ಸಾರಾಂಶ
ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರವಿದ್ದು ಅಲ್ಲಿ ರೈತರ ₹ 2 ಲಕ್ಷ, ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ₹ 3 ಲಕ್ಷ ವರೆಗೆ ಸಾಲಮನ್ನಾ ಮಾಡಲಾಗಿದೆ. ಕರ್ನಾಟಕದಲ್ಲೂ ಕಾಂಗ್ರೆಸ್ ಸರ್ಕಾರವಿದ್ದು ಸಾಲಮಾನ್ನಾ ಏತಕ್ಕೆ ಮಾಡುತ್ತಿಲ್ಲ.
ಅಳ್ನಾವರ:
ರೈತರ ಸಾಲಮನ್ನಾ ವಿಚಾರದಲ್ಲಿ ಶುಕ್ರವಾರ ಇಲ್ಲಿಯ ಹುಲಿಕೇರಿಯ ಇಂದಿರಮ್ಮನ ಕೆರೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲು ಬಂದಿದ್ದ ಸಚಿವ ಸಂತೋಷ ಲಾಡ್ ಅವರೊಂದಿಗೆ ರೈತ ಮುಖಂಡನೋರ್ವ ವಾಗ್ವಾದ ನಡೆಸಿರುವ ಪ್ರಸಂಗ ನಡೆಯಿತು.ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರವಿದ್ದು ಅಲ್ಲಿ ರೈತರ ₹ 2 ಲಕ್ಷ, ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ₹ 3 ಲಕ್ಷ ವರೆಗೆ ಸಾಲಮನ್ನಾ ಮಾಡಲಾಗಿದೆ. ಕರ್ನಾಟಕದಲ್ಲೂ ಕಾಂಗ್ರೆಸ್ ಸರ್ಕಾರವಿದ್ದು ಸಾಲಮಾನ್ನಾ ಏತಕ್ಕೆ ಮಾಡುತ್ತಿಲ್ಲ ಎಂದು ರೈತ ಮುಖಂಡ ರವಿರಾಜ ಕಂಬಳಿ, ಲಾಡ್ ಅವರನ್ನು ಪ್ರಶ್ನಿಸಿದರು.
ಈ ಪ್ರಶ್ನೆಗೆ ತುಸು ತಾಳ್ಮೆ ಕಳೆದುಕೊಂಡಂತೆ ಕಂಡ ಲಾಡ್, ರೈತ ಮುಖಂಡನ ಜತೆಗೆ ಏರುಧ್ವನಿಯಲ್ಲಿ ತಿರುಗೇಟು ನೀಡಿ, ಇಲ್ಲಿ ಮಾಧ್ಯಮದವರು ಇದ್ದಾರೆ, ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ₹ 73 ಸಾವಿರ ಕೋಟಿ ರೈತರ ಸಾಲಮನ್ನಾ ಮಾಡಿದೆ. ಕೇಂದ್ರದ ಬಿಜೆಪಿ ಸರ್ಕಾರ ಎಷ್ಟು ಸಾಲ ಮನ್ನಾ ಮಾಡಿದೆ ಹೇಳಿ? ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಹಿಂದಿನ ಅವಧಿಯಲ್ಲಿ ₹ 8,165 ಕೋಟಿ ಸಾಲಮನ್ನಾ ಮಾಡಿದ್ದಾರೆ. ಸಹಕಾರ ಕ್ಷೇತ್ರದಲ್ಲಿ ಪ್ರತಿ ರೈತನ ₹ 50 ಸಾವಿರ ಸಾಲಮನ್ನಾ ಮಾಡಿದೆ ಎಂದರು.ಸರ್, ಇದೆಲ್ಲವು ಹಳೆ ಕಥೆ. ಈಗ ಬೇಡ ಎಂದು ರೈತ ಮುಖಂಡ ಕಂಬಳಿ ಹೇಳುವ ತಡವೇ, ಕೈ ಸರ್ಕಾರ ಮಾಡಿದ್ದನ್ನು ರೈತರು ಏತಕ್ಕೆ ಹೇಳುವುದಿಲ್ಲ. ಮೊದಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಿರಿ. ರಾಜಕೀಯ ಮಾತನಾಡಬೇಡಿ. ಬಿಜೆಪಿ ಸರ್ಕಾರದ ಪ್ರಣಾಳಿಕೆಯಲ್ಲಿ ರೈತರ ಸಾಲಮನ್ನಾ ಎಂದು ಹೇಳಿತ್ತು. ಆದರೆ, ಮಾಡಿಲ್ಲ ಅಂದರು.
ರೈತರು ಸಾಲಮನ್ನಾ ಮಾಡಿ ಎಂದು ಮನವಿ ಮಾಡಿದರೆ, ಒಪ್ಪೋಣ. ಈ ವಿಚಾರದಲ್ಲಿ ಕಾಂಗ್ರೆಸ್ ಪಕ್ಷವನ್ನು ಗುರಿಯಾಗಿಸುವುದು ಬೇಡ. 19 ರಾಜ್ಯಗಳಲ್ಲಿ ಬಿಜೆಪಿ ಸರ್ಕಾರವಿದ್ದು, ಕೇಂದ್ರದಲ್ಲಿ 11 ವರ್ಷದಿಂದ ಆಡಳಿತದಲ್ಲಿದೆ. ಯಾವ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರೈತರ ಸಾಲಮನ್ನಾ ಮಾಡಿದೆ ಹೇಳಿ? ಎಂದು ಪ್ರಶ್ನಿಸಿದರು.