ಸಾರಾಂಶ
ಪ್ರಯತ್ನ । ಕುಡಿಯುವ ನೀರು ಒದಗಿಸಿಲ್ಲ ಎಂದು ಓಟು ಬಹಿಷ್ಕರಿಸಿದ್ದ ನೆಲಗಳ್ಳಿ ಗ್ರಾಮಸ್ಥರು
ಕನ್ನಡಪ್ರಭ ವಾರ್ತೆ ಸಕಲೇಶಪುರಮತದಾನ ಬಹಿಷ್ಕರಿಸುವ ನಿರ್ಧಾರ ಪ್ರಕಟಿಸಿದ್ದ ಗ್ರಾಮಸ್ಥರ ಮನವೊಲಿಕೆಗೆ ತಾಲೂಕಿನ ಹಿರಿಯ ಅಧಿಕಾರಿಗಳು ಪ್ರಯತ್ನ ಆರಂಭಿಸಿದ್ದಾರೆ.
ತಾಲೂಕಿನ ದೇವಾಲದಕೆರೆ ಗ್ರಾಪಂ ವ್ಯಾಪ್ತಿಯ ನೆಲಗಳ್ಳಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರು ನೀಡುವ ಜಲಜೀವನ್ ಮಿಷನ್ ಯೋಜನೆಗೆ ಅರಣ್ಯ ಇಲಾಖೆ ಅಡ್ಡಿಪಡಿಸುತ್ತಿದೆ. ಇದರಿಂದಾಗಿ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಸ್ಥರಿಗೆ ಸಮಸ್ಯೆಯಾಗಿದ್ದು ಹಲವು ಕಿ.ಮೀ.ಗಳಿಂದ ಕುಡಿಯುವ ನೀರನ್ನು ತರಬೇಕಿದೆ. ಕಳೆದ ಎರಡು ವರ್ಷದ ಹಿಂದೆ ಕುಡಿಯುವ ನೀರಿನ ಸಮಸ್ಯೆ ತಪ್ಪಿಸುವ ನಿಟ್ಟಿನಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಕಾಮಗಾರಿ ಆರಂಭಿಸಲಾಗಿದೆ. ಆದರೆ, ಯೋಜನೆ ಪ್ರದೇಶ ಸೆಕ್ಷನ್ ೪ಕ್ಕೆ ಬರುತ್ತದೆ ಎಂಬ ಕಾರಣ ನೀಡಿ ಅರಣ್ಯ ಇಲಾಖೆ ಕಾಮಗಾರಿಗೆ ಅವಕಾಶ ನೀಡುತ್ತಿಲ್ಲ. ಈ ಸಂಬಂದ ಹಲವು ದೂರುಗಳನ್ನು ನೀಡಿದ್ದರೂ ಯಾವುದೆ ಪ್ರಯೋಜವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದರು.ಈ ಹಿನ್ನೆಲೆ ಅವರು ಲೋಕಸಭಾ ಚುನಾವಣೆ ಬಹಿಷ್ಕರಿಸುವ ನಿರ್ಧಾರ ಪ್ರಕಟಿಸಿದ್ದರು. ಇದರಿಂದ ಎಚ್ಚೆತ್ತ ಉಪ ವಿಭಾಗಾಧಿಕಾರಿ ಗುರುವಾರ ಗ್ರಾಮಕ್ಕೆ ತೆರಳಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆಯುವ ಮೂಲಕ ಕಾಮಗಾರಿಗೆ ಅವಕಾಶ ನೀಡಲಾಗುವುದು. ಆದ್ದರಿಂದ, ಮತದಾನ ಬಹಿಷ್ಕಾರದ ನಿರ್ಧಾರದಿಂದ ಹಿಂದೆ ಸರಿಯುವಂತೆ ಮನವಿ ಮಾಡಿದರು.
