ದುಬಾರೆ ಆನೆ ಶಿಬಿರದಲ್ಲಿ ನಡೆದ ಆಕಸ್ಮಿಕ ದುರ್ಘಟನೆಯ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಬಂದ್ ಆಗಿದ್ದ ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರ ಕೊನೆಗೂ ಸಾರ್ವಜನಿಕ ಪ್ರವೇಶಕ್ಕೆ ಮುಕ್ತವಾಗಿದ್ದು, ವೀಕ್ಷಣೆಗೆ ಅವಕಾಶದ ಮೊದಲ ದಿನವೇ 400ಕ್ಕೂ ಹೆಚ್ಚು ಪ್ರವಾಸಿಗರು ಸಕ್ರೇಬೈಲು ಆನೆ ಬಿಡಾರಕ್ಕೆ ಭೇಟಿ ನೀಡಿದ್ದಾರೆ.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ದುಬಾರೆ ಆನೆ ಶಿಬಿರದಲ್ಲಿ ನಡೆದ ಆಕಸ್ಮಿಕ ದುರ್ಘಟನೆಯ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಬಂದ್ ಆಗಿದ್ದ ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರ ಕೊನೆಗೂ ಸಾರ್ವಜನಿಕ ಪ್ರವೇಶಕ್ಕೆ ಮುಕ್ತವಾಗಿದ್ದು, ವೀಕ್ಷಣೆಗೆ ಅವಕಾಶದ ಮೊದಲ ದಿನವೇ 400ಕ್ಕೂ ಹೆಚ್ಚು ಪ್ರವಾಸಿಗರು ಸಕ್ರೇಬೈಲು ಆನೆ ಬಿಡಾರಕ್ಕೆ ಭೇಟಿ ನೀಡಿದ್ದಾರೆ.ಶನಿವಾರದಿಂದ ಸಕ್ರೆಬೈಲು ಆನೆ ಬಿಡಾರದಲ್ಲಿ ಪ್ರವೇಶ ಪುನರಾರಂಭವಾಗಿದೆ. ಏಪ್ರಿಲ್ 18ರಂದು ದುಬಾರೆ ಆನೆ ಶಿಬಿರದಲ್ಲಿ ನಡೆದ ಆಕಸ್ಮಿಕ ಘಟನೆಯಲ್ಲಿ ಓರ್ವ ಮಹಿಳೆ ಮೃತಪಟ್ಟಿದ್ದರು. ಈ ಘಟನೆ ಬಳಿಕ ಪ್ರವಾಸಿಗರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯದ ಎಲ್ಲ ಆನೆ ಶಿಬಿರಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡುವಂತೆ ಅರಣ್ಯ ಸಚಿವರು ಸೂಚಿಸಿದ್ದರು.
ಸಕ್ರೆಬೈಲು ಆನೆ ಬಿಡಾರವು ಶಿವಮೊಗ್ಗದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿದ್ದು, ಆನೆಗಳನ್ನು ಹತ್ತಿರದಿಂದ ವೀಕ್ಷಿಸುವ ಅವಕಾಶಕ್ಕಾಗಿ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಇದೀಗ ಹಲವು ತಿಂಗಳ ಬಳಿಕ ಶಿಬಿರ ಮತ್ತೆ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗುತ್ತಿರುವುದರಿಂದ ಪ್ರವಾಸಿಗರಲ್ಲಿ ಉತ್ಸಾಹ ಮೂಡಿದೆ.ಇದೀಗ ಹಲವು ಸುರಕ್ಷತಾ ಮಾರ್ಗಸೂಚಿಗಳನ್ನು ಜಾರಿಗೊಳಿಸುವ ಮೂಲಕ ಸಕ್ರೆಬೈಲು ಆನೆ ಬಿಡಾರವನ್ನು ಪುನರಾರಂಭಿಸಲಾಗಿದೆ. ಶಿಬಿರಕ್ಕೆ ಆಗಮಿಸುವ ಪ್ರವಾಸಿಗರು ಹಾಗೂ ಆನೆಗಳ ಸುರಕ್ಷತೆಗೆ ವಿಶೇಷ ಆದ್ಯತೆ ನೀಡಲಾಗಿದ್ದು, ಎರಡೂ ಗುಂಪುಗಳಿಗೆ ಪ್ರತ್ಯೇಕ ಮಾರ್ಗಗಳನ್ನು ಗುರುತಿಸಲಾಗಿದೆ.
ಮುಖ್ಯವಾಗಿ, ಸಾರ್ವಜನಿಕರು ಮತ್ತು ಆನೆಗಳ ನಡುವೆ ನೇರ ಸಂಪರ್ಕವಾಗದಂತೆ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಪ್ರವಾಸಿಗರು ಆನೆಗಳನ್ನು ವೀಕ್ಷಿಸುವ ಸಂದರ್ಭದಲ್ಲಿ ಅಹಿತಕರ ಘಟನೆಗಳು ಸಂಭವಿಸುವ ಸಾಧ್ಯತೆಯನ್ನು ಕಡಿಮೆ ಮಾಡಲು ಕ್ರಮ ಕೈಗೊಳ್ಳಲಾಗಿದೆ.ಪ್ರವಾಸಿಗರಿಗೆ ಅಗತ್ಯ ಮಾಹಿತಿ ನೀಡಲು ಹಾಗೂ ಸುರಕ್ಷತಾ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲು ಶಿಬಿರದ ವಿವಿಧೆಡೆ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ. ಶಿಬಿರಕ್ಕೆ ಭೇಟಿ ನೀಡುವವರು ಅರಣ್ಯ ಇಲಾಖೆ ಸೂಚಿಸಿರುವ ನಿಯಮಗಳು ಮತ್ತು ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿದೆ.
ಅಧಿಕಾರಿಗಳು ಪ್ರವಾಸಿಗರ ಸುರಕ್ಷತೆಗೆ ಮಾರ್ಗಸೂಚಿ ಪಾಲನೆ ಮಾಡಿದ್ದಾರೆ. ಪ್ರವಾಸಿಗರ ವೀಕ್ಷಣಾ ಪ್ರದೇಶದಲ್ಲಿ ಪ್ರತಿನಿತ್ಯ 8 ರಿಂದ 10 ಆನೆಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಆನೆಗಳ ಮೈ ತೊಳೆಯುವ ಪ್ರದೇಶಕ್ಕೆ ಪ್ರವಾಸಿಗರಿಗೆ ಸಂಪೂರ್ಣ ನಿರ್ಬಂಧ ಇದೆ. ಹೊಸ ಮಾರ್ಗಸೂಚಿಯಂತೆ ಆನೆಗಳ ವೀಕ್ಷಣೆಗೆ ಪ್ರವಾಸಿಗರಿಗೆ ದೂರದಿಂದ ಮಾತ್ರ ಅವಕಾಶ ನೀಡಲಾಗಿದೆ.