಶೇಷವಾಗಿ ಧಾನ್ಯಗಳಿಂದ ಸಿಂಗರಿಸಲಾದೆ.
ಮತ ಚಲಾಯಿಸಲು ಸಾರಿಗೆಗಾಗಿ ಮನವಿಹನೂರು: ಪಿಜಿ ಪಾಳ್ಯ ಗ್ರಾಪಂ ವ್ಯಾಪ್ತಿಯ ಗೊಂಬೆಗಲ್ಲು ಹಾಗೂ ಕೆರೆದಿಂಬ ಗ್ರಾಮದ ಮತದಾರರಿಗೆ ಮತ ಚಲಾಯಿಸಲು ಸಾರಿಗೆ ವ್ಯವಸ್ಥೆ ಕಲ್ಪಿಸುವಂತೆ ಸೋಲಿಗ ಸಮುದಾಯದ ಸಂಘದ ವತಿಯಿಂದ ಸಹಾಯಕ ಚುನಾವಣಾ ಅಧಿಕಾರಿ ಮಲ್ಲಿಕಾರ್ಜುನ್ ಅವರಿಗೆ ಗುರುವಾರ ಮನವಿ ಸಲ್ಲಿಸಲಾಯಿತು. ಪಿಜಿ ಪಾಳ್ಯ ಗ್ರಾಪಂ ವ್ಯಾಪ್ತಿಯ ಅತ್ತಿಖಾನೆಯ ಮತ ಕೇಂದ್ರಕ್ಕೆ ಗೊಂಬೆಗಲ್ಲು ಹಾಗೂ ಕೆರೆದಿಂಬ ಗ್ರಾಮದಿಂದ ಸುಮಾರು 200ಕ್ಕೂ ಹೆಚ್ಚು ಮತದಾರರು ಪ್ರತಿ ಬಾರಿ ಮತ ಚಲಾವಣೆ ಮಾಡಬೇಕೆಂದರೆ ದಟ್ಟ ಕಾನನದ ನಡುವೆ ಕಾಲ್ನಡಿಗೆಯಲ್ಲಿಯೇ ಸುಮಾರು 10 ಕಿ.ಮೀ ಆಗಮಿಸುತ್ತಾರೆ. ದಟ್ಟ ಕಾನನದ ನಡುವೆ ನಡೆದುಕೊಂಡು ಬರುವಾಗ ಕಾಡುಪ್ರಾಣಿಗಳ ಉಪಟಳದ ಜೊತೆಗೆ, ಬಿಸಿಲಿನ ತಾಪಮಾನ ಹೆಚ್ಚಾಗಿರುವುದರಿಂದ ವಯೋ ವೃದ್ಧರು ಅಂಗವಿಕಲರಿಗೆ, ತಾಯಂದಿರಿಗೆ ತೀವ್ರವಾದ ತೊಂದರೆಯಾಗಲಿದೆ. ಈ ದಿಸೆಯಲ್ಲಿ ಗೊಂಬೆಗಲ್ಲು, ಕೆರೆದಿಂಬ ಗ್ರಾಮಸ್ಥರಿಗೆ ಮತ ಚಲಾವಣೆ ಮಾಡಲು ವಾಹನದ ವ್ಯವಸ್ಥೆಯನ್ನು ಮಾಡಿ ಕೊಡುವಂತೆ ಈ ವೇಳೆ ಸೋಲಿಗ ಸಮುದಾಯದ ಸಂಘದ ಮಹದೇವ್ ಮನವಿ ಮಾಡಿದರು. ಈ ವೇಳೆ ಮನವಿ ಪತ್ರವನ್ನು ಸ್ವಿಕರಿಸಿದ ಸಹಾಯಕ ಚುನಾವಣೆ ಅಧಿಕಾರಿ ಮಲ್ಲಿಕಾರ್ಜುನ್ ಸಂಬಂಧಪಟ್ಟ ಅಧಿಕಾರಿಗಳಿಗೆ ತುರ್ತಾಗಿ ವಾಹನದ ವ್ಯವಸ್ಥೆ ಮಾಡುವಂತೆ ಸೂಚಿಸಿದರು. ಈ ವೇಳೆ ಪರಿಶಿಷ್ಟ ಪಂಗಡಗಳ ತಾಲೂಕು ಮಟ್ಟದ ಅಧಿಕಾರಿ ನವೀದ್ ಮಠದ್ ವಿವಿಧ ಅಧಿಕಾರಿಗಳು ಹಾಜರಿದ್ದರು.