ಈ ವೇಳೆ ಮಾತನಾಡಿದ ಗ್ರಾಮಸ್ಥರು, ‘ಇಂತಹ ಹಲವು ಆಶ್ವಾಸನೆಗಳು ನಮಗೆ ದೊರೆತಿವೆ. ಆದರೆ, ಕಾರ್ಯಗತಗೊಂಡಿಲ್ಲ. ಲೋಕಸಭಾ ಚುನಾವಣೆಯ ಮತದಾನದ ದಿನದ ಒಳಗಾಗಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಕಾಮಗಾರಿಗೆ ಅವಕಾಶ ನೀಡುವ ಪತ್ರ ಗ್ರಾಮಸ್ಥರಿಗೆ ತಲುಪಿದರೆ ಮತದಾನ ಮಾಡಲಾಗುವುದು ಎಂದು ಪಟ್ಟುಹಿಡಿದರು. ಹೆತ್ತೂರು ಹೋಬಳಿ ಹಳ್ಳಿಯೂರು ಗ್ರಾಮಸ್ಥರು ಮತದಾನ ಬಹಿಷ್ಕಾರ ಮಾಡುವುದಾಗಿ ಪ್ರಕಟಿಸಿದ್ದರು.ಉಪ ವಿಭಾಗಾಧಿಕಾರಿ ಗ್ರಾಮಸ್ಥರೊಂದಿಗೆ ಮಾತನಾಡಿ ಜಲಜೀವನ್ ಮಿಷಿನ್ ಕಾಮಗಾರಿಗೆ ಅವಕಾಶ ಮಾಡಿಕೊಡಲಾಗುವುದು ಎಂಬ ಭರವಸೆ ನೀಡಿದ ನಂತರ ಮತದಾನ ಬಹಿಷ್ಕಾರದಿಂದ ಗ್ರಾಮಸ್ಥರು ಹಿಂದೆ ಸರಿದಿದ್ದಾರೆ. ಯಸಳೂರು ಹೋಬಳಿ ಹೊಸೂರು ಗ್ರಾಮಸ್ಥರು ಗ್ರಾಮದಲ್ಲಿ ನಡೆಯುತ್ತಿರುವ ಕರಿಕಲ್ಲು ಗಣಿಗಾರಿಕೆಯಿಂದ ಗ್ರಾಮದಲ್ಲಿ ತೀವ್ರರೂಪದ ಸಮಸ್ಯೆಗಳು ಸೃಷ್ಟಿಯಾಗುತ್ತಿವೆ. ಆದ್ದರಿಂದ, ಗಣಿಗಾರಿಕೆ ಸ್ಥಗಿತಗೊಳಿಸಬೇಕು. ತಪ್ಪಿದಲ್ಲಿ ಮತದಾನ ಬಹಿಷ್ಕಾರಿಸಲಾಗುವುದು ಎಂಬ ಬೆದರಿಕೆ ಒಡಿದ್ದರು. ಗ್ರಾಮಕ್ಕೆ ತೆರಳಿದ್ದ ಉಪ ವಿಭಾಗಾಧಿಕಾರಿ ತಾತ್ಕಲಿಕವಾಗಿ ಗಣಿಗಾರಿಕೆ ಸ್ಥಗಿತಗೊಳಿಸುವಂತೆ ಸಂಭಂದಪಟ್ಟ ಇಲಾಖೆಗೆ ಸೂಚನೆ ನೀಡುವ ಮೂಲಕ ಗ್ರಾಮಸ್ಥರ ಮನವೊಲಿಸಿದ್ದಾರೆ.
ಮತದಾನ ಬಹಿಷ್ಕಾರ ಪ್ರಕಟಿಸಿದ್ದ ನೆಲಗಳ್ಳಿ ಗ್ರಾಮಸ್ಥರೊಂದಿಗೆ ಉಪ ವಿಭಾಗಾಧಿಕಾರಿ ಡಾ.ಎಂ.ಕೆ ಶೃತಿ, ತಹಸೀಲ್ದಾರ್ ಮೇಘನಾ ಚರ್ಚೆ ನಡೆಸಿದರು. ಈ ವೇಳೆ ಹಲವು ಅಧಿಕಾರಿಗಳು ಇದ್ದರು.